

Asia Cup Handshake Controversy : ಪ್ರಸ್ತುತ ನಡೆಯುತ್ತಿರುವ ಏಷ್ಯಾ ಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದ ಬಳಿಕ ಹ್ಯಾಂಡ್ಶೇಕ್ ವಿವಾದ ಭುಗಿಲೆದ್ದಿರುವುದು ಎಲ್ಲರಿಗೂ ಗೊತ್ತೇ ಇದೆ. ಭಾನುವಾರ (ಸೆ.14) ನಡೆದ ಪಂದ್ಯದ ಬಳಿಕ ಭಾರತೀಯ ಆಟಗಾರರು ಪಾಕಿಸ್ತಾನಿ ಆಟಗಾರರೊಂದಿಗೆ ಹ್ಯಾಂಡ್ಶೇಕ್ ಮಾಡಲು ನಿರಾಕರಿಸಿದರು. ಅದಕ್ಕೆ ಕಾರಣ ಏನು ಅನ್ನೋದು ಎಲ್ಲರಿಗು ತಿಳಿದಿದೆ. ಆದರೂ ನಾವು ಒಮ್ಮೆ ತಿಳಿಸಿಬಿಡುತ್ತೇವೆ. ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಅದಕ್ಕೆ ಪ್ರತೀಕಾರವಾಗಿ ನಡೆದ ಆಪರೇಷನ್ ಸಿಂಧೂರದಂತಹ ಬೆಳವಣಿಗೆಗಳ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಪಹಲ್ಗಾಮ್ ದಾಳಿಯ ಹಿಂದೆ ಪಾಕ್ ಕೈವಾಡ ಇರುವುದು ಸ್ಪಷ್ಟವಾಗಿರುವ ಹಿನ್ನೆಲೆಯಲ್ಲಿ, ಪಾಕ್ನೊಂದಿಗೆ ಪಂದ್ಯವನ್ನು ಆಡುವುದರ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದವು. ಭಾರಿ ವಿರೋಧದ ನಡುವೆಯೂ ಐಸಿಸಿ ನಿಯಮಗಳ ಪ್ರಕಾರ ಟೀಮ್ ಇಂಡಿಯಾ ಅನಿವಾರ್ಯವಾಗಿ ಪಂದ್ಯವನ್ನು ಆಡಲೇಬೇಕಾಯಿತು. ಅಲ್ಲದೆ, ಈ ಪಂದ್ಯದಲ್ಲಿ ಬೆಣ್ಣೆ ತಿಂದಂತೆ ಸುಲಭವಾಗಿ ಪಾಕಿಸ್ತಾನವನ್ನು ಭಾರತ ಸೋಲಿಸಿತು.
ಸೋಲಿನ ಹತಾಶೆ ಒಂದೆಡೆಯಾದರೆ, ಟೀಮ್ ಇಂಡಿಯಾ ಆಟಗಾರರು ಹ್ಯಾಂಡ್ಶೇಕ್ ನೀಡದೇ ಇದ್ದಿದ್ದು ಪಾಕ್ಗೆ ಭಾರಿ ಮುಖಭಂಗವಾಯಿತು. ಬಿಸಿಸಿಐ ಸಲಹೆಯಂತೆ ಟೀಮ್ ಇಂಡಿಯಾ ಹ್ಯಾಂಡ್ಶೇಕ್-ನೋ ನೀತಿಯನ್ನು ಅನುಸರಿಸಿರುವಂತೆ ತೋರುತ್ತದೆ. ಇದನ್ನು ವಿರೋಧಿಸಿದ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಆಘಾ ಪಂದ್ಯದ ನಂತರದ ಪ್ರಸ್ತುತಿಗೆ ಹಾಜರಾಗಲೇ ಇಲ್ಲ.
ಇನ್ನು ಈ ಘಟನೆಯ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ), ಐಸಿಸಿ ಮತ್ತು ಎಸಿಸಿಗೆ ದೂರು ನೀಡಿದೆ. ಭಾರತ-ಪಾಕಿಸ್ತಾನ ಪಂದ್ಯಕ್ಕೆ ರೆಫರಿಯಾಗಿದ್ದ ಆ್ಯಂಡಿ ಪೈಕ್ರಾಫ್ಟ್ ಅವರನ್ನು 2025ರ ಏಷ್ಯಾ ಕಪ್ನಿಂದ ತಕ್ಷಣವೇ ತೆಗೆದುಹಾಕಬೇಕೆಂದು ಪಿಸಿಬಿ ಒತ್ತಾಯಿಸಿದೆ. ಹ್ಯಾಂಡ್ಶೇಕ್ ಇಲ್ಲ ಎಂಬುದರ ಬಗ್ಗೆ ಪೈಕ್ರಾಫ್ಟ್ಗೆ ಮೊದಲೇ ತಿಳಿದಿತ್ತು ಎಂಬ ಗಂಭೀರ ಆರೋಪವನ್ನು ಮಾಡಿದೆ.
ಟಾಸ್ ಸಮಯದಲ್ಲಿ ಉಭಯ ತಂಡಗಳ ನಾಯಕರು ಮಾಡುವ ಹ್ಯಾಂಡ್ಶೇಕ್ ಇಲ್ಲದಿರುವ ಬಗ್ಗೆ ಪೈಕ್ರಾಫ್ಟ್ ಅವರು ನಮ್ಮ ನಾಯಕನಿಗೆ ಮೊದಲೇ ತಿಳಿಸಿದ್ದರು. ಆದರೆ ಪಂದ್ಯದ ನಂತರವೂ ಅದೇ ಅಭ್ಯಾಸ ಮುಂದುವರಿಯುತ್ತದೆ ಎಂದು ಅವರು ಹೇಳಲಿಲ್ಲ. ಕ್ರಿಕೆಟ್ನ ಉತ್ಸಾಹವನ್ನು ಇಲ್ಲಿ ಉಲ್ಲಂಘಿಸಲಾಗಿದೆ. ಹೀಗಾಗಿ ಮ್ಯಾಚ್ ರೆಫರಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಐಸಿಸಿಯನ್ನು ವಿನಂತಿಸಿದೆ. ಒಂದು ವೇಳೆ ಐಸಿಸಿ ಕ್ರಮ ಕೈಗೊಳ್ಳದಿದ್ದರೆ, ಯುಎಇ ವಿರುದ್ಧದ ತಮ್ಮ ಮುಂದಿನ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಿಸಿಬಿ ಬೆದರಿಕೆ ಹಾಕಿದೆ.
ಆದಾಗ್ಯೂ, ಏಷ್ಯಾ ಕಪ್ ಪಂದ್ಯದ ರೆಫರಿಗಳ ಸಮಿತಿಯಿಂದ ಆ್ಯಂಡಿ ಪೈಕ್ರಾಫ್ಟ್ ಅವರನ್ನು ತೆಗೆದುಹಾಕಬೇಕೆಂಬ ಪಿಸಿಬಿಯ ಮನವಿಯನ್ನು ಐಸಿಸಿ ತಿರಸ್ಕರಿಸಿದೆ ಎಂದು ತೋರುತ್ತದೆ. ಕ್ರಿಕ್ಬಜ್ ವರದಿ ಪ್ರಕಾರ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಅಂದರೆ, ಐಸಿಸಿ, ಪಿಸಿಬಿಯ ವಾದವನ್ನು ಒಪ್ಪಿಲ್ಲ ಎಂದು ತಿಳಿದುಬಂದಿದೆ. ಈ ಘಟನೆಗೂ ಪೈಕ್ರಾಫ್ಟ್ಗೂ ಯಾವುದೇ ಸಂಬಂಧವಿಲ್ಲ ಎಂದು ಐಸಿಸಿ, ಪಿಸಿಬಿಗೆ ತಿಳಿಸಿದೆ ಎಂದು ಹಲವಾರು ವರದಿಗಳು ಹೇಳಿವೆ. ಇದಿಷ್ಟೇ ಅಲ್ಲದೆ, ಎಂಸಿಸಿ ಕೈಪಿಡಿಯಲ್ಲಿ ಆಟಗಾರರು ಪರಸ್ಪರ ಕೈಕುಲುಕುವ ಅಗತ್ಯವಿಲ್ಲ ಎಂಬ ಅಂಶವಿರುವುದನ್ನು ಐಸಿಸಿ ಪ್ರತಿನಿಧಿಗಳು ಪಿಸಿಬಿ ಮುಖ್ಯಸ್ಥರಿಗೆ ಇಮೇಲ್ ಮಾಡಿದ್ದಾರೆ ಎಂಬ ವರದಿಗಳೂ ಇವೆ. ಆದರೆ, ಈ ವಿಷಯದ ಬಗ್ಗೆ ಐಸಿಸಿ ಅಧಿಕೃತವಾಗಿ ಪ್ರತಿಕ್ರಿಯಿಸಬೇಕಾಗಿದೆ. ಸದ್ಯ ಸೋಲಿನ ಬಳಿಕ ಹತಾಶೆಯ ಸುಳಿಯಲ್ಲಿ ಸಿಲುಕಿರುವ ಪಾಕ್ ಹೇಗೇಗೋ ಆಡುತ್ತಿದೆ. (ಏಜೆನ್ಸೀಸ್)