

ರಾಂಚಿ: ಮೊದಲ ಎರಡು ದಿನದಾಟದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡಕ್ಕೆ ಬಹುತೇಕ ಮೇಲುಗೈ ಬಿಟ್ಟುಕೊಟ್ಟಿದ್ದ ಭಾರತ ತಂಡ ಮೂರನೇ ದಿನದಾಟದಲ್ಲಿ ಯುವ ವಿಕೆಟ್ ಕೀಪರ್-ಬ್ಯಾಟರ್ ಧ್ರುವ ಜುರೆಲ್ (90 ರನ್, 149 ಎಸೆತ, 6 ಬೌಂಡರಿ, 4 ಸಿಕ್ಸರ್) ತೋರಿದ ಸಾಹಸಿಕ ಬ್ಯಾಟಿಂಗ್ ನಿರ್ವಹಣೆ ಮತ್ತು ಆರ್. ಅಶ್ವಿನ್ (51ಕ್ಕೆ 5), ಕುಲದೀಪ್ ಯಾದವ್ (22ಕ್ಕೆ 4) ಜೋಡಿಯ ಅಮೋ ಸ್ಪಿನ್ ದಾಳಿಯ ಬಲದಿಂದ ಗೆಲುವಿನತ್ತ ಮುನ್ನಡೆದಿದೆ. ಆಂಗ್ಲರ ದ್ವೀತಿಯ ಇನಿಂಗ್ಸ್ಗೆ ಕಡಿವಾಣ ಹಾಕಿದ ಭಾರತ ತಂಡವೀಗ ಗೆಲುವಿನಿಂದ ಕೇವಲ 152 ರನ್ ದೂರ ನಿಂತಿದೆ. ಇದರೊಂದಿಗೆ ನಾಲ್ಕನೇ ದಿನದಾಟದಲ್ಲಿ ಭಾರತ ತಂಡ, 5 ಪಂದ್ಯಗಳ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ 3-1ರಿಂದ ವಶಪಡಿಸಿಕೊಳ್ಳುವ ನಿರೀಕ್ಷೆ ಹೆಚ್ಚಾಗಿದೆ.
ಜೆಎಸ್ಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾನುವಾರ 7 ವಿಕೆಟ್ಗೆ 219 ರನ್ಗಳಿಂದ ಆಟ ಮುಂದುವರಿಸಿದ ಭಾರತ, ಭೋಜನ ವಿರಾಮದ ವೇಳೆಗೆ 307 ರನ್ಗಳಿಗೆ ಸರ್ವಪತನ ಕಂಡಿತು. ಧ್ರುವ ಜುರೆಲ್ ಹೋರಾಟದಿಂದ ಭಾರತದ ಮೊದಲ ಹಿನ್ನಡೆ 46 ರನ್ಗಳಿಗೆ ತಗ್ಗಿತು. ಬಳಿಕ ಅಶ್ವಿನ್&ಕುಲದೀಪ್ ಜೋಡಿಯ ಸ್ಪಿನ್ ದಾಳಿಗೆ ದ್ವಿತೀಯ ಇನಿಂಗ್ಸ್ನಲ್ಲಿ ನಾಟಕೀಯ ಕುಸಿತ ಕಂಡ ಇಂಗ್ಲೆಂಡ್ 53.5 ಓವರ್ಗಳಲ್ಲಿ 145 ರನ್ಗಳಿಗೆ ಆಲೌಟ್ ಆಯಿತು. ಮತ್ತೊಮ್ಮೆ ಬಾಜ್ಬಾಲ್ ಆಟವನ್ನು ಮರೆತ ಇಂಗ್ಲೆಂಡ್ ತಂಡ ಪ್ರತಿ ಓವರ್ಗೆ 2.69ರ ಸರಾಸರಿಯಲ್ಲಷ್ಟೇ ರನ್ ಪೇರಿಸಲು ಶಕ್ತವಾಯಿತು. ಇದರಿಂದ ಗೆಲುವಿಗೆ 192 ರನ್ ಗುರಿ ಪಡೆದಿರುವ ಭಾರತ ತಂಡ ದಿನದಂತ್ಯಕ್ಕೆ 8 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 40 ರನ್ ಪೇರಿಸಿದೆ.
ನಾಯಕ ರೋಹಿತ್ ಶರ್ಮ (24*) ಮತ್ತು ಯಶಸ್ವಿ ಜೈಸ್ವಾಲ್ (16*) ಪ್ರತಿ ಓವರ್ಗೆ 5ರ ಸರಾಸರಿಯಲ್ಲಿ ರನ್ ಪೇರಿಸುವ ಮೂಲಕ ಭಾರತದ ಗೆಲುವಿಗೆ ಉತ್ತಮ ಬುನಾದಿ ಹಾಕಿಕೊಟ್ಟರು. ಭಾರತ ಸೋಮವಾರ ಮಧ್ಯಾಹ್ನದೊಳಗೆ ತವರಿನ ಗೆಲುವಿನ ಓಟವನ್ನು ಸತತ 17ನೇ ಸರಣಿಗೆ ವಿಸ್ತರಿಸುವ ನಿರೀೆ ಇದೆ. ದ್ವೀತಿಯ ಇನಿಂಗ್ಸ್ ವೈಫಲ್ಯದಿಂದಾಗಿ ಸೋಲಿನಂಚಿನಲ್ಲಿ ನಿಂತಿರುವ ಆಂಗ್ಲರಿಗೆ ಸಮಬಲ ಸಾಧಿಸಿ ಸರಣಿ ಜೀವಂತವಿಡಲು ಭಾರತದ ಎಲ್ಲ 10 ವಿಕೆಟ್ ಕಬಳಿಸಬೇಕಾದ ಒತ್ತಡವಿದೆ.
ಅಶ್ವಿನ್-ಕುಲದೀಪ್ ಭರ್ಜರಿ ಬೇಟೆ
ಭೋಜನ ವಿರಾಮದ ಬಳಿಕ ಆಂಗ್ಲರ 2ನೇ ಇನಿಂಗ್ಸ್ ಆರಂಭಗೊಂಡಾಗ ಅಶ್ವಿನ್&ಜಡೇಜಾ ಜೋಡಿ ಹೊಸ ಚೆಂಡಿನಿಂದಲೇ ದಾಳಿಗೆ ಇಳಿಯಿತು. ಅಶ್ವಿನ್ ಇನಿಂಗ್ಸ್ನ 5ನೇ ಓವರ್ನ ಕೊನೇ 2 ಎಸೆತಗಳಲ್ಲಿ ಬೆನ್ ಡಕೆಟ್ (15) ಮತ್ತು ಒಲಿ ಪೋಪ್ (0) ವಿಕೆಟ್ ಕಬಳಿಸಿ ಆಂಗ್ಲರ ಲಯ ತಪ್ಪಿಸಿದರು. ನಂತರ ಮೊದಲ ಇನಿಂಗ್ಸ್ ಶತಕವೀರ ಜೋ ರೂಟ್ (11) ಕೂಡ ಅಶ್ವಿನ್ ಬಲೆಗೆ ಬಿದ್ದರು. ಮತ್ತೊಂದೆಡೆ ತಂಡಕ್ಕೆ ಆಸರೆಯಾಗಿ ನಿಂತಿದ್ದ ಆರಂಭಿಕ ಜಾಕ್ ಕ್ರೌಲಿ (60) 4ನೇ ವಿಕೆಟ್ಗೆ ಜಾನಿ ಬೇರ್ಸ್ಟೋ ಜತೆಗೆ 45 ರನ್ ಸೇರಿಸಿ ಇನಿಂಗ್ಸ್ಗೆ ಮರುಜೀವ ತುಂಬಲು ಯತ್ನಿಸಿದರು. ಆದರೆ ಚಹಾ ವಿರಾಮಕ್ಕೆ ಮುನ್ನ ಕ್ರೌಲಿ ಮತ್ತು ನಾಯಕ ಬೆನ್ ಸ್ಟೋಕ್ಸ್ (4) ವಿಕೆಟ್ ಕಬಳಿಸಿದ ಕುಲದೀಪ್ ಆಂಗ್ಲರನ್ನು ಮತ್ತೆ ಸಂಕಷ್ಟಕ್ಕೆ ಸಿಲುಕಿಸಿದರು. ವಿರಾಮದ ಬಳಿಕ ಮೊದಲ ಎಸೆತದಲ್ಲೇ ಜಾನಿ ಬೇರ್ಸ್ಟೋ (30) ವಿಕೆಟ್ ಕಬಳಿಸಿದ ಜಡೇಜಾ ಆಂಗ್ಲರು ಮತ್ತೆ ಚೇತರಿಸಿಕೊಳ್ಳದಂತೆ ನೋಡಿಕೊಂಡರು. 12 ರನ್ ಅಂತರದಲ್ಲಿ ಆಂಗ್ಲರ ಕೊನೇ 4 ವಿಕೆಟ್ಗಳನ್ನು ಹಂಚಿಕೊಂಡ ಅಶ್ವಿನ್&ಕುಲದೀಪ್ ಭಾರತಕ್ಕೆ 200ರೊಳಗಿನ ಸ್ಪರ್ಧಾತ್ಮಕ ಸವಾಲು ಎದುರಾಗುವಂತೆ ಮಾಡಿದರು. ಆಂಗ್ಲರ ಕೊನೇ 7 ವಿಕೆಟ್ಗಳು ಕೇವಲ 35 ರನ್ ಅಂತರದಲ್ಲಿ ಉರುಳಿದವು.