

ನವದೆಹಲಿ: ಮುಂಬರುವ ಉಪರಾಷ್ಟ್ರಪತಿ ಚುನಾವಣೆಗೆ ಸಿ.ಪಿ. ರಾಧಾಕೃಷ್ಣನ್ರನ್ನು ಎನ್ಡಿಎ ಅಭ್ಯರ್ಥಿಯಾಗಿ ಬಿಜೆಪಿ ಅಧಿಕೃತವಾಗಿ ಘೋಷಿಸಿದೆ. ದೆಹಲಿಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಪ್ರಸ್ತುತ ಮಹಾರಾಷ್ಟ್ರ ರಾಜ್ಯಪಾಲರಾಗಿರುವ ರಾಧಾಕೃಷ್ಣನ್ರನ್ನು ಎನ್ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಸುವುದಾಗಿ ಘೋಷಿಸಿದ್ದಾರೆ.
ಇಂದು ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಬಿಜೆಪಿಯ ಸಂಸದೀಯ ಮಂಡಳಿ ಸಭೆಯಲ್ಲಿ ರಾಧಾಕೃಷ್ಣನ್ ಅವರ ಹೆಸರನ್ನು ಪಕ್ಷ ಅಂತಿಮಗೊಳಿಸಿತು. ಇದೇ ಸೆಪ್ಟೆಂಬರ್ 9ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಗೆ ಎನ್ಡಿಎ ಅಭ್ಯರ್ಥಿಯಾಗಿ ಮಹಾರಾಷ್ಟ್ರ ರಾಜ್ಯಪಾಲರನ್ನು ಕಣಕ್ಕಿಳಿಸಲು ಭಾರತೀಯ ಜನತಾ ಪಕ್ಷ ನಿರ್ಧರಿಸಿದೆ.
ಈ ನಿರ್ಧಾರಕ್ಕೆ, ಜುಲೈ 21ರಂದು ಉಪರಾಷ್ಟ್ರಪತಿ ಹುದ್ದೆಗೆ ಜಗದೀಪ್ ಧನಕರ್ ಕೊಟ್ಟ ಹಠಾತ್ ರಾಜೀನಾಮೆಯೇ ಕಾರಣ. ಸಂಸತ್ತಿನ ಮಳೆಗಾಲದ ಅಧಿವೇಶನದ ಮಧ್ಯೆಯೇ ಆರೋಗ್ಯ ಸಮಸ್ಯೆಯನ್ನು ಮುಂದಿಟ್ಟ ಜಗದೀಪ್, ತಮ್ಮ ಹುದ್ದೆಯಿಂದ ಹೊರನಡೆಯುವುದಾಗಿ ರಾಜೀನಾಮೆ ಘೋಷಿಸಿದರು. ಇದರ ಬೆನ್ನಲ್ಲೇ, ಉಪರಾಷ್ಟ್ರಪತಿ ಚುನಾವಣಾ ರೇಸ್ಗೆ ಭಾರೀ ಪೈಪೋಟಿ ಶುರುವಾಯಿತು. ಈಗ ಎನ್ಡಿಎಯಿಂದ ರಾಧಾಕೃಷ್ಣನ್ ಅವರು ಅಖಾಡಕ್ಕಿಳಿದಿರುವುದು ಸದ್ಯ ಹಲವರ ಕುತೂಹಲಕ್ಕೆ ಕಾರಣವಾಗಿದೆ.