Asian Games 2023: ಸೆಮಿಫೈನಲ್​ನಲ್ಲಿ ಬಾಂಗ್ಲಾವನ್ನು ಬಗ್ಗುಬಡಿದ ಭಾರತ: ಪದಕ ಖಚಿತ, ಚಿನ್ನದ ಮೇಲೆ ಕಣ್ಣು

Women Cricket
Published on

ಹಾಂಗ್​ಝೌ: ಇಂದು (ಸೆ.24) ನಡೆದ ಏಷ್ಯನ್ ಗೇಮ್ಸ್ ಮಹಿಳಾ ಟಿ20 ಸೆಮಿಫೈನಲ್​ 2023 ಪಂದ್ಯದಲ್ಲಿ ಎದುರಾಳಿ ಬಾಂಗ್ಲಾದೇಶ ತಂಡವನ್ನು 8 ವಿಕೆಟ್​ಗಳಿಂದ ಮಣಿಸುವ ಮೂಲಕ ಭಾರತ ಮಹಿಳಾ ಕ್ರಿಕೆಟ್ ತಂಡ ದೇಶಕ್ಕೆ ಪದಕವನ್ನು ಖಚಿತಪಡಿಸಿದೆ.

ಹ್ಯಾಂಗ್‌ಝೌನ ಪಿಂಗ್‌ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್​ನಲ್ಲಿ ಇಂದು ಬೆಳಗ್ಗೆ 6.30ಕ್ಕೆ ಆರಂಭವಾದ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಬಾಂಗ್ಲಾ ಮಹಿಳಾ ಕ್ರಿಕೆಟ್​ ತಂಡ ಭಾರತದ ತಂಡದ ಬೌಲಿಂಗ್​ ದಾಳಿಗೆ ತತ್ತರಿಸಿ 17.5 ಓವರ್​ಗಳಲ್ಲಿ ಕೇವಲ 51 ರನ್​ಗೆ ಸರ್ವಪತನ ಕಂಡಿತು.

ಭಾರತದ ಪರ ಮಾರಕ ಬೌಲಿಂಗ್​ ದಾಳಿ ಪ್ರದರ್ಶನ ಮಾಡಿದ ಪೂಜಾ ವಸ್ತ್ರಕರ್ ಪ್ರಮುಖ 4 ವಿಕೆಟ್​ ಕಬಳಿಸಿದರು. ಉಳಿದಂತೆ ತಿತಾಸ್​ ಸಾಧು, ಅಮನ್ಜೋತ್ ಕೌರ್, ಗಾಯಕ್ವಾಡ್ ಹಾಗೂ ದೇವಿಕಾ ವೈದ್ಯ ತಲಾ ಒಂದು ವಿಕೆಟ್​ ಪಡೆದರು.

ಬಾಂಗ್ಲಾ ನೀಡಿದ 52 ರನ್​ಗಳ ಸುಲಭ ಗುರಿ ಬೆನ್ನತ್ತಿದ ಭಾರತ ಕೇವಲ 8.2 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 52 ರನ್​ ಕಲೆಹಾಕುವ ಮೂಲಕ ಸುಲಭ ಜಯ ಸಾಧಿಸಿತು. ಭಾರತದ ಪರ ಜೆಮಿಮಾ ರಾಡ್ರಿಗಸ್ (ಅಜೇಯ 20 ರನ್​), ಶಫಾಲಿ ವರ್ಮಾ (17) ರನ್​ ಗಳಿಸಿದರು. ನಾಯಕಿ ಸ್ಮೃತಿ ಮಂದಾನ 7 ನರ್​ ಕಲೆಹಾಕಿದರು.

8 ವಿಕೆಟ್​ಗಳ ಜಯ ದಾಖಲಿಸುವುದರೊಂದಿಗೆ ಭಾರತ ಫೈನಲ್​ ಪ್ರವೇಶ ಮಾಡಿದ್ದು, ಏಷ್ಯನ್ ಗೇಮ್ಸ್​ನಲ್ಲಿ ಭಾರತಕ್ಕೆ ಪದಕ ಖಚಿತವಾಗಿದೆ. ಬಾಂಗ್ಲಾ ಈ ಹಿಂದೆ 2 ಬಾರಿ ಬೆಳ್ಳಿ ಗೆದ್ದಿದ್ದರೆ, ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿಗೆ ಕಣಕ್ಕಿಳಿದಿರುವ ಭಾರತ ಕ್ರಿಕೆಟ್ ತಂಡ ಚಿನ್ನ ಪದಕ ಗೆಲ್ಲುವ ಫೇವರಿಟ್ ಎನಿಸಿದೆ.

ಇಂದು ಮತ್ತೊಂದು ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ಮುಖಾಮುಖಿಯಾಗಲಿದ್ದು, ಇಲ್ಲಿ ಗೆಲುವು ಸಾಧಿಸುವ ತಂಡ ಫೈನಲ್​ನಲ್ಲಿ ಭಾರತವನ್ನು ಎದುರಿಸಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net