

ನವದೆಹಲಿ: ಮುಂಬರುವ ಏಷ್ಯಾ ಕಪ್ 2023 ಟೂರ್ನಿಯ ವೇಳಾಪಟ್ಟಿಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಇಂದು ಪ್ರಕಟಿಸಿದೆ. ಆಗಸ್ಟ್ 31 ರಿಂದ ಸೆಪ್ಟೆಂಬರ್ 17ರವರೆಗೆ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಏಷ್ಯಾಕಪ್ ನಡೆಯಲಿದೆ.
ಈ ಟೂರ್ನಮೆಂಟ್ ಅನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಾಗಿದೆ. ನಾಲ್ಕು ಪಂದ್ಯಗಳು ಪಾಕಿಸ್ತಾನದಲ್ಲಿ ನಡೆದರೆ, ಉಳಿದ 9 ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ. 15 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಏಷ್ಯಾ ಕಪ್ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿವೆ.
ಒಟ್ಟು 13 ಪಂದ್ಯಗಳಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ನೇಪಾಳ ಮುಖಾಮುಖಿಯಾಗಲಿವೆ ಎಂದು ಎಸಿಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
2023ರ ಏಷ್ಯಾ ಕಪ್ ಆವೃತ್ತಿಯಲ್ಲಿ ಎರಡು ಗುಂಪು ಇರಲಿವೆ. ಪ್ರತಿ ಗುಂಪಿನಿಂದ ಎರಡು ತಂಡಗಳು ಸೂಪರ್ ಫೋರ್ ಹಂತಕ್ಕೆ ಅರ್ಹತೆ ಪಡೆಯಲಿವೆ. ಈ ಹಂತ ಟಾಪ್ ಎರಡು ತಂಡಗಳು ಫೈನಲ್ನಲ್ಲಿ ಕಪ್ಗಾಗಿ ಸೆಣಸಾಡಲಿವೆ.
ಭದ್ರತಾ ದೃಷ್ಟಿಯಿಂದ ಹಾಗೂ ಪಾಕ್ನೊಂದಿಗೆ ಭಾರತ ದ್ವಿಪಕ್ಷೀಯ ಸಂಬಂಧವನ್ನು ಕಡೆದುಕೊಂಡಿರುವುದರಿಂದ ಟೀಮ್ ಇಂಡಿಯಾ ತನ್ನೆಲ್ಲ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ. (ಏಜೆನ್ಸೀಸ್)