Asian Games: ಪ್ರಸಕ್ತ ಆತಿಥೇಯ ಜಪಾನ್ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಇಂದು ನಡೆದ ಪುರುಷರ ಕ್ರಿಕೆಟ್‌ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಎದುರು ಟೀಮ್ ಇಂಡಿಯಾ 124 ರನ್ಗಳ ಭರ್ಜರಿ ಜಯ ಗಳಿಸಿತು. ಈ ಮೂಲಕ ಶ್ರೇಯಸ್ ಅಯ್ಯರ್ ಪಡೆ ಫೈನಲ್ಗೆ ಲಗ್ಗೆಯಿಟ್ಟಿದ್ದು, ಚಿನ್ನದ ಪದಕ್ಕಾಗಿ ಬದ್ಧ ವೈರಿ ಪಾಕಿಸ್ತಾನದ ಜತೆ ಸೆಣಸಲಿದೆ.
ನಿಶಿನ್ ಮೈದಾನದಲ್ಲಿ ನಡೆದ ಇಂದಿನ ಸೆಮಿಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು. ಆರಂಭಿಕ ಬ್ಯಾಟರ್ಗಳಾಗಿ ಕಣಕ್ಕಿಳಿದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ (21 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್) 38 ರನ್ ಮತ್ತು ಅಭಿಷೇಕ್ ಶರ್ಮಾ ಕೇವಲ 7 ರನ್ಗೆ ಔಟ್ ಆಗಿ ನಿರಾಶೆ ಮೂಡಿಸಿದರು. ಅವರಂತೆಯೇ, ಸಂಜು ಸ್ಯಾಮ್ಸನ್ 7 ರನ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಕೇವಲ 13 ರನ್ ಗಳಿಸಿ ತಂಡದ ಸ್ಕೋರ್ ಹೆಚ್ಚಿಸುವಲ್ಲಿ ಸಂಪೂರ್ಣ ವಿಫಲರಾದರು.
ಟಾಪ್ ಮತ್ತು ಮಿಡಲ್ ಆರ್ಡರ್ ಬ್ಯಾಟರ್ಗಳೇ ಕೈಕೊಟ್ಟರೂ, ಕ್ರೀಸ್ಗೆ ಅಂಟಿ ನಿಂತ ಇಶಾನ್ ಕಿಶನ್ ಮಾತ್ರ, ಟೀಮ್ ಇಂಡಿಯಾದ ಸ್ಕೋರ್ 150 ಕೆಳಗೆ ಇಳಿಯಲು ಬಿಡಲಿಲ್ಲ. ಇಡೀ ಇನ್ನಿಂಗ್ಸ್ ಅನ್ನು ಕೊನೇ ಕ್ಷಣಗಳಲ್ಲಿ ಸಂಪೂರ್ಣವಾಗಿ ಬದಲಾಯಿಸಿದ ಇಶಾನ್, ಕೇವಲ 46 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 80 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಗುರಿಯನ್ನು ಬೆನ್ನತ್ತಿದ ಲಂಕಾ ಬ್ಯಾಟರ್ಗಳ ಪೈಕಿ ಆರು ಮಂದಿ ಡಕ್ಔಟ್ ಆಗಿ ಪೆವಿಲಿಯನ್ ಹಾದಿ ಹಿಡಿದಿದ್ದೇ ತಂಡದ ಹೀನಾಯ ಸೋಲು ಮತ್ತು ಏಷ್ಯನ್ ಗೇಮ್ಸ್ನಲ್ಲಿ ಚಿನ್ನ ಗೆಲ್ಲುವ ಅವಕಾಶವನ್ನು ಕಸಿಯಿತು.
170 ರನ್ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ ಲಂಕಾ ಬ್ಯಾಟ್ಸ್ಮನ್ಗಳ ಪೈಕಿ ಒಬ್ಬರಂತೆ ಒಬ್ಬರು ಬಹುಬೇಗನೇ ಪೆವಿಲಿಯನ್ ಹಾದಿ ಹಿಡಿಯುವ ಮೂಲಕ ಟೀಮ್ ಇಂಡಿಯಾಗೆ ಪೈಪೋಟಿಯೇ ಕೊಡದೆ ಸುಲಭವಾಗಿ ಸೋಲಿಗೆ ಹತ್ತಿರವಾದರು. ಒಟ್ಟು ಆರು ಲಂಕಾ ಬ್ಯಾಟರ್ಗಳು ಶೂನ್ಯಕ್ಕೆ ಔಟ್ ಆಗಿ ತಂಡದ ಫೈನಲ್ ಆಸೆಗೆ ತಣ್ಣೀರೆರಚಿದರು. ಸಿನಿತ್ ಜಯಸೂರ್ಯ (0), ಲಸಿತ್ ಕ್ರೂಸ್ಪುಲ್ಲೆ (0), ಸೋಹೆನ್ ಡಿ ಲೆವಿರಾ (0), ಆಶೆನ್ ಬಂಡಾರ (0), ವಿಜಯಕಾಂತ್ ವಿಸ್ಮಕಾಂತ್ (0*), ಬಿನುರಾ ಫೆರ್ನಾಡೋ (0) ಬ್ಯಾಟ್ಸ್ಮನ್ಗಳು ಕೇವಲ ಶೂನ್ಯ ರನ್ ಗಳಿಸಿದರು.
ಏಷ್ಯನ್ ಗೇಮ್ಸ್ನಂತ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಈ ಮಟ್ಟಿಗಿನ ಕಳಪೆ ಬ್ಯಾಟಿಂಗ್ ನೀಡಿದ ಲಂಕಾ ಪಡೆಗೆ ಸದ್ಯ ಭಾರಿ ಮುಖಭಂಗ ಉಂಟಾಗಿದೆ. ಈ ಗೆಲುವಿನ ಮೂಲಕ ಅತ್ತ ಶ್ರೇಯಸ್ ಅಯ್ಯರ್ ಪಡೆ, ಪಾಕಿಸ್ತಾನವನ್ನು ಇದೇ ರೀತಿ ಬಗ್ಗುಬಡಿದು ಚಿನ್ನದ ಪದಕಕ್ಕೆ ಮುತ್ತಿಡಲು ತುದಿಗಾಲಿನಲ್ಲಿ ನಿಂತಿದೆ. ಅ.03ರಂದು ಪುರುಷರ ಕ್ರಿಕೆಟ್ ಫೈನಲ್ ಪಂದ್ಯ ನಡೆಯಲಿದೆ ಎಂದು ತಿಳಿಸಲಾಗಿದೆ,(ಏಜೆನ್ಸೀಸ್).