

Asia Cup 2025: ಇದೇ ಸೆ.9ರಿಂದ 28 ರವರೆಗೆ ದುಬೈನಲ್ಲಿ ನಡೆಯಲಿರುವ ಏಷ್ಯಾ ಕಪ್ 2025ರ ಟೂರ್ನಿಗೆ ಸದ್ಯ ಭಾರೀ ಕುತೂಹಲ ಕೆರಳಿದೆ. ನಾಯಕನಾಗಿ ಯಾರು ತಂಡವನ್ನು ಮುನ್ನಡೆಸಲಿದ್ದಾರೆ? ಯಾರೆಲ್ಲ ಸ್ಥಾನ ಪಡೆಯಲಿದ್ದಾರೆ? ಆರಂಭಿಕ ಬ್ಯಾಟರ್ಗಳು ಯಾರಿರಲಿದ್ದಾರೆ? ಎಂಬ ಹತ್ತು ಹಲವು ವಿಷಯಗಳು ಸದ್ಯ ಕ್ರಿಕೆಟ್ ಪ್ರಿಯರಲ್ಲಿ ಕಾಡುತ್ತಿದೆ.
ಭಾರತದ ಟೆಸ್ಟ್ ತಂಡವನ್ನು ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಯಶಸ್ವಿಯಾಗಿ ಕೊನೆಯವರೆಗೂ ಕೊಂಡೊಯ್ದ ಯುವ ಕ್ಯಾಪ್ಟನ್ ಶುಭಮನ್ ಗಿಲ್ಗೆ ಏಷ್ಯಾ ಕಪ್ನಲ್ಲಿ ಸ್ಥಾನ ಸಿಗಲಿದೆ ಎಂದೇ ಹಲವರು ಅಭಿಪ್ರಾಯಿಸಿದ್ದಾರೆ. ಆದರೆ, ಇದು ಅಸಾಧ್ಯ ಎನ್ನುವ ಮಾತು ಕೇಳಿಬಂದಿದೆ. ಟೀಮ್ ಇಂಡಿಯಾ ಪರ ಸ್ಟಾರ್ ಓಪನಿಂಗ್ ಆಟವನ್ನು ನೀಡುವ ಯಶಸ್ವಿ ಜೈಸ್ವಾಲ್ ಮತ್ತು ಗಿಲ್ಗೆ ಅವಕಾಶ ಸಿಗುವ ಸಾಧ್ಯತೆಗಳು ಕಡಿಮೆ ಎಂದು ವರದಿಯಾಗಿದೆ.
ಈ ಮಧ್ಯೆ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಏಷ್ಯಾ ಕಪ್ಗೆ ಮರಳುವ ಸಾಧ್ಯತೆಗಳಿವೆ. ಇನ್ನು ಆರ್ಸಿಬಿ ವಿಕೆಟ್ಕೀಪರ್-ಬ್ಯಾಟರ್ ಆಗಿರುವ ಜಿತೇಶ್ ಶರ್ಮಾ, ಏಷ್ಯಾಕಪ್ನಲ್ಲಿ ಉಪನಾಯಕನಾಗಿ ಕಣಕ್ಕಿಳಿಯಲಿದ್ದಾರೆ ಎಂದು ಕ್ರಿಕೆಟ್ ಮೂಲಗಳು ತಿಳಿಸಿವೆ. ಸದ್ಯದ ಮಟ್ಟಿಗೆ ಟೀಮ್ ಇಂಡಿಯಾ ತಂಡ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ. ಯಾರು ತಂಡದ ಜವಾಬ್ದಾರಿ ಹೊರಲಿದ್ದಾರೆ, ಯಾರೆಲ್ಲ ಆಡಲಿದ್ದಾರೆ? ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).