ಚೀನಾ ಮೊಬೈಲ್ ಕಂಪನಿಗೆ ಬಿಸಿಸಿಐ ಗುಡ್‌ಬೈ, ಟಾಟಾಗೆ ಐಪಿಎಲ್ ಸ್ವಾಗತ!

tata ipl web
Published on

ನವದೆಹಲಿ: ಭಾರತದ ಅತಿದೊಡ್ಡ ಉದ್ಯಮ ಸಮೂಹ ಎನಿಸಿದ ಟಾಟಾ ಗ್ರೂಪ್‌ಗೆ ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಎನಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಶೀರ್ಷಿಕೆ ಪ್ರಾಯೋಜಕತ್ವ ಹಕ್ಕು ಒಲಿದಿದೆ. ಚೀನಾದ ಮೊಬೈಲ್ ಕಂಪನಿ ‘ವಿವೋ’ಗೆ ಬಿಸಿಸಿಐ ಗೇಟ್‌ಪಾಸ್ ನೀಡಿದ್ದು, 2022 ಮತ್ತು 2023ರ ಟೂರ್ನಿ ‘ಟಾಟಾ ಐಪಿಎಲ್’ ಎಂದು ಕರೆಯಲ್ಪಡಲಿದೆ. ಮಂಗಳವಾರ ನಡೆದ ಆಡಳಿತ ಮಂಡಳಿಯ ಸಭೆಯ ಬಳಿಕ ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ಈ ವಿಷಯವನ್ನು ಪ್ರಕಟಿಸಿದ್ದಾರೆ.

ವಿವೋ ಕಂಪನಿ 2018ರಿಂದ 2022ರವರೆಗೆ ಒಟ್ಟು 2,200 ಕೋಟಿ ರೂ. ಮೊತ್ತಕ್ಕೆ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವ ಪಡೆದುಕೊಂಡಿತ್ತು. ಆದರೆ 2020ರಲ್ಲಿ ಭಾರತ-ಚೀನಾ ಸೈನಿಕರ ನಡುವೆ ಗಲ್ವಾನ್ ಗಡಿಯಲ್ಲಿ ಏರ್ಪಟ್ಟ ಕದನದ ಬಳಿಕ ಆ ವರ್ಷದ ಪ್ರಾಯೋಜಕತ್ವದಿಂದ ವಿವೋ ಕಂಪನಿಯನ್ನು ಹೊರಗಿಡಲಾಗಿತ್ತು. ಆ ಒಂದು ವರ್ಷಕ್ಕೆ ‘ಡ್ರೀಮ್ ಇಲೆವೆಲ್’ 222 ಕೋಟಿ ರೂ.ಗೆ ತಾತ್ಕಾಲಿಕವಾಗಿ ಶೀರ್ಷಿಕೆ ಪ್ರಾಯೋಜಕತ್ವ ವಹಿಸಿಕೊಂಡಿತ್ತು. 2021ರ ಆವೃತ್ತಿಗೆ ಪ್ರಾಯೋಜಕನಾಗಿ ವಿವೋ ಕಂಪನಿ ಮರಳಿತ್ತು. ಆದರೆ ಸೂಕ್ತ ಬದಲಿ ಪ್ರಾಯೋಜಕರು ದೊರೆತರೆ ಹಕ್ಕು ವರ್ಗಾಯಿಸಲು ವಿವೋ ಕಂಪನಿ ಸಿದ್ಧವಿತ್ತು. ಇದಕ್ಕೆ ಬಿಸಿಸಿಐ ಸಮ್ಮತಿಸಿದ್ದರೂ, ಕಳೆದ ವರ್ಷ ಸೂಕ್ತ ಬದಲಿ ಪ್ರಾಯೋಜಕರು ದೊರೆತಿರಲಿಲ್ಲ. ಈ ವರ್ಷ ಇದೀಗ ಟಾಟಾ ಗ್ರೂಪ್ ಜತೆಗೆ ಯಶಸ್ವಿ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವದಿಂದ ಲಭಿಸುವ ಮೊತ್ತದಲ್ಲಿ ಶೇ. 50 ಪಾಲು ಬಿಸಿಸಿಐನಲ್ಲೇ ಉಳಿದರೆ, ಬಾಕಿ ಮೊತ್ತ ಎಲ್ಲ ತಂಡಗಳಿಗೆ ಹಂಚಿಕೆಯಾಗುತ್ತದೆ. ಇದುವರೆಗೆ 8 ತಂಡಗಳಿದ್ದರೆ, ಈ ಬಾರಿ 10 ತಂಡಗಳಿಗೆ ಈ ಮೊತ್ತ ಹಂಚಿಕೆಯಾಗಲಿದೆ.

ಐಪಿಎಲ್‌ನಲ್ಲಿ ವಿವೋ ಹಾಜರಾತಿಯು ಲೀಗ್ ಮತ್ತು ಆ ಕಂಪನಿ ಎರಡಕ್ಕೂ ನಕಾರಾತ್ಮಕ ಪ್ರಚಾರಕ್ಕೆ ಕಾರಣವಾಗಿತ್ತು. ಚೀನಾ ಉತ್ಪನ್ನಗಳ ಬಗೆಗಿನ ನಕಾರಾತ್ಮಕ ನಿಲುವುಗಳಿಂದಾಗಿ ಕಂಪನಿಯು 5 ವರ್ಷಗಳ ಒಪ್ಪಂದ ಮುಕ್ತಾಯವಾಗುವುದಕ್ಕೆ ಒಂದು ವರ್ಷ ಮುನ್ನವೇ ಹೊರನಡೆಯುತ್ತಿದೆ.

ಬಿಸಿಸಿಐ ಅಧಿಕಾರಿ

ಬಿಸಿಸಿಐಗೆ 1,124 ಕೋಟಿ ರೂ. ಲಾಭ!

ಟಾಟಾ-ಬಿಸಿಸಿಐ ನಡುವಿನ ಒಪ್ಪಂದದ ನಿಖರ ಮೊತ್ತವನ್ನು ಖಚಿತಪಡಿಸಲಾಸಲಾಗಿಲ್ಲ. ಆದರೆ ಮೂಲಗಳ ಪ್ರಕಾರ, ಟಾಟಾ ಗ್ರೂಪ್ 2 ವರ್ಷಗಳ ಒಪ್ಪಂದಕ್ಕೆ ಒಟ್ಟು 670 ಕೋಟಿ ರೂ. (ವರ್ಷಕ್ಕೆ 335 ಕೋಟಿ ರೂ) ಪಾವತಿಸಲಿದೆ. ಇದಲ್ಲದೆ ಒಪ್ಪಂದ ಕೊನೆಗೊಳಿಸಿದ್ದಕ್ಕೆ ವಿವೋ ಕೂಡ ಬಿಸಿಸಿಐಗೆ 454 ಕೋಟಿ ರೂ. (2022ರಲ್ಲಿ 183, 2023ರಲ್ಲಿ 211 ಕೋಟಿ ರೂ.) ಪಾವತಿಸಲಿದೆ. ಇದರಿಂದ ಬಿಸಿಸಿಐ 2022-23ರ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವದಿಂದ ಒಟ್ಟು 1,124 ಕೋಟಿ ರೂ. ಸಂಪಾದನೆ ಮಾಡಿದಂತಾಗಲಿದೆ. 2022ರಲ್ಲಿ 547 ಮತ್ತು 2023ರಲ್ಲಿ 577 ಕೋಟಿ ರೂ. ಬಿಸಿಸಿಐಗೆ ಸಂದಾಯವಾಗಲಿದೆ.

2 ಹೊಸ ತಂಡಗಳಿಗೆ ಒಪ್ಪಿಗೆ

ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ 2 ಹೊಸ ತಂಡಗಳಾದ ಲಖನೌ ಮತ್ತು ಅಹಮದಾಬಾದ್‌ಗೆ ಅಂಗೀಕಾರ ನೀಡಲಾಗಿದೆ. ಈ ಮೂಲಕ ಐಪಿಎಲ್‌ಗೆ ಅಧಿಕೃತ ಎಂಟ್ರಿ ನೀಡಲಾಗಿದೆ. ಜತೆಗೆ ಅಹಮದಾಬಾದ್ ತಂಡದ ಮಾಲೀಕತ್ವ ಪಡೆದಿದ್ದ ಸಿವಿಸಿ ಸಂಸ್ಥೆಗೆ ಬೆಟ್ಟಿಂಗ್ ಕಂಪನಿಗಳ ಜತೆಗೆ ಸಂಪರ್ಕ ಹೊಂದಿದ್ದ ಆರೋಪದ ಪ್ರಕರಣದಿಂದಲೂ ಕ್ಲೀನ್‌ಚಿಟ್ ನೀಡಿದಂತಾಗಿದೆ. ಲಖನೌ ತಂಡ 7090 ಕೋಟಿ ರೂ.ಗೆ ಆರ್‌ಪಿಎಸ್‌ಜಿ ಗ್ರೂಪ್‌ಗೆ ಒಲಿದಿದ್ದರೆ, ಅಹಮದಾಬಾದ್ ತಂಡ 5,625 ಕೋಟಿ ರೂ.ಗೆ ಸಿವಿಸಿ ಪಾಲಾಗಿತ್ತು.

ಆಟಗಾರರ ಆಯ್ಕೆಗೆ 10-14 ದಿನ ಸಮಯ

ಐಪಿಎಲ್‌ನ 2 ಹೊಸ ತಂಡಗಳಿಗೆ ಹರಾಜಿಗೆ ಮುನ್ನ ಗರಿಷ್ಠ 3 ಆಟಗಾರರೊಂದಿಗೆ (2 ಭಾರತೀಯ, 1 ವಿದೇಶಿ) ಒಪ್ಪಂದ ಮಾಡಿಕೊಳ್ಳಲು 10-14 ದಿನಗಳ ಕಾಲಾವಕಾಶ ನೀಡಲಾಗಿದೆ. ಕರೊನಾ ಭೀತಿಯ ನಡುವೆಯೂ ೆಬ್ರವರಿ 12-13ರಂದೇ ಬೆಂಗಳೂರಿನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಬ್ರಿಜೇಶ್ ಪಟೇಲ್ ಸ್ಪಷ್ಟಪಡಿಸಿದರು. ಏಪ್ರಿಲ್-ಮೇನಲ್ಲಿ ಭಾರತದಲ್ಲೇ ಟೂರ್ನಿ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net