ಟಿ20 ವಿಶ್ವಕಪ್​ವರೆಗೂ ದ್ರಾವಿಡ್​ ಕೋಚ್​ ಹುದ್ದೆ ಭದ್ರ; ಖಚಿತಪಡಿಸಿದ ಜಯ್​ ಷಾ...

dravid web
Published on

ರಾಜ್​ಕೋಟ್​: ಕಳೆದ ವರ್ಷ ತವರಿನ ಏಕದಿನ ವಿಶ್ವಕಪ್​ ಮುಕ್ತಾಯಗೊಂಡ ಬಳಿಕವೂ ಅವಧಿ ವಿಸ್ತರಣೆಯೊಂದಿಗೆ ಟೀಮ್​ ಇಂಡಿಯಾ ಕೋಚ್​ ಆಗಿ ಮುಂದುವರಿದಿರುವ ರಾಹುಲ್​ ದ್ರಾವಿಡ್​, ಜೂನ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ವರೆಗೂ ಹುದ್ದೆಯಲ್ಲಿ ಇರಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್​ ಷಾ ಖಚಿತಪಡಿಸಿದ್ದಾರೆ.

ಏಕದಿನ ವಿಶ್ವಕಪ್​ ಬಳಿಕ ದ್ರಾವಿಡ್​ ಮತ್ತು ತಂಡದ ಇತರ ತರಬೇತಿ ಸಿಬ್ಬಂದಿ ಹುದ್ದೆಯಲ್ಲಿ ಮುಂದುವರಿದರೂ ಅವರ ಹೊಸ ಅವಧಿ ಎಷ್ಟು ಸಮಯದವರೆಗೆ ಎಂಬುದನ್ನು ಬಿಸಿಸಿಐ ಸ್ಪಷ್ಟಪಡಿಸಿರಲಿಲ್ಲ. ಇದೀಗ ಟಿ20 ವಿಶ್ವಕಪ್​ವರೆಗೆ ದ್ರಾವಿಡ್​ ಅವಧಿ ದೃಢಪಟ್ಟಿದೆ.

"ಏಕದಿನ ವಿಶ್ವಕಪ್​ ಬೆನ್ನಲ್ಲೇ ರಾಹುಲ್​ ಭಾಯ್​ (ದ್ರಾವಿಡ್​) ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಿದರು. ಇದರ ನಡುವೆ ನಮಗಿಬ್ಬರಿಗೂ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಇಂದು ಕೊನೆಗೂ ಪರಸ್ಪರ ಚರ್ಚಿಸಿದೆವು' ಎಂದು ಜಯ್​ ಷಾ ಬುಧವಾರ ರಾತ್ರಿ ನಡೆದ ಸೌರಾಷ್ಟ್ರ ಕ್ರಿಕೆಟ್​ ಸಂಸ್ಥೆಯ ಸಮಾರಂಭದ ವೇಳೆ ಹೇಳಿದರು.

ಜಯ್​ ಷಾ ಇದೇ ವೇಳೆ, ಟಿ20 ವಿಶ್ವಕಪ್​ನಲ್ಲೂ ರೋಹಿತ್​ ಶರ್ಮ ಭಾರತ ತಂಡವನ್ನು ಮುನ್ನಡೆಸುವುದನ್ನು ಖಚಿತಪಡಿಸಿದ್ದಾರೆ. ಜತೆಗೆ ರೋಹಿತ್​ ಸಾರಥ್ಯದಲ್ಲಿ ಭಾರತ ಟಿ20 ವಿಶ್ವಕಪ್​ ಗೆಲ್ಲುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.

ಕೊಹ್ಲಿ ನಿರ್ಧಾರಕ್ಕೆ ಬೆಂಬಲ

ವಿರಾಟ್​ ಕೊಹ್ಲಿ ವೈಯಕ್ತಿಕ ಕಾರಣ ನೀಡಿ ಇಂಗ್ಲೆಂಡ್​ ವಿರುದ್ಧ ಟೆಸ್ಟ್​ ಸರಣಿಯಿಂದ ಹೊರಗುಳಿದಿರುವ ನಿರ್ಧಾರವನ್ನೂ ಜಯ್​ ಷಾ ಬೆಂಬಲಿಸಿದ್ದಾರೆ. "15 ವರ್ಷಗಳ ಕಾಲ ಆಡಿದ ಆಟಗಾರನೊಬ್ಬ ಮೊದಲ ಬಾರಿಗೆ ವೈಯಕ್ತಿಕ ಕಾರಣಕ್ಕೆ ರಜೆ ಕೇಳುವ ಹಕ್ಕು ಇರುತ್ತದೆ. ಕೊಹ್ಲಿ ಸಕಾರಣವಿಲ್ಲದೆ ವಿರಾಮ ತೆಗೆದುಕೊಳ್ಳುವವರಲ್ಲ. ನಮ್ಮ ಆಟಗಾರರನ್ನು ನಂಬುವುದು ಅಗತ್ಯ' ಎಂದು ಹೇಳಿದ್ದಾರೆ. ಜತೆಗೆ ಟಿ20 ವಿಶ್ವಕಪ್​ನಲ್ಲಿ ಕೊಹ್ಲಿ ಹೊಸ ಪಾತ್ರವೊಂದನ್ನು ನೀಡುವ ಬಗ್ಗೆ ಶ್ರೀದಲ್ಲೇ ಚರ್ಚಿಸಲಾಗುವುದು ಎಂದಿದ್ದಾರೆ.

ಕೇಂದ್ರಿಯ ಗುತ್ತಿಗೆ ಆಟಗಾರರಿಗೆ ದೇಶೀಯ ಕ್ರಿಕೆಟ್​ ಆಟ ಕಡ್ಡಾಯ

ಬಿಸಿಸಿಐನಿಂದ ಕೇಂದ್ರಿಯ ಗುತ್ತಿಗೆ ಪಡೆದುಕೊಂಡಿರುವ ಆಟಗಾರರು ಮತ್ತು ರಾಷ್ಟ್ರೀಯ ಆಯ್ಕೆ ಸಮಿತಿಯಿಂದ ಶಾರ್ಟ್​ಲಿಸ್ಟ್​ ಆಗಿರುವ ಯುವ ಆಟಗಾರರು ದೇಶೀಯ ಕ್ರಿಕೆಟ್​ನಲ್ಲಿ, ಅದರಲ್ಲೂ ಪ್ರಮುಖವಾಗಿ ರೆಡ್​ಬಾಲ್​ ಟೂರ್ನಿಗಳಲ್ಲಿ ಆಡುವುದು ಕಡ್ಡಾಯವಾಗಿದೆ ಎಂದೂ ಜಯ್​ ಷಾ ತಿಳಿಸಿದ್ದಾರೆ. ಜತೆಗೆ ಈ ಸಂಬಂಧ ಸೂಕ್ತ ನಿರ್ಧಾರ ಕೈಗೊಳ್ಳಲು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್​ ಅಗರ್ಕರ್​ಗೆ ಮುಕ್ತ ಸ್ವಾತಂತ್ರ$್ಯ ನೀಡಿರುವುದಾಗಿ ಹೇಳಿದ್ದಾರೆ. ಈ ಮೂಲಕ ದೇಶೀಯ ಕ್ರಿಕೆಟ್​ ಆಡದೆ ಐಪಿಎಲ್​ ಸಿದ್ಧತೆಯಲ್ಲಿ ತೊಡಗಿಕೊಂಡಿರುವ ವಿಕೆಟ್​ ಕೀಪರ್​-ಬ್ಯಾಟರ್​ ಇಶಾನ್​ ಕಿಶನ್​ಗೆ ಪರೋಕ್ಷ ಎಚ್ಚರಿಕೆ ರವಾನಿಸಿದ್ದಾರೆ. "ಆಯ್ಕೆ ಸಮಿತಿ ಅಧ್ಯಕ್ಷ, ಭಾರತ ತಂಡದ ಕೋಚ್​ ಅಥವಾ ನಾಯಕ ಸೂಚಿಸಿದರೆ ರೆಡ್​ ಬಾಲ್​ ಕ್ರಿಕೆಟ್​ನಲ್ಲಿ ಆಡಲೇಬೇಕು. ಫಿಟ್ನೆಸ್​ ಬಗ್ಗೆ ಎನ್​ಸಿಎಯಿಂದಲೂ ಹಸಿರು ನಿಶಾನೆ ಇದ್ದರೆ ಆಗ ಆಡದಿರುವುದಕ್ಕೆ ಯಾವುದೇ ನೆಪ ನೀಡಿದರೂ ಪರಿಗಣಿಸುವುದಿಲ್ಲ' ಎಂದು ಜಯ್​ ಷಾ ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net