

ನಗೋಯಾ: ಏಷ್ಯಾಡ್ ಬ್ಯಾಡ್ಮಿಂಟನ್ ಸ್ಪರ್ಧೆಯ ವೈಯಕ್ತಿಕ ವಿಭಾಗದಲ್ಲಿ ಭಾರತೀಯ ಷಟ್ಲರ್ಗಳು ಪದಕ ಗೆಲುವಿಲ್ಲದೆ ಅಭಿಯಾನ ಮುಕ್ತಾಯಗೊಳಿಸಿದ್ದಾರೆ. ಇದರಿಂದ ಪುರುಷರ ತಂಡ ವಿಭಾಗದಲ್ಲಿ ಗೆದ್ದ ಏಕಮಾತ್ರ ಕಂಚಿನ ಪದಕಕ್ಕೆ ಭಾರತೀಯ ಬ್ಯಾಡ್ಮಿಂಟನ್ ತಂಡ ತೃಪ್ತಿಪಟ್ಟಿದೆ.
ಮಹಿಳೆಯರ ಸಿಂಗಲ್ಸ್ ಸ್ಪರ್ಧೆಯಲ್ಲಿ ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು ಮತ್ತು ಯುವ ಆಟಗಾರ್ತಿ ಉನ್ನತಿ ಹೂಡಾ ಕ್ವಾರ್ಟರ್ಫೈನಲ್ನಲ್ಲಿ ಮುಗ್ಗರಿಸಿದರು. ಮಹಿಳಾ ಡಬಲ್ಸ್ನಲ್ಲಿ ತ್ರೀಸಾ ಜೋಲಿ-ಗಾಯತ್ರಿ ಗೋಪಿಚಂದ್, ಮಿಶ್ರ ಡಬಲ್ಸ್ನಲ್ಲಿ ತನಿಷಾ ಕ್ರಾಸ್ಟೋ-ಧ್ರುವ ಕಪಿಲ ಕೂಡ 8ರ ಘಟ್ಟದಲ್ಲೇ ಹೊರಬೀಳುವುದರೊಂದಿಗೆ ಈ ಬಾರಿ ಭಾರತ ಯಾವ ಷಟ್ಲರ್ ಕೂಡ ಕನಿಷ್ಠ ಸೆಮಿಫೈನಲ್ ಹಂತಕ್ಕೇರುವಲ್ಲಿ ಸಫಲವಾಗಲಿಲ್ಲ.
24 ಗಂಟೆಯೊಳಗೆ 3ನೇ ಪಂದ್ಯ ಆಡಿದ ಪಿವಿ ಸಿಂಧು, 8ರ ಘಟ್ಟದಲ್ಲಿ ಟೋಕಿಯೊ ಒಲಿಂಪಿಕ್ಸ್ ಚಾಂಪಿಯನ್ ಚೀನಾದ ಚೆನ್ ಯು ಫೀ ವಿರುದ್ಧ 21-11, 18-21, 10-21 ಗೇಮ್ಗಳಿಂದ ಮಣಿದರು. 19 ವರ್ಷದ ಉನ್ನತಿ ಹೂಡಾ 3 ಬಾರಿಯ ವಿಶ್ವ ಚಾಂಪಿಯನ್ ಜಪಾನ್ನ ಅಕಾನೆ ಯಮಗುಚಿ ಎದುರು 16-21, 21-14, 17-21ರಿಂದ ವೀರೋಚಿತ ಸೋಲು ಕಂಡರು.
ವಿಶ್ವ ಚಾಂಪಿಯನ್ಷಿಪ್ ಕಂಚು ವಿಜೇತ ತ್ರೀಸಾ-ಗಾಯತ್ರಿ ಜೋಡಿ ವಿಶ್ವ ನಂ. 5 ಮಲೇಷ್ಯಾದ ಪಲಿ ಟಾನ್-ಥಿನಾಹ್ ಮುರಳೀಧರನ್ ಜೋಡಿಯ ಎದುರು 18-21, 9-21ರಿಂದ ಪರಾಭವಗೊಂಡಿತು. ತನಿಷಾ-ಧ್ರುವ ಜೋಡಿ ವಿಶ್ವ ನಂ. 1 ಚೀನಾದ ಫೆಂಗ್ ಯಾನ್ ಝಿ-ಹುವಾಂಗ್ ಡೊಂಗ್ಪಿಂಗ್ ಎದುರು 14-21, 21-18, 18-21ರಿಂದ ಶರಣಾದರು.
ವೇಳಾಪಟ್ಟಿ ಬಗ್ಗೆ ಸಿಂಧು ಟೀಕೆ
ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ 24 ಗಂಟೆಗೂ ಕಡಿಮೆ ಅವಧಿಯ ಅಂತರದಲ್ಲಿ 3 ಪಂಧ್ಯಗಳನ್ನು ಆಡಿದ ಪಿವಿ ಸಿಂಧು ಏಷ್ಯಾಡ್ ಬ್ಯಾಡ್ಮಿಂಟನ್ ಸ್ಪರ್ಧೆಯ ವೇಳಾಪಟ್ಟಿಯನ್ನು ದೂರಿದ್ದಾರೆ. ಒಂದು ಪಂದ್ಯ ಆಡಿದ ಬಳಿಕ ಚೇತರಿಸಿಕೊಳ್ಳಲು ಹೆಚ್ಚಿನ ಸಮಯ ನೀಡದ ರೀತಿಯ ವೇಳಾಪಟ್ಟಿ ಸಿದ್ಧಪಡಿಸಿರುವುದಕ್ಕೆ ಅವರು ಸಂಘಟಕರನ್ನು ಟೀಕಿಸಿದ್ದಾರೆ. ಶನಿವಾರ ಸಿಂಧು 2 ಪಂದ್ಯ ಆಡಿದ್ದರು. ಅದರಲ್ಲೂ 2ನೇ ಪಂದ್ಯ ಮಧ್ಯರಾತ್ರಿಯವರೆಗೆ ನಡೆದಿತ್ತು. ಅದರ ಬೆನ್ನಲ್ಲೇ ಭಾನುವಾರ ಬೆಳಗ್ಗೆಯೇ ಕ್ವಾರ್ಟರ್ಫೈನಲ್ ಪಂದ್ಯ ಆಡುವ ಸವಾಲು ಅವರಿಗೆ ಎದುರಾಗಿತ್ತು. ನನಗೆ ಸರಿಯಾಗಿ ನಿದ್ದೆ ಮಾಡಲು ಆಗಲಿಲ್ಲ. ಜತೆಗೆ ದೈಹಿಕವಾಗಿ ಚೇತರಿಕೆಗೆ ಹೆಚ್ಚಿನ ಸಮಯವೂ ಸಿಗಲಿಲ್ಲ ಎಂದು 31 ವರ್ಷದ ಸಿಂಧು ದೂರಿದ್ದಾರೆ. 3 ದಿನಗಳಲ್ಲಿ 4 ಪಂದ್ಯಗಳನ್ನು ಆಡಿದ ಉನ್ನತಿ ಹೂಡಾ ಕೂಡ ವೇಳಾಪಟ್ಟಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿಂಧುಗೆ 2030ರ ಏಷ್ಯಾಡ್ನಲ್ಲೂ ಆಡುವಾಸೆ!
ಮುಂದಿನ 2030ರ ಏಷ್ಯನ್ ಗೇಮ್ಸ್ನಲ್ಲೂ ಆಡುವ ಹಂಬಲವನ್ನು ಪಿವಿ ಸಿಂಧು ವ್ಯಕ್ತಪಡಿಸಿದ್ದಾರೆ. ಈ ಮೂಲಕ ಇದೇ ತನ್ನ ಕೊನೆಯ ಏಷ್ಯಾಡ್ ಅಲ್ಲವೆಂದು ಸ್ಪಷ್ಟಪಡಿಸಿದ್ದಾರೆ. "ನಾನು ಗಾಯದ ಸಮಸ್ಯೆಗಳಿಂದ ಹೊರತಾಗಿದ್ದರೆ ಖಂಡಿತವಾಗಿಯೂ ಮುಂದಿನ ಏಷ್ಯಾಡ್ನಲ್ಲೂ ಆಡುವೆ. ಆದರೆ ಸದ್ಯ ಪ್ರತಿ ಒಂದು ವರ್ಷದ ಯೋಜನೆಯತ್ತ ಗಮನಹರಿಸಿರುವೆ. ಯಾಕೆಂದರೆ ನನಗೀಗ 20 ವರ್ಷವಲ್ಲ. ನನ್ನ ದೇಹದ ಬಗ್ಗೆಯೂ ಕಾಳಜಿ ವಹಿಸಬೇಕಾಗುತ್ತದೆ' ಎಂದು ಸಿಂಧು ಹೇಳಿದ್ದಾರೆ. ಮುಂದಿನ ಏಷ್ಯಾಡ್ ವೇಳೆ ಅವರಿಗೆ 35 ವರ್ಷ ಆಗಿರುತ್ತದೆ. ಸದ್ಯಕ್ಕೆ ನಾನೀಗ ಅಳೆದು ತೂಗಿ ಆಯ್ದ ಕೆಲ ಟೂರ್ನಿಗಳಲ್ಲಷ್ಟೇ ಆಡುತ್ತಿದ್ದೇನೆ. ಈಗಲೂ ಆಟದ ಮೇಲೆ ಪ್ರೀತಿ ಉಳಿಸಿಕೊಂಡಿದ್ದೇನೆ. ಹೀಗಾಗಿ ಪದಕ ಗೆಲ್ಲದಿದ್ದರೂ, ಆಟವಾಡುವುದನ್ನು ಮುಂದುವರಿಸಿರುವೆ. ನನ್ನಲ್ಲಿ ಇನ್ನೂ ಸಾಮರ್ಥ್ಯವಿದೆ ಎಂದು ನಂಬಿದ್ದೇನೆ ಎಂದಿದ್ದಾರೆ.