'ಕ್ಯಾಪ್ಟನ್ ಕೂಲ್'​ ಕಿವಿಮಾತೇ... ಕಡೆಗೂ ಧೋನಿ ಜತೆಗಿನ ಆ ರಹಸ್ಯ ಬಿಚ್ಚಿಟ್ಟ 'ಚೇಸ್‌ಮಾಸ್ಟರ್' ಅಶುತೋಷ್ ಶರ್ಮ | MS Dhoni

ವಿಜಯವಾಣಿ (97)
Published on

MS Dhoni: ಐಪಿಎಲ್-2025ರ ಸೀಸನ್​ ಭಾಗವಾಗಿ ಮಾರ್ಚ್​ 24ರಂದು ವಿಶಾಖಪಟ್ಟಣದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ನಡುವಿನ ರೋಚಕ ಪಂದ್ಯದಲ್ಲಿ ಡೆಲ್ಲಿ ಪಡೆ ಅಚ್ಚರಿ ಮೂಡಿಸುವಂತೆ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸಾಧಿಸಿದ ರೋಮಾಂಚಕ ಗೆಲುವಿಗೆ ಕ್ರಿಕೆಟ್​ ಪ್ರಿಯರು ತಲೆಬಾಗಿದರು. 210 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ, ಒಂದು ಹಂತದಲ್ಲಿ ಕೇವಲ 66 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೂ ಮೂರು ಎಸೆತಗಳು ಬಾಕಿ ಇರುವಾಗಲೇ ಒಂದು ವಿಕೆಟ್‌ನಿಂದ ಗೆದ್ದು ಬೀಗಿತು. ಅದಕ್ಕೆ ಕಾರಣವೇ ಚೇಸ್‌ಮಾಸ್ಟರ್ ಅಶುತೋಷ್ ಶರ್ಮ.

ಸೋಲಿನ ಅಂಚಿನಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್​ಗೆ ಗೆಲುವಿನ ಭರವಸೆಯಾಗಿ ನಿಂತ ಅಶುತೋಷ್ ಶರ್ಮ (ಅಜೇಯ 66 ರನ್​, 31 ಎಸೆತ 5 ಬೌಂಡರಿ, 5 ಸಿಕ್ಸರ್) ತಮ್ಮ ಸ್ಫೋಟಕ ಇನ್ನಿಂಗ್ಸ್ ಮೂಲಕ ಆಟದ ದಿಕ್ಕನೇ ಬದಲಾಯಿಸಿದರು. 9 ವಿಕೆಟ್​ ಕಳೆದುಕೊಂಡಿದ್ದ ತಂಡಕ್ಕೆ ಆಸರೆಯಾದ ಅಶುತೋಷ್​, ಮೈದಾನದಲ್ಲಿದ್ದ ಕ್ರಿಕೆಟ್​ ಪ್ರೇಮಿಗಳ ಹುಬ್ಬೇರಿಸುವಲ್ಲಿ ಮೇಲುಗೈ ಸಾಧಿಸಿದರು. ಇನ್ನೂ ತಮ್ಮ ಅದ್ಭುತ ಇನ್ನಿಂಗ್ ಕುರಿತಾಗಿ ಮಾತನಾಡಿದ ಅಶುತೋಷ್​, ಕಳೆದ ಆವೃತ್ತಿಯಲ್ಲಿ ಸಿಎಸ್​ಕೆ ತಂಡದ ದಿಗ್ಗಜ, ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಕೊಟ್ಟ ಸಲಹೆ ಬಗ್ಗೆ ಮಾತನಾಡಿದರು.

ಮಾಹಿ ಜತೆ ಮಾತುಕತೆ

"ಕಳೆದ ಸೀಸನ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ಸಮಯದಲ್ಲಿ ನನಗೆ ಧೋನಿ ಅವರೊಂದಿಗೆ ಮಾತನಾಡುವ ಅವಕಾಶ ಸಿಕ್ಕಿತು. ಈ ವೇಳೆ ನನ್ನನ್ನು ಬಹಳ ಆತ್ಮೀಯವಾಗಿ ಮಾತನಾಡಿಸಿದ ಅವರು, ಒಂದಷ್ಟು ಒಳ್ಳೆಯ ಕಿವಿಮಾತನ್ನು ತಿಳಿಸಿದರು. ನೀವು ಹೇಗೆ ಬ್ಯಾಟಿಂಗ್ ಮಾಡುತ್ತೀರಿ, ನೀವು ಹೇಗೆ ಅಷ್ಟು ವೇಗವಾಗಿ ಯೋಚಿಸುತ್ತೀರಿ ಎಂದು ಧೋನಿ ಅವರಿಗೆ ಪ್ರಶ್ನಿಸಿದೆ. ಆಗ ಅವರು ನನಗೆ ಬಗ್ಗೆ ಹಲವು ವಿಷಯಗಳನ್ನು ತಿಳಿಸಿಕೊಟ್ಟರು. ದಿಗ್ಗಜರೊಂದಿಗೆ ನಾನು ಕೂಡ ಆಡುತ್ತಿರುವುದು ನನಗೆ ಅತೀವ ಸಂತೋಷವಿದೆ. ಇದಕ್ಕೆ ನಾನು ಕೃತಜ್ಞ" ಎಂದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net