ಏಷ್ಯನ್​ ಚಾಂಪಿಯನ್ಸ್​ ಟ್ರೋಫಿ ಮಹಿಳಾ ಹಾಕಿ: ಭಾರತಕ್ಕೆ ಸತತ 5ನೇ ಗೆಲುವು

web hockey
Published on

ರಾಜ್​ಗಿರ್​ (ಬಿಹಾರ): ಹಾಲಿ ಚಾಂಪಿಯನ್​ ಹಾಗೂ ಆತಿಥೇಯ ಭಾರತ ತಂಡ ಸತತ 5ನೇ ಜಯದೊಂದಿಗೆ ಏಷ್ಯನ್​ ಚಾಂಪಿಯನ್ಸ್​ ಟ್ರೋಫಿ ಮಹಿಳಾ ಹಾಕಿ ಟೂರ್ನಿಯಲ್ಲಿ ಅಜೇಯವಾಗಿ ಸೆಮಿಫೈನಲ್​ ಪ್ರವೇಶಿಸಿದೆ. ಸಲಿಮಾ ಟೆಟೆ ಸಾರಥ್ಯದ ಭಾರತ ತಂಡ ಭಾನುವಾರ ನಡೆದ ತನ್ನ 5ನೇ ಹಾಗೂ ಅಂತಿಮ ಲೀಗ್​ ಪಂದ್ಯದಲ್ಲಿ ಜಪಾನ್​ ಎದುರು 3-0 ಗೋಲುಗಳಿಂದ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿತು.

ದೀಪಿಕಾ ಸೆಹ್ರಾವತ್​ (47, 48ನೇ ನಿಮಿಷ) ಅವಳಿ ಗೋಲು ದಾಖಲಿಸುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ಗೋಲು ಸಿಡಿಸಿದ ಸಾಧಕಿಯ ಪಟ್ಟವನ್ನು ಕಾಯ್ದುಕೊಂಡರು. ದೀಪಿಕಾ ಟೂರ್ನಿಯ 5 ಪಂದ್ಯಗಳಲ್ಲಿ ಗರಿಷ್ಠ 10 ಗೋಲು ಬಾರಿಸಿದ್ದಾರೆ. ಉಪನಾಯಕಿ ನವನೀತ್​ ಕೌರ್​ (37) ಮತ್ತೊಂದು ಗೋಲು ಸಿಡಿಸಿದರು.

ಭಾರತ ಒಟ್ಟು 15 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದರೆ, ಒಲಿಂಪಿಕ್ಸ್​ ರಜತ ವಿಜೇತ ಚೀನಾ 12 ಅಂಕಗಳೊಂದಿಗೆ 2ನೇ ಸ್ಥಾನ ಪಡೆಯಿತು. ಮಲೇಷ್ಯಾ 6 ಅಂಕಗಳೊಂದಿಗೆ 3ನೇ ಮತ್ತು ಜಪಾನ್​ 5 ಅಂಕಗಳೊಂದಿಗೆ 4ನೇ ಸ್ಥಾನದೊಂದಿಗೆ ಸೆಮಿಫೈನಲ್​ಗೇರಿತು.

ಭಾರತ ತಂಡ ಇನ್ನು ಮಂಗಳವಾರ ನಡೆಯಲಿರುವ ಸೆಮಿೈನಲ್​ ಪಂದ್ಯದಲ್ಲಿ ಮತ್ತೆ ಜಪಾನ್​ ತಂಡವನ್ನೇ ಎದುರಿಸಲಿದೆ. ಚೀನಾ&ಮಲೇಷ್ಯಾ ನಡುವೆ ಮತ್ತೊಂದು ಪಂದ್ಯ ನಡೆಯಲಿದೆ.

ಪ್ಯಾರಿಸ್​ ಒಲಿಂಪಿಕ್ಸ್​ ಅರ್ಹತೆ ಕೈತಪ್ಪಿದ ನಿರಾಸೆ ಮರೆತು ಪುಟಿದೆದ್ದಿರುವ ಭಾರತ ತಂಡ ಟೂರ್ನಿಯಲ್ಲಿ ಇದುವರೆಗೆ ಒಟ್ಟು 24 ಗೋಲು ಸಿಡಿಸಿದ್ದು, ಕೇವಲ 2 ಗೋಲು ಬಿಟ್ಟುಕೊಟ್ಟಿದೆ.

ನಾಳೆ ಸೆಮಿಫೈನಲ್ಸ್​

ಚೀನಾ-ಮಲೇಷ್ಯಾ

ಆರಂಭ: ಮಧ್ಯಾಹ್ನ 1.15

ಭಾರತ-ಜಪಾನ್​

ಆರಂಭ: ಸಂಜೆ 4.45

ನೇರಪ್ರಸಾರ: ಸೋನಿ ಸ್ಪೋರ್ಟ್ಸ್​ ನೆಟ್​ವರ್ಕ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net