

ಹಾಂಗ್ಝೌ: ಭಾರತ ಈ ಬಾರಿ ಸರ್ವಾಧಿಕ 655 ಕ್ರೀಡಾಪಟುಗಳ ಬಳಗದೊಂದಿಗೆ ಹಾಂಗ್ಝೌ ಏಷ್ಯಾಡ್ಗೆ ತೆರಳಿದ್ದು, 39 ಕ್ರೀಡೆಗಳಲ್ಲಿ ಸ್ಪರ್ಧಿಸುತ್ತಿದೆ. ದಾಖಲೆಯ 100 ಪದಕ ಗೆಲ್ಲುವ ಹಂಬಲವನ್ನು ಹೊಂದಿರುವ ಯಾವೆಲ್ಲ ಕ್ರೀಡೆಗಳಲ್ಲಿ, ಯಾವ ಯಾವ ಕ್ರೀಡಾಪಟುಗಳು ಪದಕ ಗೆಲ್ಲುವ ಅವಕಾಶವಿದೆ ಎಂಬ ಲೆಕ್ಕಾಚಾರ ಇಲ್ಲಿದೆ...
ಅಥ್ಲೆಟಿಕ್ಸ್: ಏಷ್ಯಾಡ್ನಲ್ಲಿ ಚೀನಾ, ಜಪಾನ್ ಬಿಟ್ಟರೆ ಅಥ್ಲೆಟಿಕ್ಸ್ನಲ್ಲಿ ಭಾರತವೇ ಬಲಿಷ್ಠ. ಒಲಿಂಪಿಕ್ಸ್, ಕಾಮನ್ವೆಲ್ತ್ ಗೇಮ್ಸ್ನಂತೆ ಅಥ್ಲೆಟಿಕ್ಸ್ನ ಶಕ್ತಿಕೇಂದ್ರಗಳು ಏಷ್ಯಾಡ್ನಲ್ಲಿ ಇರುವುದಿಲ್ಲ. ಇನ್ನು ಅಥ್ಲೆಟಿಕ್ಸ್ನಲ್ಲಿ ಇತ್ತೀಚೆಗೆ ಭಾರತ ಜಾಗತಿಕ ಮಟ್ಟದಲ್ಲೂ ಉತ್ತಮ ನಿರ್ವಹಣೆ ತೋರುತ್ತಿರುವುದರಿಂದ ಏಷ್ಯಾಡ್ನಲ್ಲಿ ಇನ್ನಷ್ಟು ಪ್ರಾಬಲ್ಯದ ನಿರೀಕ್ಷೆ ಇದೆ. ಜಾವೆಲಿನ್ ಎಸೆತದಲ್ಲಿ ಒಲಿಂಪಿಕ್ಸ್-ವಿಶ್ವ ಚಾಂಪಿಯನ್ ನೀರಜ್ ಚೋಪ್ರಾಗೆ ಪಾಕಿಸ್ತಾನದ ಅರ್ಷದ್ ನದೀಂ ಏಕಮಾತ್ರ ಪ್ರಮುಖ ಎದುರಾಳಿಯಾಗಿದ್ದಾರೆ. ಭಾರತಕ್ಕೆ ಗರಿಷ್ಠ ಪದಕ ನಿರೀಕ್ಷೆಯ ಸ್ಪರ್ಧೆ ಇದಾಗಿದೆ.
ಸ್ಪರ್ಧಿಗಳು: 68
ಪಣಕ್ಕಿರುವ ಸ್ವರ್ಣ: 48
ಪ್ರಮುಖರು: ನೀರಜ್ ಚೋಪ್ರಾ, ಅವಿನಾಶ್ ಸಾಬ್ಲೆ, ಮುರಳಿ ಶ್ರೀಶಂಕರ್, ತೇಜಿಂದರ್ ಪಾಲ್, ಜ್ಯೋತಿ ಯರಾಜಿ, ಪಾರುಲ್ ಚೌಧರಿ.
ಸ್ಪರ್ಧೆಯ ದಿನಾಂಕ: ಸೆಪ್ಟೆಂಬರ್ 29-ಅಕ್ಟೋಬರ್ 5.
ಕ್ರಿಕೆಟ್: ಭಾರತ ಪುರುಷರ ಮತ್ತು ಮಹಿಳಾ ವಿಭಾಗಗಳೆರಡರಲ್ಲೂ ಏಷ್ಯಾದ ಅಗ್ರ ಶ್ರೇಯಾಂಕಿತ ತಂಡವಾಗಿದ್ದು, ಸ್ವರ್ಣ ಪದಕದ ನಿರೀಕ್ಷೆ ಇದೆ. ಪುರುಷರ ವಿಭಾಗದಲ್ಲಿ ಭಾರತದ ಪ್ರಮುಖ ತಂಡ ಕಣಕ್ಕಿಳಿಯುತ್ತಿಲ್ಲ. ವಿಶ್ವಕಪ್ ಹಿನ್ನೆಲೆಯಲ್ಲಿ ಪಾಕ್, ಶ್ರೀಲಂಕಾ, ಬಾಂಗ್ಲಾ ಕೂಡ 2ನೇ ಸ್ತರದ ತಂಡವನ್ನು ಆಡಿಸುತ್ತಿರುವುದರಿಂದ ಇದು ಹಿನ್ನಡೆಯಲ್ಲ.
ಸ್ಪರ್ಧಿಗಳು: 30
ಪಣಕ್ಕಿರುವ ಸ್ವರ್ಣ: 2
ಸ್ಪರ್ಧೆಯ ದಿನಾಂಕ: ಸೆಪ್ಟೆಂಬರ್ 19-ಅಕ್ಟೋಬರ್ 7.
ಬ್ಯಾಡ್ಮಿಂಟನ್: ಏಷ್ಯಾಡ್ನಲ್ಲಿ ಬ್ಯಾಡ್ಮಿಂಟನ್ ನಿರ್ವಹಣೆಯನ್ನು ಒಲಿಂಪಿಕ್ಸ್ಗೆ ಹೋಲಿಸಬಹುದು. ಯಾಕೆಂದರೆ ಇಲ್ಲಿ ಅಷ್ಟೇ ಕಠಿಣ ಸವಾಲು ಇದೆ. ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧುಗೆ ಇತ್ತೀಚೆಗಿನ ಕಳಪೆ ಫಾಮ್ರ್ನಿಂದ ಹೊರಬರುವ ಸವಾಲು ಇದೆ. ಪುರುಷರ ಡಬಲ್ಸ್ನಲ್ಲಿ ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್, ಸಿಂಗಲ್ಸ್ನಲ್ಲಿ ಎಚ್ಎಸ್ ಪ್ರಣಯ್, ಲಕ್ಷ್ಯ ಸೇನ್ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ.
ಸ್ಪರ್ಧಿಗಳು: 19
ಪಣಕ್ಕಿರುವ ಸ್ವರ್ಣ: 7
ಪ್ರಮುಖರು: ಪಿವಿ ಸಿಂಧು, ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್, ಎಚ್ಎಸ್ ಪ್ರಣಯ್, ಲಕ್ಷ್ಯ ಸೇನ್.
ಸ್ಪರ್ಧೆಯ ದಿನಾಂಕ: ಸೆಪ್ಟೆಂಬರ್ 28-ಅಕ್ಟೋಬರ್ 7.
ಹಾಕಿ: ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತದ ಹಾಕಿ ತಂಡಗಳು ಗತವೈಭವ ನೆನಪಿಸುವಂಥ ನಿರ್ವಹಣೆ ತೋರಿದ್ದವು. ಇದೀಗ ಪುರುಷ-ಮಹಿಳಾ ವಿಭಾಗದಲ್ಲಿ ಭಾರತ, ಏಷ್ಯಾದ ಅಗ್ರ ಶ್ರೇಯಾಂಕಿತ ತಂಡವಾಗಿದ್ದು, ಏಷ್ಯಾಡ್ ಚಿನ್ನದ ಪದಕದೊಂದಿಗೆ 2024ರ ಪ್ಯಾರಿಸ್ ಒಲಿಂಪಿಕ್ಸ್ಗೆ ನೇರಅರ್ಹತೆ ಪಡೆಯುವ ಅವಕಾಶವನ್ನೂ ಹೊಂದಿದೆ. ಹರ್ಮಾನ್ಪ್ರೀತ್ ಸಿಂಗ್ ಮತ್ತು ಸವಿತಾ ಪೂನಿಯಾ ಸಾರಥ್ಯದಲ್ಲಿ ಭಾರತದ ಪುರುಷ-ಮಹಿಳಾ ತಂಡಗಳು ಅದೇ ಧ್ಯೇಯದೊಂದಿಗೆ ಕಣಕ್ಕಿಳಿಯಲಿವೆ.
ಸ್ಪರ್ಧಿಗಳು: 30
ಪಣಕ್ಕಿರುವ ಸ್ವರ್ಣ: 2
ಸ್ಪರ್ಧೆಯ ದಿನಾಂಕ: ಸೆಪ್ಟೆಂಬರ್ 24-ಅಕ್ಟೋಬರ್ 7.
ಬಾಕ್ಸಿಂಗ್: ಒಲಿಂಪಿಕ್ಸ್ನಲ್ಲಿ ಮಿಂಚಿದ ಲವ್ಲಿನಾ ಬೋಗೋರ್ಹೈನ್, ನಿಖತ್ ಜರೀನ್ ಜತೆಗೆ ಶಿವ ಥಾಪಾ ಭಾರತದ ಸವಾಲು ಮುನ್ನಡೆಸಲಿದ್ದಾರೆ. ಭಾರತ ಎಲ್ಲ 13 ವಿಭಾಗಗಳಲ್ಲೂ ಪದಕ ಗೆಲ್ಲುವ ತವಕದಲ್ಲಿದೆ.
ಸ್ಪರ್ಧಿಗಳು: 13
ಪಣಕ್ಕಿರುವ ಸ್ವರ್ಣ: 13
ಪ್ರಮುಖರು: ಲವ್ಲಿನಾ ಬೋಗೋರ್ಹೈನ್, ನಿಖತ್ ಜರೀನ್, ಶಿವ ಥಾಪಾ.
ಸ್ಪರ್ಧೆಯ ದಿನಾಂಕ: ಸೆಪ್ಟೆಂಬರ್ 24-ಅಕ್ಟೋಬರ್ 5.
ಕುಸ್ತಿ: ಹಲವು ಭವಿಷ್ಯದ ತಾರೆಯರನ್ನು ಒಳಗೊಂಡ ತಂಡದೊಂದಿಗೆ ಭಾರತ ಕುಸ್ತಿಯಲ್ಲಿ ಸ್ಪರ್ಧಿಸಲಿದೆ. ಕೂಟಕ್ಕೆ ಮುನ್ನ ಆಯ್ಕೆ ಟ್ರಯಲ್ಸ್ ದೊಡ್ಡ ಸುದ್ದಿಯಾಗಿತ್ತು. ನೇರಆಯ್ಕೆಯೊಂದಿಗೆ ಬಂದಿರುವ ಭಜರಂಗ್ ಪೂನಿಯಾ ಚಿನ್ನದೊಂದಿಗೆ ಅದನ್ನು ಸಮರ್ಥಿಸಬೇಕಿದೆ. ಒಲಿಂಪಿಕ್ಸ್ ಪದಕ ವಿಜೇತ ರವಿ ದಹಿಯಾಗೆ ಆಯ್ಕೆ ಟ್ರಯಲ್ಸ್ನಲ್ಲಿ ಅರ್ಹತೆ ತಪ್ಪಿತು ಎಂದರೆ ಭಾರತದ ಕುಸ್ತಿಯ ಸ್ಪರ್ಧಾತ್ಮಕತೆ ಗೊತ್ತಾಗುತ್ತದೆ.
ಸ್ಪರ್ಧಿಗಳು: 18
ಪಣಕ್ಕಿರುವ ಸ್ವರ್ಣ: 18
ಪ್ರಮುಖರು: ಭಜರಂಗ್ ಪೂನಿಯಾ, ದೀಪಕ್ ಪೂನಿಯಾ, ಅಂತಿಮ್ ಪಾಂಗಲ್,
ಸ್ಪರ್ಧೆಯ ದಿನಾಂಕ: ಅಕ್ಟೋಬರ್ 4-7.
ವೇಟ್ಲಿಫ್ಟಿಂಗ್: ಉತ್ತರ ಕೊರಿಯಾ ಸ್ಪರ್ಧಾಕಣಕ್ಕೆ ಮರಳುತ್ತಿರುವ ಕಾರಣ ಭಾರತಕ್ಕೆ ಕಠಿಣ ಸವಾಲು ಎದುರಾಗಿದೆ. ಪುರುಷರ ವಿಭಾಗದಲ್ಲಿ ಭಾರತ ಸ್ಪರ್ಧಿಸುತ್ತಿಲ್ಲ. ಮಹಿಳಾ ವಿಭಾಗದಲ್ಲಿ ಪದಕ ಗೆಲ್ಲುವ ವಿಶ್ವಾಸದಲ್ಲಿರುವ ಒಲಿಂಪಿಕ್ಸ್ ಪದಕ ವಿಜೇತೆ ಮೀರಾಬಾಯಿ ಚಾನು ಮತ್ತು ಬಿಂದ್ಯಾರಾಣಿ ದೇವಿ ಮಾತ್ರ ಭಾರತದ ಸ್ಪರ್ಧಿಗಳಾಗಿದ್ದಾರೆ.
ಸ್ಪರ್ಧಿಗಳು: 2
ಪಣಕ್ಕಿರುವ ಸ್ವರ್ಣ: 14
ಸ್ಪರ್ಧೆಯ ದಿನಾಂಕ: ಸೆಪ್ಟೆಂಬರ್ 30-ಅಕ್ಟೋಬರ್ 7.
ಟೆನಿಸ್: ಚೀನಾ, ಜಪಾನ್ ಆಟಗಾರರ ಸವಾಲಿನ ನಡುವೆ ಭಾರತಕ್ಕೆ ಪುರುಷರ ಡಬಲ್ಸ್ನಲ್ಲಿ ಕನ್ನಡಿಗ ರೋಹನ್ ಬೋಪಣ್ಣ-ಯೂಕಿ ಭಾಂಬ್ರಿ ಜೋಡಿಯ ಮೇಲೆ ಸ್ವರ್ಣ ನಿರೀಕ್ಷೆ ಇದೆ. ಉಳಿದಂತೆ ಸುಮಿತ್ ನಗಾಲ್, ಅಂಕಿತಾ ರೈನಾ ಕೂಡ ಪದಕದ ಆಕಾಂಕ್ಷಿಗಳಾಗಿದ್ದಾರೆ.
ಸ್ಪರ್ಧಿಗಳು: 9
ಪಣಕ್ಕಿರುವ ಸ್ವರ್ಣ: 5
ಪ್ರಮುಖರು: ರೋಹನ್ ಬೋಪಣ್ಣ, ಅಂಕಿತಾ ರೈನಾ, ಸುಮಿತ್ ನಗಾಲ್, ಯೂಕಿ ಭಾಂಬ್ರಿ.
ಸ್ಪರ್ಧೆಯ ದಿನಾಂಕ: ಸೆಪ್ಟೆಂಬರ್ 24-30.
ಟೇಬಲ್ ಟೆನಿಸ್: ಚೀನಾ ಸ್ಪರ್ಧಿಗಳ ಪ್ರಾಬಲ್ಯದ ನಡುವೆ ಭಾರತ ಚಿನ್ನಕ್ಕೆ ಗುರಿಯಿಡುವುದು ಕಠಿಣ ಸವಾಲು. ಆದರೆ ಅನುಭವಿಗಳಾದ ಶರತ್ ಕಮಲ್, ಮನಿಕಾ ಬಾತ್ರಾ ಹಾಜರಿಯಿಂದ ಪದಕದ ನಿರೀಕ್ಷೆ ಇದೆ.
ಸ್ಪರ್ಧಿಗಳು: 10
ಪಣಕ್ಕಿರುವ ಸ್ವರ್ಣ: 7
ಪ್ರಮುಖರು: ಶರತ್ ಕಮಲ್, ಮನಿತಾ ಬಾತ್ರಾ, ಜಿ. ಸತ್ಯನ್.
ಸ್ಪರ್ಧೆಯ ದಿನಾಂಕ: ಸೆಪ್ಟೆಂಬರ್ 22-ಅಕ್ಟೋಬರ್ 2.
ಶೂಟಿಂಗ್: ಭಾರತದ ಶೂಟರ್ಗಳು ಕಳೆದೆರಡು ಒಲಿಂಪಿಕ್ಸ್ಗಳಲ್ಲಿ ನಿರಾಸೆ ಮೂಡಿಸಿದ್ದು, ಕಳೆದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಸ್ಪರ್ಧೆ ಅವಕಾಶದಿಂದಲೂ ವಂಚಿತರಾಗಿದ್ದರು. ಹೀಗಾಗಿ ಶೂಟಿಂಗ್ನಲ್ಲಿ ಮತ್ತೆ ಭಾರತದ ಸಾಮರ್ಥ್ಯ ತೋರಿಸಲು ಇದು ಸರಿಯಾದ ವೇದಿಕೆ. ಇತ್ತೀಚೆಗೆ ರೈಲ್-ಪಿಸ್ತೂಲ್ ವಿಶ್ವಕಪ್ನಲ್ಲಿ ಉತ್ತಮ ನಿರ್ವಹಣೆ ತೋರಿಸಿರುವುದು ನಿರೀಕ್ಷೆ ಹೆಚ್ಚಿಸಿದೆ.
ಸ್ಪರ್ಧಿಗಳು: 33
ಪಣಕ್ಕಿರುವ ಸ್ವರ್ಣ: 33
ಪ್ರಮುಖರು: ಮನು ಭಾಕರ್, ದಿವ್ಯಾಂಶ್, ಐಶ್ವರಿ ಪ್ರತಾಪ್ ಸಿಂಗ್, ಮೇಹುಲಿ ಘೋಷ್.
ಸ್ಪರ್ಧೆಯ ದಿನಾಂಕ: ಸೆಪ್ಟೆಂಬರ್ 24-ಅಕ್ಟೋಬರ್ 1.
ಕಬಡ್ಡಿ: ಭಾರತ ತನ್ನ ಮಣ್ಣಿನ ಆಟ ಕಬಡ್ಡಿಯಲ್ಲಿ ಈ ಬಾರಿ ಮತ್ತೆ ಅಧಿಪತ್ಯ ಸಾಧಿಸಲು ಹೋರಾಡಬೇಕಿದೆ. ಏಷ್ಯಾಡ್ಗೆ ಪುರುಷರ ಕಬಡ್ಡಿ ಸೇರ್ಪಡೆಗೊಂಡ ಬಳಿಕ ಸತತ 7 ಬಾರಿ ಚಿನ್ನ ಗೆದ್ದಿದ್ದರೆ, ಮಹಿಳೆಯರಲ್ಲಿ 2010ರಿಂದ ಸತತ 2 ಬಾರಿ ಚಿನ್ನ ಗೆದ್ದಿದ್ದ ಭಾರತ ಕಳೆದ ಆವೃತ್ತಿಯಲ್ಲಿ ಎರಡೂ ವಿಭಾಗಗಳಲ್ಲಿ ಚಿನ್ನ ಗೆಲ್ಲಲು ವಿಫಲವಾಗಿತ್ತು. ಭಾರತಕ್ಕೆ ಇರಾನ್ ಶಾಕ್ ನೀಡಿತ್ತು. ಈ ಬಾರಿ ಭಾರತ ಮತ್ತೆ ಎರಡೂ ಚಿನ್ನ ಗೆಲ್ಲುವ ಫೇವರಿಟ್ ಆಗಿ ಕಣಕ್ಕಿಳಿಯಲಿದೆ.
ಸ್ಪರ್ಧಿಗಳು: 24
ಪಣಕ್ಕಿರುವ ಸ್ವರ್ಣ: 2
ಸ್ಪರ್ಧೆಯ ದಿನಾಂಕ: ಅಕ್ಟೋಬರ್ 2-7.
ಗಾಲ್ಫ್: ಟೋಕಿಯೊ ಒಲಿಂಪಿಕ್ಸ್ನಲ್ಲಿ ಸ್ವಲ್ಪದರಲ್ಲಿ ಪದಕ ವಂಚಿತರಾಗಿದ್ದ ಕನ್ನಡತಿ ಅದಿತಿ ಅಶೋಕ್ ಏಷ್ಯಾಡ್ನಲ್ಲಿ ಪದಕ ಗೆಲ್ಲುವ ನಿರೀಕ್ಷೆ ಇದೆ. ಪುರುಷರ ವಿಭಾಗದಲ್ಲಿ ಅರ್ನಿಬನ್ ಲಹಿರಿ ಮೇಲೆ ನಿರೀಕ್ಷೆ ಇದ್ದು, ಭಾರತದ ಯುವ ತಂಡ ಗಮನಾರ್ಹ ನಿರ್ವಹಣೆ ತೋರುವ ಹಂಬಲದಲ್ಲಿದೆ.
ಸ್ಪರ್ಧಿಗಳು: 7
ಪಣಕ್ಕಿರುವ ಸ್ವರ್ಣ: 4
ಪ್ರಮುಖರು:
ಸ್ಪರ್ಧೆಯ ದಿನಾಂಕ: ಸೆಪ್ಟೆಂಬರ್ 28-ಅಕ್ಟೋಬರ್ 1.
ಚೆಸ್: ಏಷ್ಯಾಡ್ಗೆ 13 ವರ್ಷಗಳ ಬಳಿಕ ಮರಳಿರುವ ಚೆಸ್ ಸ್ಪರ್ಧೆಯಲ್ಲಿ ಭಾರತ ಅನುಭವಿ&ಯುವ ತಂಡದೊಂದಿಗೆ ಸ್ಪರ್ಧಿಸುತ್ತಿದೆ. ಇತ್ತೀಚೆಗೆ ಚೆಸ್ ವಿಶ್ವಕಪ್ನಲ್ಲಿ ಮಿಂಚಿದ ಆರ್. ಪ್ರಜ್ಞಾನಂದ ಜತೆಗೆ ಡಿ. ಗುಕೇಶ್, ಮಹಿಳಾ ವಿಭಾಗದಲ್ಲಿ ಕೊನೆರು ಹಂಪಿ, ಡಿ. ಹರಿಕಾ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ.
ಸ್ಪರ್ಧಿಗಳು: 10
ಪಣಕ್ಕಿರುವ ಸ್ವರ್ಣ:
ಪ್ರಮುಖರು: ಆರ್. ಪ್ರಜ್ಞಾನಂದ, ಡಿ. ಗುಕೇಶ್, ಕೊನೆರು ಹಂಪಿ, ಡಿ. ಹರಿಕಾ.
ಸ್ಪರ್ಧೆಯ ದಿನಾಂಕ: ಸೆಪ್ಟೆಂಬರ್ 24-ಅಕ್ಟೋಬರ್ 7.
ಆರ್ಚರಿ: ಕೊರಿಯಾ ಸ್ಪರ್ಧಿಗಳ ಸವಾಲಿನ ನಡುವೆ ಹೆಚ್ಚಿನ ಪದಕ ನಿರೀಕ್ಷೆ ಇಡಬಹುದಾದ ಸ್ಪರ್ಧೆ ಇದಾಗಿದೆ. ಅತನು ದಾಸ್, ಜ್ಯೋತಿ ಸುರೇಖಾ ಭಾರತದ ಸವಾಲು ಮುನ್ನಡೆಲಿದ್ದಾರೆ.
ಸ್ಪರ್ಧಿಗಳು: 16
ಪಣಕ್ಕಿರುವ ಸ್ವರ್ಣ: 10
ಪ್ರಮುಖರು: ಅತನು ದಾಸ್, ಅಭಿಷೇಕ್ ವರ್ಮ, ಜ್ಯೋತಿ ಸುರೇಖಾ.
ಸ್ಪರ್ಧೆಯ ದಿನಾಂಕ: ಅಕ್ಟೋಬರ್ 1-7
ಸ್ಕ್ವಾಷ್: ಏಷ್ಯಾಡ್ನಲ್ಲಿ ಭಾರತಕ್ಕೆ ಪದಕ ನಿರೀಕ್ಷೆ ಇರುವ ಕ್ರೀಡೆಗಳಲ್ಲಿ ಒಂದಾಗಿರುವ ಸ್ಕ್ವಾಷ್ನಲ್ಲಿ ಅನುಭವಿಗಳಾದ ಜೋಶ್ನಾ ಚಿನ್ನಪ್ಪ, ದೀಪಿಕಾ ಪಲ್ಲಿಕಲ್, ಸೌರವ್ ಘೋಷಾಲ್ ಭಾರತದ ಸವಾಲು ಮುನ್ನಡೆಸಲಿದ್ದಾರೆ.
ಸ್ಪರ್ಧಿಗಳು: 8
ಪಣಕ್ಕಿರುವ ಸ್ವರ್ಣ: 5
ಸ್ಪರ್ಧೆಯ ದಿನಾಂಕ: ಸೆಪ್ಟೆಂಬರ್ 26-ಅಕ್ಟೋಬರ್ 5.
ಭಾರತಕ್ಕೆ ಪದಕ ನಿರೀಕ್ಷೆ ಕಡಿಮೆ ಇರುವ ಸ್ಪರ್ಧೆಗಳು
ಫುಟ್ಬಾಲ್ (ಸೆ.19-27), ಈಜು (ಸೆಪ್ಟೆಂಬರ್ 24-29), ಬಾಸ್ಕೆಟ್ಬಾಲ್ (ಸೆ.26-ಅ.6), ಸೈಕ್ಲಿಂಗ್ (ಸೆ. 25-ಅ.5), ಕನೋಯಿಂಗ್ (ಸೆ.30-ಅ.7), ಈಕ್ವೆಸ್ಟ್ರಇಯನ್ (ಸೆ.26-ಅ.6), ವಾಲಿಬಾಲ್ (ಸೆ.19-ಅ.7), ಬ್ರಿಡ್ಜ್ (ಸೆ. 27-ಅ. 6), ಇ-ಸ್ಪೋರ್ಟ್ಸ್ (ಸೆ.24-ಅ.2), ಫೆನ್ಸಿಂಗ್ (ಸೆ. 24-29), ಜಿಮ್ನಾಸ್ಟಿಕ್ಸ್ (ಸೆ.24-29), ಹ್ಯಾಂಡ್ಬಾಲ್ (ಸೆ.24-ಅ.7), ಜುಡೋ (ಸೆ.24-27), ಜು-ಜಿತ್ಸು (ಅ.5-7), ಕುರಾಶ್ (ಸೆ.30-ಅ.2), ವುಶು (ಸೆ.24-28), ಮಾಡರ್ನ್ ಪೆಂಟಾಥ್ಲಾನ್ (ಸೆ.20-24), ರೋಲರ್ ಸ್ಪೋರ್ಟ್ಸ್ (ಸೆ.30-ಅ.7), ರೋಯಿಂಗ್ (ಸೆ.20-25), ರಗ್ಬಿ ಸೆವೆನ್ಸ್ (ಸೆ.24-26), ಸೈಲಿಂಗ್ (ಸೆ.21-27), ಸೆಪಕ್ ಟಕ್ರಾ (ಸೆ.24-ಅ.1), ಸಾಫ್ಟ್ ಟೆನಿಸ್ (ಅ.3-7), ಸ್ಪೋಟ್ಸ್ ಕ್ಲೈಂಬಿಂಗ್ (ಅ.3-7).