

ಚೆನ್ನೈ: ಇತ್ತೀಚೆಗೆ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅನುಭವಿ ಸ್ಪಿನ್ನರ್ ಆರ್.ಅಶ್ವಿನ್ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಸದ್ಯ ಐಪಿಎಲ್‌ವರೆಗೂ ಬಿಡುವಿನಲ್ಲಿರುವ ಆರ್.ಅಶ್ವಿನ್, ಭಾನುವಾರ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳ ಟಿ20 ಪಂದ್ಯದ ಕುರಿತು ಮಾಡಿದ ಟ್ವೀಟ್, ಕ್ರಿಕೆಟ್ ವಲಯದಲ್ಲಿ ಭಾರಿ ಮೆಚ್ಚುಗೆ ಪಾತ್ರವಾಗಿದೆ. ಲಖನೌದಲ್ಲಿ ನಡೆಯುತ್ತಿರುವ ಟಿ20 ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಗೆಲುವಿನಲ್ಲಿಂಚಿನಲ್ಲಿ ಎಡವಿತ್ತು. ದಕ್ಷಿಣ ಆಫ್ರಿಕಾದ ಲೌರಾ ವೊಲ್ವಾರ್ಡ್ ಭಾರತ ತಂಡದ ಕೈಯಲ್ಲಿದ್ದ ಗೆಲುವನ್ನು ಕಸಿದರು. ಪಂದ್ಯ ವೀಕ್ಷಿಸುತ್ತಿದ್ದ ಅಶ್ವಿನ್, ಲೌರಾ ವೊಲ್ವಾರ್ಡ್ ಅವರನ್ನು ಔಟ್ ಮಾಡುವ ವಿಧಾನವನ್ನು ಹೇಳುವಿರಾ ಎಂದು ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ಟ್ವೀಟ್ ಮಾಡಿದ ಇಂಗ್ಲೆಂಡ್ ಆಟಗಾರ್ತಿ ಅಲೆಕ್ಸ್ ಹಾರ್ಟಿ, ಇಂಥ ಸ್ಟಾರ್ ಕ್ರಿಕೆಟಿಗ ಮಹಿಳಾ ಕ್ರಿಕೆಟ್ ವೀಕ್ಷಿಸುವುದೇ ದೊಡ್ಡ ಸಂಗತಿ ಎಂದು ಭಾರತೀಯ ಕ್ರಿಕೆಟಿಗನ ಗುಣಗಾನ ಮಾಡಿದ್ದಾರೆ.
ಲೌರಾ ವೊಲ್ವಾರ್ಡ್ ಅವರನ್ನು ಔಟ್ ಮಾಡಲು ಇರುವ ವಿಧಾನ ಏನು, ಯಾರಾದರೂ ಅವರನ್ನು ಔಟ್ ಮಾಡುವಿರಾ ಎಂದು ಅಶ್ವಿನ್ ಟ್ವೀಟ್ ಮಾಡಿದ್ದೆ ತಡ, ಮಹಿಳಾ ಕ್ರಿಕೆಟ್ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇಂಗ್ಲೆಂಡ್ ಆಟಗಾರ್ತಿ ಅಲೆಕ್ಸ್ ಹಾರ್ಟಿ, ಸ್ಟಾರ್ ಆಟಗಾರರು ಮಹಿಳಾ ಪಂದ್ಯ ವೀಕ್ಷಿಸುವುದೇ ಅಪರೂಪ. ಅಶ್ವಿನ್‌ನಂಥ ಆಟಗಾರರು ಮಹಿಳಾ ಕ್ರಿಕೆಟ್ ನೋಡುತ್ತಾರೆ ಎಂದು ನಿಜಕ್ಕೂ ಖುಷಿಯ ವಿಚಾರ. ಎಲ್ಲ ಸ್ಟಾರ್ ಕ್ರಿಕೆಟಿಗರು ಮಹಿಳಾ ಕ್ರಿಕೆಟ್ ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದು ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ.
ಲೌರಾ ವೊಲ್ವಾರ್ಡ್, ಸ್ಫೋಟಕ ಬ್ಯಾಟಿಂಗ್ ಮೂಲಕ ಭಾರತದ ಬೌಲಿಂಗ್ ವಿಭಾಗವನ್ನು ದಂಡಿಸಿದರು. ಕೇವಲ 39 ಎಸೆತಗಳಲ್ಲಿ 53 ರನ್ ಸಿಡಿಸಿದ ಪ್ರವಾಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮಹಿಳಾ ತಂಡ 4 ವಿಕಟ್‌ಗೆ 158 ರನ್ ಪೇರಿಸಿದರೆ, ಪ್ರತಿಯಾಗಿ ದಕ್ಷಿಣ ಆಫ್ರಿಕಾ ತಂಡ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 159 ರನ್‌ಗಳಿಸಿ ಜಯದ ನಗೆ ಬೀರಿತು. ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡ 0-2 ರಿಂದ ಒಂದು ಪಂದ್ಯ ಬಾಕಿ ಇರುವಂತೆಯೇ ಸೋಲು ಕಂಡಿತು. ಇದಕ್ಕೂ ಮೊದಲು ಏಕದಿನ ಸರಣಿಯಲ್ಲೂ ಭಾರತ ತಂಡ ಸೋಲು ಕಂಡಿತ್ತು.