ನನಗೆ ಮಾತ್ರವಲ್ಲ ಅವರ ಮಗಳಿಗೂ... ಮೊದಲ ಸಿನಿಮಾದಲ್ಲಿ ಆದ ಬೇಸರ ನೆನೆದ 'ಮಹಾನಟಿ' | Keerthy Suresh

Untitled design (47)
Published on

ಚೆನ್ನೈ: ಸೌತ್​​ ಸಿನಿಮಾದ ಹೆಸರಾಂತ ನಾಯಕರ ಜತೆ ನಟಿ ಕೀರ್ತಿ ಸುರೇಶ್ (Keerthy Suresh)​​ ಕೆಲಸ ಮಾಡಿದ್ದಾರೆ. ಶಿಸ್ತಿನ ಜೀವನ ಶೈಲಿ ಪಾಲಿಸುವ ಕೀರ್ತಿ,​ ಯಾವುದೇ ಪಾತ್ರ ನೀಡಿದರೂ ಅದಕ್ಕೆ ಜೀವ ತುಂಬುತ್ತಾರೆ ಎಂಬುದು ಬಹುತೇಕ ಸಿನಿಪ್ರಿಯರಿಗೆ ಗೊತ್ತಿರುವ ಸಂಗತಿಯೇ. ಇದಕ್ಕೆ ಇನ್ನೊಂದು ಬಲವಾದ ಸಾಕ್ಷಿ ಅವರಿಗೆ ಸಿಕ್ಕ ರಾಷ್ಟ್ರಪ್ರಶಸ್ತಿ.

'ಮಹಾನಟಿ' ಟಾಲಿವುಡ್​​ನ ಹೆಸರಾಂತ ಹಿರಿಯ ನಟಿ ಸಾವಿತ್ರಿ ಅವರ ಜೀವನ ಆಧರಿತ ಚಿತ್ರ. ಈ ಸಿನಿಮಾದಲ್ಲಿ ಸಾವಿತ್ರಿ ಅವರಂತೆಯೇ ಕಾಣಿಸಿಕೊಂಡ ಕೀರ್ತಿ, ಆ ಪಾತ್ರಕ್ಕೆ ಜೀವ ತುಂಬಿದ ಕಾರಣಕ್ಕೆ ನ್ಯಾಷನಲ್​ ಅವಾರ್ಡ್​​​ ಸ್ವೀಕರಿಸಿದರು. ಇದಾದ ಬಳಿಕ ಬಾಲಿವುಡ್​ಗೂ ಹಾರಿದ ಸೌತ್ ಬ್ಯೂಟಿ, 'ಬೇಬಿ ಜಾನ್'​ ಮೂಲಕ ಹಿಂದಿ ಸಿನಿಪ್ರೇಕ್ಷಕರಿಗೆ ಹತ್ತಿರವಾಗಲು ಪ್ರಯತ್ನಿಸಿದರು. ಆದರೆ, ಚಿತ್ರ ಫ್ಲಾಪ್​ ಆದ ಕಾರಣ ಹಿನ್ನಡೆ ಅನುಭವಿಸಿದರು.

ಪ್ರಸ್ತುತ, ಚಿತ್ರೋದ್ಯಮದಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ಕೀರ್ತಿ ಸುರೇಶ್​, ತಮ್ಮ ಮೊದಲ ಸಿನಿಮಾದ ಚಿತ್ರೀಕರಣ ವೇಳೆ ನಡೆದ ಘಟನೆಯೊಂದರ ಬಗ್ಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಅವರ ಮೊದಲ ಚಿತ್ರ ಮಲಯಾಳಂನಲ್ಲಿ ಬಿಡುಗಡೆಯಾದ 'ಗೀತಾಂಜಲಿ'. ಈ ಚಿತ್ರವನ್ನು ಡೈರೆಕ್ಟರ್​ ಪ್ರಿಯದರ್ಶನ್ ನಿರ್ದೇಶಿಸಿದ್ದಾರೆ. ಅಂದು ಚಿತ್ರದ ಚಿತ್ರೀಕರಣದ ಸಮಯದಲ್ಲಿ, ಪ್ರಿಯದರ್ಶನ್ ಎಲ್ಲರ ಮುಂದೆ ಕೀರ್ತಿ ಸುರೇಶ್ ಅವರ ಮೇಲೆ ಕಿರುಚಾಡಿದ್ದರಂತೆ.

ನಿರ್ದೇಶಕರ ಮಾತಿನಿಂದ ಕೀರ್ತಿ ಕಣ್ಣೀರು ಹಾಕಿದ್ದಾಗಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ 'ಮಹಾನಟಿ', "ಗೀತಾಂಜಲಿ ನನ್ನ ವೃತ್ತಿಜೀವನದ ಮೊದಲ ಸಿನಿಮಾ. ಈ ಚಿತ್ರವನ್ನು ನಿರ್ದೇಶಕ ಪ್ರಿಯದರ್ಶನ್ (ನಾಯಕಿ ಕಲ್ಯಾಣಿ ಪ್ರಿಯದರ್ಶನ್​) ಅವರ ತಂದೆ ನಿರ್ದೇಶಿಸಿದರು. ನಾವು ಒಂದು ದೃಶ್ಯವನ್ನು ಮಾಡುತ್ತಿರುವಾಗ, ಅವರು ನನ್ನ ಬಳಿ ಬಂದು, 'ಆ ದೃಶ್ಯವನ್ನು ಎಷ್ಟು ಕೆಟ್ಟದಾಗಿ ಮಾಡಿದ್ದೀರಾ ಅಂತ ನಿಮಗೆ ಗೊತ್ತಾ? ಒಮ್ಮೆ ಮಾನಿಟರ್‌ನಲ್ಲಿ ಹೋಗಿ ನೋಡಿ' ಎಂದರು. ಆ ಮಾತನ್ನು ಎಲ್ಲರ ಮುಂದೆಯೇ ಕೂಗಿ ಹೇಳಿದರು. ಆಗ ಬೇಸರದಿಂದ ನಾನು ಕಣ್ಣೀರಿಟ್ಟೆ" ಎಂದು ಕೀರ್ತಿ ಹೇಳಿಕೊಂಡಿದ್ದಾರೆ.

"ಅವರು ನನ್ನ ಮೇಲೆ ಮಾತ್ರವಲ್ಲ, ಅವರ ಮಗಳಾದ ಕಲ್ಯಾಣಿಗೂ ಹಾಗೆಯೇ ಗದರುತ್ತಾರೆ" ಎಂದು ಕೀರ್ತಿ ಸುರೇಶ್ ಹೇಳಿದ್ದಾರೆ. ಪ್ರಸ್ತುತ, ನಾಲ್ಕೈದು ಸಿನಿಮಾಗಳಿಗೆ ಸಹಿ ಹಾಕಿರುವ ಕೀರ್ತಿ, ದಾಂಪತ್ಯದ ಬಳಿಕ ಚಿತ್ರರಂಗದಲ್ಲಿ ಸಖತ್ ಬಿಜಿಯಾಗಿರುವುದು ಅವರ ಅಭಿಮಾನಿಗಳಲ್ಲಿ ಖುಷಿ ನೀಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net