

Asia Cup Trophy: ಸೆ.28ರಂದು ದುಬೈನಲ್ಲಿ ನಡೆದ ಏಷ್ಯಾಕಪ್ ಟಿ20 ಟೂರ್ನಿಯ ಫೈನಲ್ ಪಂದ್ಯದಲ್ಲಿ 3ನೇ ಬಾರಿಗೆ ಪಾಕಿಸ್ತಾನವನ್ನು ಬಗ್ಗುಬಡಿದ ಭಾರತ, ದಾಖಲೆಯ ಗೆಲುವು ಸಾಧಿಸಿತು. ಆದರೆ, ಪಂದ್ಯ ಗೆದ್ದ ಟೀಮ್ ಇಂಡಿಯಾಗೆ ಟ್ರೋಫಿ ಮತ್ತು ವಿಜೇತ ಪದಕಗಳು ಮಾತ್ರ ಇಂದಿಗೂ ಸಿಕ್ಕಿಲ್ಲ. ಅದಕ್ಕೆ ಕಾರಣ, ಬೇರಾರೂ ಅಲ್ಲ ಎಸಿಸಿ ಮುಖ್ಯಸ್ಥ, ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ.
ಅಂದು ಮೈದಾನದಲ್ಲಿ ಭಾರತ ತಂಡ ನಡೆದುಕೊಂಡ ರೀತಿಗೆ ಭಾರೀ ಮುಖಭಂಗ ಅನುಭವಿಸಿದ ನಖ್ವಿ, ಅವಮಾನ ಸಹಿಸಲಾಗದೆ, ತನ್ನೊಂದಿಗೆ ಕಪ್ ಮತ್ತು ಮೆಡಲ್ಗಳನ್ನು ಹೊತ್ತೊಯ್ದರು. ಎಸಿಸಿ ಮುಖ್ಯಸ್ಥನ ಈ ನಡೆಗೆ ಭಾರತೀಯ ಕ್ರಿಕೆಟ್ ಪ್ರಿಯರು ಹಾಗೂ ಸಾರ್ವಜನಿಕರಿಂದ ವ್ಯಾಪಕ ಛೀಮಾರಿ ವ್ಯಕ್ತವಾಗಿತ್ತು. ಅಂದಿನಿಂದ ಭಾರತಕ್ಕೆ ಟ್ರೋಫಿ ಕೊಡಲು ನಿರಾಕರಿಸಿದ ನಖ್ವಿ, ಕಪ್ ಮತ್ತು ವಿಜೇತ ಪದಕಗಳನ್ನು ತನ್ನ ದುಬೈ ಕಚೇರಿಯಲ್ಲಿ ಲಾಕ್ ಮಾಡಿ ಇರಿಸಿದ್ದಾರೆ. ಬಿಸಿಸಿಐ ಹಲವು ಬಾರಿ ಹಿಂತಿರುಗಿಸುವಂತೆ ಖಡಕ್ ಎಚ್ಚರಿಕೆ ರವಾನಿಸಿದ್ದೇ ಆದರೂ ಪಾಕ್ ಅಧ್ಯಕ್ಷನ ನಾಟಕಗಳು ಮುಗಿಯಲಿಲ್ಲ. ಆದರೀಗ, ಈ ವಿವಾದಕ್ಕೆ ಸ್ವತಃ ಐಸಿಸಿಯೇ ಎಳ್ಳು-ನೀರು ಬಿಟ್ಟಿದೆ ಎಂದು ಕ್ರಿಕೆಟ್ ವರದಿಗಳು ಉಲ್ಲೇಖಿಸಿವೆ.
ದುಬೈನಲ್ಲಿ ಇತ್ತೀಚೆಗೆ ನಡೆದ ಐಸಿಸಿ ಸಭೆಯ ಸಂದರ್ಭದಲ್ಲಿ ಎರಡೂ ಮಂಡಳಿಗಳು ಭಾಗಿಯಾಗಿ, ಏಷ್ಯಾ ಕಪ್ ಟ್ರೋಫಿ ವಿವಾದವನ್ನು ಬಗೆಹರಿಸಿಕೊಳ್ಳುವುದಾಗಿ ಒಪ್ಪಿಕೊಂಡಿವೆ ಎಂದು ವರದಿಯಾಗಿದೆ. ಈ ಕುರಿತಂತೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಕೂಡ ಪ್ರತಿಕ್ರಿಯಿಸಿದ್ದಾರೆ. "ನಾನು ಐಸಿಸಿಯ ಸಭೆಯಲ್ಲಿ ಭಾಗವಹಿಸಿದ್ದೆ. ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಕೂಡ ಹಾಜರಿದ್ದರು. ಇದು ನಮಗಾಗಿ ಮಾಡಿದ ಸಭೆಯಲ್ಲ. ಆದರೆ, ಈ ವಿಷಯಕ್ಕೆ ಸಂಬಂಧಿಸಿದಂತೆ ಐಸಿಸಿ ಮಧ್ಯಸ್ಥಿಕೆ ವಹಿಸಿ, ಶೀಘ್ರವೇ ವಿವಾದಕ್ಕೆ ತೆರೆ ಎಳೆಯಿರಿ ಎಂದು ತಿಳಿಸಿದೆ ಎಂದರು,(ಏಜೆನ್ಸೀಸ್).