Asia Cup: ಶುಭಾರಂಭದ ತವಕದಲ್ಲಿ ಟೀಮ್​ ಇಂಡಿಯಾ; ಸೂರ್ಯಕುಮಾರ್​ ಬಳಗಕ್ಕೆ ಇಂದು ಯುಎಇ ಸವಾಲು

web asia
Published on

ದುಬೈ: ಒಂದು ತಿಂಗಳು, 5 ದಿನಗಳ ಬಳಿಕ ಟೀಮ್​ ಇಂಡಿಯಾ ಮರಳಿ ಕಣಕ್ಕಿಳಿಯಲು ಸಜ್ಜಾಗಿದೆ. ಏಷ್ಯಾಕಪ್​ ಟಿ20 ಟೂರ್ನಿಯಲ್ಲಿ ಭಾರತ ತಂಡ ಬುಧವಾರ ಯುಎಇ ತಂಡವನ್ನು ಎದುರಿಸಲಿದ್ದು, ಶುಭಾರಂಭ ಕಾಣುವ ತವಕದಲ್ಲಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾನುವಾರ ನಡೆಯಲಿರುವ ಹೈ&ವೋಲ್ಟೇಜ್​ ಕಾದಾಟಕ್ಕೆ ಮುನ್ನ ಸೂರ್ಯಕುಮಾರ್​ ಯಾದವ್​ ಬಳಗಕ್ಕೆ ಇದು ಅಭ್ಯಾಸ ಪಂದ್ಯದಂತೆ ಲಾಭದಾಯಕವಾಗುವ ನಿರೀಕ್ಷೆ ಇದೆ.

ಗೌತಮ್​ ಗಂಭೀರ್​ ಮುಖ್ಯ ಕೋಚ್​ ಆದ ಬಳಿಕ ಭಾರತ, ಬೌಲಿಂಗ್​ ಜತೆಗೆ ಬ್ಯಾಟಿಂಗ್​ ವಿಭಾಗವನ್ನು 8ನೇ ಕ್ರಮಾಂಕದವರೆಗೂ ವಿಸ್ತರಿಸುವ ಕಾರ್ಯತಂತ್ರ ಅನುಸರಿಸಿದೆ. ಇದೇ ಕಾರಣದಿಂದ ಏಷ್ಯಾಕಪ್​ ತಂಡದಲ್ಲೂ ಆಲ್ರೌಂಡರ್​ಗಳು ಮತ್ತು ಬ್ಯಾಟಿಂಗ್​ ಸಾಮರ್ಥ್ಯವಿರುವ ಬೌಲರ್​ಗಳು ಮತ್ತು ಅರೆಕಾಲಿಕ ಬೌಲಿಂಗ್​ ಕೂಡ ಮಾಡಬಲ್ಲ ಬ್ಯಾಟರ್​ಗಳಿಗೆ ಆದ್ಯತೆ ನೀಡಲಾಗಿದೆ. ಪಾಕ್​ ವಿರುದ್ಧದ ಪಂದ್ಯಕ್ಕೆ ಮುನ್ನ ತಂಡ ಸಂಯೋಜನೆಯನ್ನು ಅಂತಿಮಗೊಳಿಸಲು ಮತ್ತು ದೋಷಗಳನ್ನು ಸರಿಪಡಿಸಿಕೊಳ್ಳಲು ಭಾರತ ತಂಡಕ್ಕೆ ಇದು ಉತ್ತಮ ಅವಕಾಶವೆನಿಸಿದೆ. ಭಾರತ ತಂಡ ಕಳೆದ ಫೆಬ್ರವರಿ ನಂತರ ಮೊದಲ ಬಾರಿಗೆ ಟಿ20 ಪಂದ್ಯ ಆಡಲಿದೆ.

ಯುಎಇ ತಂಡಕ್ಕೆ ಭಾರತ ವಿರುದ್ಧದ ಪಂದ್ಯ ದೊಡ್ಡ ಅವಕಾಶವಾಗಿದ್ದು, ಸ್ಟಾರ್​ ವೇಗಿ ಜಸ್​ಪ್ರೀತ್​ ಬುಮ್ರಾರನ್ನು ಎದುರಿಸುವ ಸವಾಲು ಹೊಂದಿದೆ. ಇತ್ತೀಚೆಗೆ ತವರಿನಲ್ಲೇ ಆಡಿದ ತ್ರಿಕೋನ ಟಿ20 ಸರಣಿಯಲ್ಲಿ ಯುಎಇ ಒಂದೂ ಪಂದ್ಯ ಗೆಲ್ಲದಿದ್ದರೂ, ಪಾಕಿಸ್ತಾನ, ಅಫ್ಘಾನಿಸ್ತಾನಕ್ಕೆ ಸೋಲಿನ ಭೀತಿ ಹುಟ್ಟಿಸಿತ್ತು ಎಂಬುದು ಗಮನಾರ್ಹ. ಭಾರತದವರೇ ಆದ ಮತ್ತು 2007ರ ಟಿ20 ವಿಶ್ವಕಪ್​ ಗೆಲುವಿನ ವೇಳೆ ತಂಡದ ತರಬೇತುದಾರರಾಗಿದ್ದ ಲಾಲ್​ಚಂದ್​ ರಜಪೂತ್​, ಯುಎಇ ತಂಡಕ್ಕೆ ಕೋಚ್​ ಆಗಿದ್ದಾರೆ.

ಸ್ಯಾಮ್ಸನ್​ ಔಟ್​?

ವಿಕೆಟ್​ ಕೀಪರ್​-ಬ್ಯಾಟರ್​ ಸಂಜು ಸ್ಯಾಮ್ಸನ್​ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯುವರೇ ಇಲ್ಲವೇ ಎಂಬುದು ಏಷ್ಯಾಕಪ್​ಗೆ ಮುನ್ನ ಕಾಡುತ್ತಿರುವ ಬಹುದೊಡ್ಡ ಯಕ್ಷ ಪ್ರಶ್ನೆಯಾಗಿದೆ. ಮಂಗಳವಾರ ನಡೆದ ನಾಯಕರ ಸುದ್ದಿಗೋಷ್ಠಿಯಲ್ಲೂ ಸೂರ್ಯಕುಮಾರ್​ಗೆ ಈ ಪ್ರಶ್ನೆ ಕೇಳಲಾಯಿತು. ಆದರೆ ಅವರು ಸ್ಪಷ್ಟ ಉತ್ತರ ನೀಡದೆ, "ಸ್ಯಾಮ್ಸನ್​ ಬಗ್ಗೆ ನಮಗೂ ಕಾಳಜಿ ಇದೆ. ನಾವು ಪಂದ್ಯಕ್ಕೆ ಮುನ್ನ ಸರಿಯಾದ ನಿರ್ಧಾರವನ್ನೇ ತೆಗೆದುಕೊಳ್ಳಲಿದ್ದೇವೆ' ಎಂದಿದ್ದಾರೆ. ಹೀಗಾಗಿ, ಆರಂಭಿಕನ ಸ್ಥಾನ ಲಭ್ಯವಿರದ ಕಾರಣ ಸ್ಯಾಮ್ಸನ್​ರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ. ಸದ್ಯಕ್ಕೆ ಜಿತೇಶ್​ ಶರ್ಮ ಕೀಪರ್​&ಮಧ್ಯಮ ಕ್ರಮಾಂಕದ ಬ್ಯಾಟರ್​ ರೇಸ್​ನಲ್ಲಿ ಮುಂಚೂಣಿಯಲ್ಲಿದ್ದಾರೆ.

ಟಿ20ಗೆ ಗಿಲ್​ ರೀಎಂಟ್ರಿ

ಕಳೆದ ಇಂಗ್ಲೆಂಡ್​ ಪ್ರವಾಸದಲ್ಲಿ ಭಾರತ ಟೆಸ್ಟ್​ ತಂಡದ ನಾಯಕರಾಗಿ ಮಿಂಚಿರುವ ಶುಭಮಾನ್​ ಗಿಲ್​ ಇದೀಗ ಟಿ20 ತಂಡಕ್ಕೆ ಉಪನಾಯಕರಾಗಿ ಮರಳುತ್ತಿದ್ದಾರೆ. ಗೆಳೆಯ ಹಾಗೂ ವಿಶ್ವ ನಂ. 1 ಟಿ20 ಬ್ಯಾಟರ್​ ಅಭಿಷೇಕ್​ ಶರ್ಮ ಜತೆಗೆ ಇನಿಂಗ್ಸ್​ ಆರಂಭಿಸಲಿದ್ದಾರೆ. ಗಿಲ್​ 2024ರ ಜುಲೈ ನಂತರ ಭಾರತ ಪರ ಮೊದಲ ಟಿ20 ಪಂದ್ಯ ಆಡಲಿದ್ದಾರೆ. ವಿಶ್ವ ನಂ. 2 ಟಿ20 ಬ್ಯಾಟರ್​ ತಿಲಕ್​ ವರ್ಮ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಹಾರ್ದಿಕ್​ ಲಭ್ಯತೆಯಿಂದ ಮತ್ತೋರ್ವ ವೇಗದ ಬೌಲಿಂಗ್​ ಆಲ್ರೌಂಡರ್​ ಶಿವಂ ದುಬೆಗೆ ಆಡುವ 11ರ ಬಳಗದಲ್ಲಿ ಸ್ಥಾನ ಕಷ್ಟವೆನಿಸಿದೆ.

ಟೀಮ್​ ನ್ಯೂಸ್​:

ಭಾರತ: ವಿಕೆಟ್​ ಕೀಪರ್​ ಮತ್ತು 2ನೇ ವೇಗದ ಬೌಲರ್​ ಯಾರು ಎಂಬುದು ಭಾರತ ತಂಡದ ಆಡುವ 11ರ ಬಳಗದ ಆಯ್ಕೆಯಲ್ಲಿರುವ ದೊಡ್ಡ ಕುತೂಹಲವಾಗಿದೆ. ಅಭಿಷೇಕ್​ ಜತೆ ಉಪನಾಯಕ ಗಿಲ್​ ಇನಿಂಗ್ಸ್​ ಆರಂಭಿಸಲಿರುವುದರಿಂದ ಸ್ಯಾಮ್ಸನ್​ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಜಿತೇಶ್​ ಶರ್ಮ ಕೀಪಿಂಗ್​ ಜತೆಗೆ 5ನೇ ಕ್ರಮಾಂಕದಲ್ಲಿ ಫಿನಿಷರ್​ ಪಾತ್ರ ನಿರ್ವಹಿಸಬಹುದು. ಬ್ಯಾಟಿಂಗ್​ ಸಾಮರ್ಥ್ಯದಿಂದಾಗಿ ಅರ್ಷದೀಪ್​ ಸಿಂಗ್​ರನ್ನು ಹಿಂದಿಕ್ಕಿ ಹರ್ಷಿತ್​ ರಾಣಾ 2ನೇ ವೇಗಿಯ ಸ್ಥಾನ ತುಂಬುವ ನಿರೀಕ್ಷೆ ಇದೆ. ವರುಣ್​ ಚಕ್ರವರ್ತಿ ಮತ್ತು ಕುಲದೀಪ್​ ತಜ್ಞ ಸ್ಪಿನ್ನರ್​ ಸ್ಥಾನ ತುಂಬಲಿದ್ದಾರೆ. ಆಲ್ರೌಂಡರ್​ಗಳಾದ ಹಾರ್ದಿಕ್​&ಅಕ್ಷರ್​ ಉಪಸ್ಥಿತಿಯಿಂದ ಭಾರತ ನಾಲ್ವರು ತಜ್ಞ ಬೌಲರ್​ಗಳೊಂದಿಗೆ ಆಡುವುದು ಖಚಿತ ಎನ್ನಬಹುದು.

ಸಂಭಾವ್ಯ ತಂಡ: ಅಭಿಷೇಕ್​ ಶರ್ಮ, ಶುಭಮಾನ್​ ಗಿಲ್​, ತಿಲಕ್​ ವರ್ಮ, ಸೂರ್ಯಕುಮಾರ್​ (ನಾಯಕ), ಜಿತೇಶ್​ ಶರ್ಮ (ವಿ.ಕೀ), ಹಾರ್ದಿಕ್​ ಪಾಂಡ್ಯ, ಅಕ್ಷರ್​ ಪಟೇಲ್​, ಹರ್ಷಿತ್​ ರಾಣಾ/ಅರ್ಷದೀಪ್​ ಸಿಂಗ್​, ಕುಲದೀಪ್​ ಯಾದವ್​, ಜಸ್​ಪ್ರೀತ್​ ಬುಮ್ರಾ, ವರುಣ್​ ಚಕ್ರವರ್ತಿ.

ಯುಎಇ: ನಾಯಕ ವಸೀಮ್​ ಜತೆಗೆ ಅಲಿಶನ್​ ಶರಾು ಇನಿಂಗ್ಸ್​ ಆರಂಭಿಸಲಿದ್ದರೆ, ವಿಕೆಟ್​ ಕೀಪರ್​ ರಾಹುಲ್​ ಚೋಪ್ರಾ ಮತ್ತು ಆಸಿಫ್​ ಖಾನ್​ ಅಗ್ರ ಕ್ರಮಾಂಕಕ್ಕೆ ಬಲ ತುಂಬಲಿದ್ದಾರೆ. ಜುನೈದ್​ ಸಿದ್ದಿಕ್​, ಮುಹಮ್ಮದ್​ ರೋಹಿದ್​ ಮತ್ತು ಹೈದರ್​ ಅಲಿ ತಂಡದ ಅಗ್ರ ಬೌಲರ್​ಗಳಾಗಿದ್ದಾರೆ.

ಸಂಭಾವ್ಯ ತಂಡ: ಮುಹಮ್ಮದ್​ ವಸೀಮ್​ (ನಾಯಕ), ಅಲಿಶನ್​ ಶರಾು, ರಾಹುಲ್​ ಚೋಪ್ರಾ (ವಿ.ಕೀ), ಆಸಿಫ್​ ಖಾನ್​, ಮುಹಮ್ಮದ್ ಫಾರೂಕ್​, ಹರ್ಷಿತ್​ ಕೌಶಿಕ್​, ಮುಹಮ್ಮದ್​ ಜೊಹೈಬ್​, ಹೈದರ್​ ಅಲಿ, ಜುನೈದ್​ ಸಿದ್ದಿಕ್​, ಮುಹಮ್ಮದ್​ ರೋಹಿದ್​, ಸಿಮ್ರನ್​ಜೀತ್​ ಸಿಂಗ್​.

*ಆರಂಭ: ರಾತ್ರಿ 8.00

*ನೇರಪ್ರಸಾರ: ಸೋನಿ ಸ್ಪೋರ್ಟ್ಸ್​1, 5, ಸೋನಿ ಲೈವ್​.

ಪಿಚ್​ ರಿಪೋರ್ಟ್​

ಭಾರತ ಹಾಲಿ ವರ್ಷ ಮಾರ್ಚ್​ನಲ್ಲಿ ದುಬೈನಲ್ಲೇ ಆಡಿದ ಚಾಂಪಿಯನ್ಸ್​ ಟ್ರೋಫಿಯಲ್ಲಿ ನಾಲ್ವರು ಸ್ಪಿನ್ನರ್​ಗಳನ್ನು (ಜಡೇಜಾ-ಅಕ್ಷರ್​-ಕುಲದೀಪ್​-ಚಕ್ರವರ್ತಿ) ಬಳಸಿ ಅಮೋಘ ಯಶಸ್ಸು ಸಾಧಿಸಿತ್ತು. ಈ ಬಾರಿ ಉಪಖಂಡದ ತಂಡಗಳ ವಿರುದ್ಧವೇ ಸೆಣಸಲಿರುವುದರಿಂದ ಭಾರತ ಬೌಲಿಂಗ್​ ವಿಭಾಗದಲ್ಲಿ ವೇಗ&ಸ್ಪಿನ್​ ನಡುವೆ ಸಮತೋಲನ ಸಾಧಿಸುವ ಲೆಕ್ಕಾಚಾರದಲ್ಲಿದೆ. ದುಬೈನಲ್ಲಿ ಪ್ರಸಕ್ತ ಹೆಚ್ಚಿನ ಉಷ್ಣ ವಾತಾವರಣ ಇರುವುದರಿಂದ ಪಿಚ್​ ಈ ಬಾರಿ ಹೆಚ್ಚು ಹಸಿರಾಗಿರುವ ಮತ್ತು ಬೌನ್ಸ್​ನಿಂದ ಕೂಡಿರುವ ನಿರೀಕ್ಷೆ ಇದೆ.

*1: ಭಾರತ-ಯುಎಇ ನಡುವೆ ಇದುವರೆಗೆ ಕೇವಲ ಒಂದು ಟಿ20 ಪಂದ್ಯ ನಡೆದಿದೆ. 2016ರ ಏಷ್ಯಾಕಪ್​ನಲ್ಲಿ ನಡೆದ ಆ ಕಾದಾಟದಲ್ಲಿ ಭಾರತ 9 ವಿಕೆಟ್​ಗಳಿಂದ ಗೆದ್ದಿತ್ತು.

*24: ಕಳೆದ ವರ್ಷದ ಟಿ20 ವಿಶ್ವಕಪ್​ನಿಂದ ಭಾರತ ಇದುವರೆಗೆ ಆಡಿರುವ 27 ಟಿ20 ಪಂದ್ಯಗಳಲ್ಲಿ 24ರಲ್ಲಿ ಗೆದ್ದಿದ್ದು, 3ರಲ್ಲಿ ಮಾತ್ರ ಸೋತಿದೆ.

*ನಾವು ಟೂರ್ನಿಗೆ ಮುನ್ನ ಕೆಲ ಅಭ್ಯಾಸ ಅವಧಿಗಳಲ್ಲಿ ಪಾಲ್ಗೊಂಡಿದ್ದೇವೆ. ಏಷ್ಯಾದ ಅತ್ಯುತ್ತಮ ತಂಡಗಳ ಎದುರು ಆಡುವುದು ಉತ್ತಮ ಸವಾಲು ಆಗಿದೆ. ನಮಗೆ ಉತ್ತಮ ಫಲಿತಾಂಶಗಳನ್ನು ತಂದುಕೊಟ್ಟಿರುವ ಕಾರ್ಯತಂತ್ರಗಳನ್ನು ಬದಲಾಯಿಸಲು ಹೋಗುವುದಿಲ್ಲ.

| ಸೂರ್ಯಕುಮಾರ್​ ಯಾದವ್​, ಭಾರತ ಟಿ20 ನಾಯಕ

*ಶಾರ್ಜಾದಲ್ಲಿ ತ್ರಿಕೋನ ಸರಣಿ ಆಡುವ ಮೂಲಕ ನಾವು ಏಷ್ಯಾಕಪ್​ಗೆ ಉತ್ತಮ ಸಿದ್ಧತೆ ನಡೆಸಿದ್ದೇವೆ. ವಿಶ್ವ ಕ್ರಿಕೆಟ್​ನ ಅತ್ಯುತ್ತಮ ತಂಡವಾಗಿರುವ ಭಾರತದ ವಿರುದ್ಧ ನಮಗೆ ಕಠಿಣ ಸವಾಲು ಎದುರಾಗಲಿದೆ. ಆದರೆ ನಾವು ಭಾರತಕ್ಕೆ ಸುಲಭವಾಗಿ ಗೆಲುವು ಬಿಟ್ಟುಕೊಡಲಾರೆವು.

| ಲಾಲ್​ಚಂದ್​ ರಜಪೂತ್​, ಯುಎಇ ಕೋಚ್​

ಗಿಲ್​ಗೆ ಬಾಲ್ಯದ ಗೆಳೆಯ ಎದುರಾಳಿ!

ಭಾರತದ ಸ್ಟಾರ್​ ಬ್ಯಾಟರ್​ ಶುಭಮಾನ್​ ಗಿಲ್​ಗೆ ಯುಎಇ ವಿರುದ್ಧದ ಪಂದ್ಯದಲ್ಲಿ ಬಾಲ್ಯದ ಗೆಳೆಯನ ಸವಾಲು ಎದುರಾಗಲಿದೆ. ಅವರೇ ಯುಎಇ ತಂಡದಲ್ಲಿರುವ ಭಾರತ ಮೂಲದ ಎಡಗೈ ಸ್ಪಿನ್ನರ್​ ಸಿಮ್ರನ್​ಜೀತ್​ ಸಿಂಗ್​. 2011-12ರಲ್ಲಿ ಗಿಲ್​ 12 ವಯಸ್ಸಿನ ಪ್ರತಿಭಾನ್ವಿತ ಬ್ಯಾಟರ್​ ಆಗಿದ್ದಾಗ ಮೊಹಾಲಿಯ ಪಿಸಿಎ ಅಕಾಡೆಮಿಯ ನೆಟ್ಸ್​ನಲ್ಲಿ ಬೌಲಿಂಗ್​ ಮಾಡಿದ್ದೆ. ಗಿಲ್​ ಆಗ ತಂದೆಯ ಜತೆಗೆ ಅಭ್ಯಾಸಕ್ಕೆ ಆಗಮಿಸುತ್ತಿದ್ದರು. ಈಗ ಅವರಿಗೆ ನನ್ನ ಪರಿಚಯವಿದೆಯೇ ಗೊತ್ತಿಲ್ಲ ಎಂದು 35 ವರ್ಷದ ಸಿಮ್ರನ್​ಜೀತ್​ ಹೇಳಿದ್ದಾರೆ. ಅವರು ಯುಎಇ ಪರ ಇದುವರೆಗೆ ಆಡಿರುವ 12 ಟಿ20 ಪಂದ್ಯಗಳಲ್ಲಿ 15 ವಿಕೆಟ್​ ಕಬಳಿಸಿದ್ದಾರೆ. 2021ರ ಏಪ್ರಿಲ್​ನಲ್ಲಿ ಯುಎಇಗೆ ಹೋಗಿದ್ದಾಗ ಕರೋನಾ 2ನೇ ಅಲೆಯ ವೇಳೆ ಅಲ್ಲೇ ಲಾಕ್​ ಆಗಿದ್ದ ಸಿಮ್ರನ್​ಜೀತ್​, ನಂತರ ಅಲ್ಲಿ 3 ವರ್ಷಗಳ ಕಾಲ ದೇಶೀಯ ಕ್ರಿಕೆಟ್​ನಲ್ಲಿ ಯುಎಇ ಪರ ಆಡಲು ಅರ್ಹರಾಗಿದ್ದರು.

ಪಾಕ್​ ಎದುರು ಆಕ್ರಮಣ, ಸೂರ್ಯ ಸುಳಿವು

ಪಹಲ್ಗಾಮ್​ ಉಗ್ರರ ದಾಳಿ ಮತ್ತು ಆಪರೇಷನ್​ ಸಿಂಧೂರ್​ ಬಳಿಕ ಪಾಕಿಸ್ತಾನ ವಿರುದ್ಧ ಮೊದಲ ಬಾರಿ ಆಡಲಿರುವ ಭಾರತ ತಂಡ, ಆಕ್ರಮಣಕಾರಿ ಆಟವಾಡುವ ಸುಳಿವನ್ನು ನಾಯಕ ಸೂರ್ಯಕುಮಾರ್​ ನೀಡಿದ್ದಾರೆ. "ಮೈದಾನದಲ್ಲಿ ಆಕ್ರಮಣ ಯಾವಾಗಲೂ ಇರುತ್ತದೆ. ಅದು ಇಲ್ಲದೆ ಗೆಲ್ಲಲಾಗದು' ಎಂದು ಸೂರ್ಯಕುಮಾರ್​, ಮಂಗಳವಾರ ನಡೆದ ನಾಯಕರ ಸಭೆಯಲ್ಲಿ ಪಾಕ್​ ವಿರುದ್ಧದ ಪಂದ್ಯದಲ್ಲಿನ ಆಕ್ರಮಣದ ಬಗೆಗಿನ ಪ್ರಶ್ನೆಗೆ ಉತ್ತರಿಸಿದರು. ಇದೇ ಪ್ರಶ್ನೆಯನ್ನು ಪಾಕ್​ ನಾಯಕ ಸಲ್ಮಾನ್​ ಅಘಾಗೆ ಕೇಳಿದಾಗ, "ಯಾರಾದರೂ ಆಕ್ರಮಣಕಾರಿ ಆಡಬೇಕೆಂದಿದ್ದರೆ ಅದು ಅವರ ನಿರ್ಧಾರಕ್ಕೆ ಬಿಟ್ಟಿದ್ದು. ನಾನು ಯಾರ ಮೇಲೂ ರ್ನಿಬಂಧ ಹೇರುವುದಿಲ್ಲ' ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net