

ನವದೆಹಲಿ: ಡಿಸೆಂಬರ್ 19ರಂದು ದುಬೈನಲ್ಲಿ ನಡೆಯಲಿರುವ ಐಪಿಎಲ್ 17ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಗೆ ಮುನ್ನ ಎಲ್ಲ 10 ತಂಡಗಳು ಉಳಿಸಿಕೊಳ್ಳಲಿರುವ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸುವ ದಿನ ಹತ್ತಿರ ಬಂದಿದೆ. ತಂಡಗಳ ನಡುವೆ ಆಟಗಾರರ ವರ್ಗಾವಣೆಗೆ ಮತ್ತು ರಿಟೇನ್ ಮಾಡಿಕೊಳ್ಳುವ ಕುರಿತು ಆಟಗಾರರೊಂದಿಗೂ ಮಾತುಕತೆಗಳು ಭರದಿಂದ ಸಾಗಿದ್ದು, ಭಾನುವಾರದೊಳಗೆ ಎಲ್ಲವೂ ಅಂತಿಮಗೊಳ್ಳಬೇಕಿದೆ.
ಹಾಲಿ ಚಾಂಪಿಯನ್ ಸಿಎಸ್ಕೆ ತಂಡಕ್ಕೆ ಆಟಗಾರರ ರಿಲೀಸ್ ನಂತರ, ಹರಾಜಿಗೆ ಹೆಚ್ಚಿನ ಹಣ ಲಭಿಸುವ ಸಾಧ್ಯತೆಗಳಿವೆ. ಯಾಕೆಂದರೆ ಕಳೆದ ಹರಾಜಿನಲ್ಲಿ 16.25 ಕೋಟಿ ರೂ.ಗೆ ಖರೀದಿಸಿದ್ದ ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಈ ಬಾರಿ ತಂಡದಿಂದ ಹೊರನಡೆಯುವುದು ಖಚಿತಗೊಂಡಿದ್ದರೆ, 6.75 ಕೋಟಿ ರೂ. ಒಪ್ಪಂದದ ಅಂಬಾಟಿ ರಾಯುಡು ಕಳೆದ ಆವೃತ್ತಿಯ ಬಳಿಕ ನಿವೃತ್ತರಾಗಿದ್ದಾರೆ.
ಕಳೆದ ಹರಾಜಿನಲ್ಲಿ ದಾಖಲೆಯ 18.50 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್ ಸೇರಿದ ಇಂಗ್ಲೆಂಡ್ ಯುವ ಆಲ್ರೌಂಡರ್ ಸ್ಯಾಮ್ ಕರನ್, 13.25 ಕೋಟಿ ರೂ.ಗೆ ಸನ್ರೈಸರ್ಸ್ ಸೇರಿದ್ದ ಇಂಗ್ಲೆಂಡ್ ಬ್ಯಾಟರ್ ಹ್ಯಾರಿ ಬ್ರೂಕ್ ಕೂಡ ರಿಲೀಸ್ ಸಾಧ್ಯತೆಗಳಿವೆ. ನ್ಯೂಜಿಲೆಂಡ್ ವೇಗಿಗಳಾದ ಟಿಮ್ ಸೌಥಿ ಮತ್ತು ಲಾಕಿ ಫಗ್ಯುರ್ಸನ್ ಕೆಕೆಆರ್ನಿಂದ ರಿಲೀಸ್ ನಿರೀಕ್ಷೆ ಇದೆ. ವಿಂಡೀಸ್ ಆಲ್ರೌಂಡರ್ ಆಂಡ್ರೆ ರಸೆಲ್ರನ್ನು ಕೆಕೆಆರ್ ರಿಲೀಸ್ ಮಾಡುವ ಊಹಾಪೋಹಗಳಿದ್ದರೂ, ಆ ಸಾಧ್ಯತೆ ಕಡಿಮೆ ಎನಿಸಿದೆ. ಡೆಲ್ಲಿ ತಂಡ ಕನ್ನಡಿಗ ಮನೀಷ್ ಪಾಂಡೆ ಸಹಿತ ಕೆಲ ಪ್ರಮುಖ ಆಟಗಾರರನ್ನು ಕೈಬಿಡುವ ನಿರೀಕ್ಷೆ ಇದೆ.
10 ತಂಡಗಳ ಸಂಭಾವ್ಯ ರಿಲೀಸ್:
ಆರ್ಸಿಬಿ: ದಿನೇಶ್ ಕಾರ್ತಿಕ್, ಫಿನ್ ಅಲೆನ್, ರೀಸ್ ಟಾಪ್ಲೆ, ವಿಲ್ ಜಾಕ್ಸ್.
ಸಿಎಸ್ಕೆ: ಬೆನ್ ಸ್ಟೋಕ್ಸ್, ಅಂಬಟಿ ರಾಯುಡು (ನಿವೃತ್ತಿ), ಡ್ವೇನ್ ಪ್ರಿಟೋರಿಯಸ್, ಸಿಸಾಂಡ, ಕೈಲ್ ಜೇಮಿಸನ್.
ಡೆಲ್ಲಿ ಕ್ಯಾಪಿಟಲ್ಸ್: ಮನೀಷ್ ಪಾಂಡೆ, ಪೃಥ್ವಿ ಷಾ, ಫಿಲ್ ಸಾಲ್ಟ್, ರಿಲೀ ರೋಸೌ.
ರಾಜಸ್ಥಾನ ರಾಯಲ್ಸ್: ಜೇಸನ್ ಹೋಲ್ಡರ್, ಜೋ ರೂಟ್, ಕೆಸಿ ಕಾರ್ಯಪ್ಪ, ಎಂ. ಅಶ್ವಿನ್.
ಲಖನೌ ಸೂಪರ್ಜೈಂಟ್ಸ್: ಮಾರ್ಕಸ್ ಸ್ಟೋಯಿನಿಸ್, ಇವಿನ್ ಲೆವಿಸ್, ಕೆ. ಗೌತಮ್.
ಸನ್ರೈಸರ್ಸ್: ಹ್ಯಾರಿ ಬ್ರೂಕ್, ಅಕೀಲ್ ಹೊಸೈನ್, ಆದಿಲ್ ರಶೀದ್.
ಮುಂಬೈ ಇಂಡಿಯನ್ಸ್: ಜೈದೇವ್ ಉನಾದ್ಕತ್, ರಿಲೀ ಮೆರಿಡಿತ್, ಪೀಯುಷ್ ಚಾವ್ಲಾ.
ಗುಜರಾತ್ ಟೈಟಾನ್ಸ್: ಯಶ್ ದಯಾಳ್, ದಸುನ್ ಶನಕ, ಒಡೆನ್ ಸ್ಮಿತ್, ಪ್ರದಿಪ್ ಸಂಗ್ವಾನ್.
ಕೆಕೆಆರ್: ಲಾಕಿ ಫಗ್ಯುರ್ಸನ್, ಟಿಮ್ ಸೌಥಿ, ಲಿಟನ್ ದಾಸ್, ಡೇವಿಡ್ ವೈಸ್, ಎನ್. ಜಗದೀಶನ್.
ಪಂಜಾಬ್ ಕಿಂಗ್ಸ್: ಸ್ಯಾಮ್ ಕರನ್, ಮ್ಯಾಥ್ಯೂ ಶಾರ್ಟ್, ಭಾನುಕಾ ರಾಜಪಕ್ಷ, ರಿಷಿ ಧವನ್.
ಹೊಸ ಆಕರ್ಷಣೆ
ಐಪಿಎಲ್ ಹರಾಜಿನಲ್ಲಿ ಈ ಬಾರಿ ಕೆಲ ಹೊಸ ಆಟಗಾರರ ಆಕರ್ಷಣೆಯೂ ಇರಲಿದೆ. ವಿಶ್ವಕಪ್ ಫೈನಲ್ ಹೀರೋ ಟ್ರಾವಿಸ್ ಹೆಡ್, ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್ ಹರಾಜಿಗೆ ಮರಳುವ ನಿರೀಕ್ಷೆ ಇದ್ದರೆ, ನ್ಯೂಜಿಲೆಂಡ್ನ ರಚಿನ್ ರವೀಂದ್ರ ಮತ್ತು ಡೆರಿಲ್ ಮಿಚೆಲ್ ಮೊದಲ ಬಾರಿ ಅದೃಷ್ಟ ಪರೀಸಲಿದ್ದಾರೆ.