49ನೇ ಜನ್ಮದಿನದಂದು ರಾಹುಲ್ ದ್ರಾವಿಡ್‌ಗೆ ಎದುರಾಯಿತು ಕಸಿವಿಸಿ!

dravid 49 web
Published on

ಕೇಪ್‌ಟೌನ್: ಟೀಮ್ ಇಂಡಿಯಾ ಕೋಚ್ ಹಾಗೂ ದಿಗ್ಗಜ ರಾಹುಲ್ ದ್ರಾವಿಡ್‌ಗೆ ಮಂಗಳವಾರ 49ನೇ ಜನ್ಮದಿನದ ಸಂಭ್ರಮ. ಅವರ ಅಭಿಮಾನಿಗಳು, ಮಾಜಿ ಸಹ-ಆಟಗಾರರು, ಗೆಳೆಯರಿಂದ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಸುರಿಮಳೆಯಾಯಿತು. ಆದರೆ ದ್ರಾವಿಡ್ ಜನ್ಮದಿನದಂದು ತಮಗೆ ಎದುರಾಗುವ ಕಸಿವಿಸಿಯ ಬಗ್ಗೆ ಕೇಪ್‌ಟೌನ್ ಟೆಸ್ಟ್ ಆರಂಭಕ್ಕೆ ಮುನ್ನ ಮಾತನಾಡಿದರು.

‘ವಯಸ್ಸಾಗುತ್ತಿದ್ದಂತೆ ಜನ್ಮದಿನವನ್ನು ಯಾವ ರೀತಿ ಅನುಭವಿಸಬೇಕು ಎಂದು ಗೊತ್ತಾಗುವುದಿಲ್ಲ. ಯಾಕೆಂದರೆ ಒಂದು ವರ್ಷ ಹಿರಿಯರಾಗಿರುತ್ತೇವೆ’ ಎಂದು ದ್ರಾವಿಡ್ ಹೇಳಿದರು. ಈ ಮೂಲಕ ತಮಗೆ ವಯಸ್ಸಾಗುತ್ತಿದೆ ಎಂದು ದ್ರಾವಿಡ್ ತಮಾಷೆಯಾಗಿ ಹೇಳಿಕೊಂಡರು. ಮುಂದಿನ ವರ್ಷ ಅವರು 50ನೇ ವಯಸ್ಸಿಗೆ ಕಾಲಿಡಲಿದ್ದಾರೆ.

ಆದರೆ ಈ ವಿಶೇಷ ದಿನದಂದು ತಮಗೆ ಶುಭಾಶಯಗಳನ್ನು ತಿಳಿಸಿದವರಿಗೆ ಧನ್ಯವಾದ ಹೇಳಲು ಮರೆಯದ ದ್ರಾವಿಡ್, ಎಲ್ಲರ ಶುಭಾಶಯಗಳಿಗೆ ನಾನು ಚಿರಋಣಿಯಾಗಿರುತ್ತೇನೆ ಎಂದರು. ದಿಗ್ಗಜ ಸಚಿನ್ ತೆಂಡುಲ್ಕರ್ ಸಹಿತ ಕ್ರಿಕೆಟ್ ವಲಯದ ಹಲವರು ದ್ರಾವಿಡ್‌ಗೆ ಶುಭಾಶಯ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net