

ರಾಜ್ಕೋಟ್: ಹಿರಿಯ ಆಫ್ ಸ್ಪಿನ್ನರ್ ಆರ್. ಅಶ್ವಿನ್ ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಕಬಳಿಸಿದ ವಿಶ್ವದ 9ನೇ ಬೌಲರ್ ಮತ್ತು 2ನೇ ಭಾರತೀಯರೆಂಬ ಮೈಲಿಗಲ್ಲನ್ನು ಶುಕ್ರವಾರ ರಾಜ್ಕೋಟ್ನಲ್ಲಿ ನೆಟ್ಟರು. ಈ ಸಂಭ್ರಮದ ಬೆನ್ನಲ್ಲೇ, ತಾಯಿಯ ಆರೋಗ್ಯ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಆರ್. ಅಶ್ವಿನ್ ರಾಜ್ಕೋಟ್ ಟೆಸ್ಟ್ ಪಂದ್ಯದಿಂದ ಹೊರನಡೆದಿದ್ದಾರೆ. ಇದರಿಂದ ಅವರು ಪಂದ್ಯದ ಉಳಿದ 3 ದಿನದಾಟದಲ್ಲಿ ಮೈದಾನಕ್ಕೆ ಇಳಿಯುವುದಿಲ್ಲ. ಅಶ್ವಿನ್ ಬದಲಿಗೆ ಬೇರೆ ಯಾವ ಆಟಗಾರರೂ ಬೌಲಿಂಗ್ ಅಥವಾ ಬ್ಯಾಟಿಂಗ್ ಮಾಡಲು ಅವಕಾಶವಿರುವುದಿಲ್ಲ. ಫೀಲ್ಡಿಂಗ್ ಮಾತ್ರ ಮಾಡಬಹುದಷ್ಟೆ. ಇದರಿಂದ ಭಾರತ ಪಂದ್ಯದ ಉಳಿದ ಮೂರು ದಿನ ಕೇವಲ 10 ಆಟಗಾರರೊಂದಿಗೆ ಆಡಬೇಕಾಗಿದೆ.
ಶುಕ್ರವಾರ ರಾತ್ರಿ ಬಿಸಿಸಿಐ ಈ ಬಗ್ಗೆ ಪ್ರಕಟಣೆ ನೀಡಿದ್ದು, ಅಶ್ವಿನ್ ಕುಟುಂಬದಲ್ಲಿ ವೈದ್ಯಕಿಯ ತುರ್ತುಸ್ಥಿತಿ ಇದೆ ಎಂದು ತಿಳಿಸಿದೆ. ಜತೆಗೆ ಈ ಸಮಯದಲ್ಲಿ ಮಂಡಳಿ ಅಶ್ವಿನ್ಗೆ ಸೂಕ್ತ ಸಹಕಾರ ನೀಡುತ್ತದೆ ಎಂದಿದೆ. ಜತೆಗೆ ಅವರ ಖಾಸಗಿ ಬದುಕನ್ನು ಗೌರವಿಸುವಂತೆ ಅಭಿಮಾನಿಗಳನ್ನು ಕೇಳಿಕೊಂಡಿದೆ.
ಅಶ್ವಿನ್ ದಿಗ್ಗಜ ಲೆಗ್ಸ್ಪಿನ್ನರ್ ಹಾಗೂ ಕನ್ನಡಿಗ ಅನಿಲ್ ಕುಂಬ್ಳೆ (619) ಅವರ ನಂತರದಲ್ಲಿ 500 ವಿಕೆಟ್ ಸಾಧನೆ ಮಾಡಿರುವ 2ನೇ ಭಾರತೀಯರಾಗಿದ್ದಾರೆ. 37 ವರ್ಷದ ಅಶ್ವಿನ್ ಈ ಸಾಧನೆ ಮಾಡಿದ ವಿಶ್ವದ 3ನೇ ಆಫ್ ಸ್ಪಿನ್ನರ್ ಆಗಿದ್ದಾರೆ. ಮುರಳೀಧರನ್ (800) ಮತ್ತು ನಾಥನ್ ಲ್ಯಾನ್ (517) ಮೊದಲಿಬ್ಬರು ಆಫ್ ಸ್ಪಿನ್ನರ್ಗಳಾಗಿದ್ದಾರೆ. ಇಂಗ್ಲೆಂಡ್ ಆರಂಭಿಕ ಜಾಕ್ ಕ್ರೌಲಿ ವಿಕೆಟ್ ಕಬಳಿಸುವ ಮೂಲಕ ಅಶ್ವಿನ್, ವೃತ್ತೀಜಿವನದ 98ನೇ ಟೆಸ್ಟ್ನಲ್ಲಿ ಈ ಸಾಧನೆ ಮಾಡಿದರು. ತಮಿಳುನಾಡಿನ ಅಶ್ವಿನ್ 2011ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು.