

ತಮಿಳುನಾಡು: ಇಂದು ಚೆನ್ನೈನ ಚೇಪಾಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ಗೆ ಇಳಿದಿರುವ ಟೀಮ್ ಇಂಡಿಯಾ ಬಹುಬೇಗನೆ ನಾಲ್ಕು ಮುಖ್ಯ ವಿಕೆಟ್ಗಳನ್ನು ಕಳೆದುಕೊಂಡು ಬಾಂಗ್ಲಾ ವಿರುದ್ಧ ಅಬ್ಬರಿಸಲು ಹೆಣಗಾಡಿತು. ಆರಂಭಿಕ ಹಂತದಲ್ಲೇ ತಂಡದ ಸ್ಟಾರ್ ಬ್ಯಾಟರ್ಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಶುಭಮನ್ ಗಿಲ್ ಹಾಗೂ ರಿಷಬ್ ಪಂತ್, ಕೆ.ಎಲ್. ರಾಹುಲ್ ಬಾಂಗ್ಲಾದೇಶ ವೇಗಿಗಳಿಗೆ ತಮ್ಮ ವಿಕೆಟ್ ಒಪ್ಪಿಸಿ, ಪೆವಿಲಿಯನ್ನತ್ತ ಮುಖಮಾಡಿದರು. ಇನ್ನೇನು ಇನ್ನಿಂಗ್ಸ್ ಕೈಚೆಲ್ಲಿತು ಎನ್ನುವಷ್ಟರಲ್ಲಿ ತಂಡದ ಪರ ನಿರೀಕ್ಷೆಗೂ ಮೀರಿದ ಪ್ರದರ್ಶನ ತೋರಿದ್ದು, ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್.
ಟೀಮ್ ಇಂಡಿಯಾ ಪರ ಸ್ಪಿನ್ ಮಾಂತ್ರಿಕನಾಗಿ ಗುರುತಿಸಿಕೊಂಡಿರುವ ಅಶ್ವಿನ್ ಸದ್ಯ ಬಾಂಗ್ಲಾ ಬೌಲರ್ಗಳು ಬೆದರುವಂತೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಜಡೇಜಾ ಜತೆಗೂಡಿ ಎದುರಾಳಿ ತಂಡವನ್ನು ಬಗ್ಗುಬಡಿದಿದ್ದಾರೆ. ಜಡ್ಡು 109* ಎಸೆತಗಳಲ್ಲಿ 83* ರನ್ ಸಿಡಿಸಿದರೆ, ಅಶ್ವಿನ್ 108* ಎಸೆತಗಳಲ್ಲಿ ಆಕರ್ಷಕ 100* ರನ್ ಬಾರಿಸಿದ್ದಾರೆ. ರವಿಚಂದ್ರನ್ ಅರ್ಧಶತಕ ಗಳಿಸಿದ ತಕ್ಷಣವೇ ಸ್ಟೇಡಿಯಂನಲ್ಲಿ ಕುಳಿತಿದ್ದ ಕ್ರಿಕೆಟ್ ಅಭಿಮಾನಿಗಳು ಎದ್ದುನಿಂತು ಚಪ್ಪಳೆ ತಟ್ಟಿದರು. ಈ ವೇಳೆ ಕ್ಯಾಮರಾ ಕಣ್ಣಿಗೆ ಬಿದ್ದ ಹಿರಿಯ ಮಹಿಳಾ ಅಭಿಮಾನಿ, ಅಶ್ವಿನ್ ಬ್ಯಾಟಿಂಗ್ ಪ್ರದರ್ಶನ ಕಂಡು ಭಾರೀ ಸಂತಸ ವ್ಯಕ್ತಪಡಿಸಿದ್ದಾರೆ.
ಸದ್ಯ ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನಸೆಳೆದಿದೆ. ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 338* ರನ್ ಗಳಿಸಿರುವ ಟೀಮ್ ಇಂಡಿಯಾ, ಇಲ್ಲಿಯವರೆಗೆ 6 ವಿಕೆಟ್ಗಳನ್ನು ಕಳೆದುಕೊಂಡಿದೆ. ಉತ್ತಮ ರನ್ ಕಲೆಹಾಕುವಲ್ಲಿ ಶ್ರಮಿಸುತ್ತಿರುವ ಭಾರತಕ್ಕೆ ಜಡೇಜಾ ಮತ್ತು ಅಶ್ವಿನ್ ಜತೆಯಾಟ ಅತ್ಯುತ್ತಮ ಇನ್ನಿಂಗ್ಸ್ ಕೊಡುವಲ್ಲಿ ಯಶಸ್ವಿಯಾಗಿದೆ,(ಏಜೆನ್ಸೀಸ್).