

ಮೆಲ್ಬೋರ್ನ್: ಬೆಲಾರಸ್ ತಾರೆ ಅರಿನಾ ಸಬಲೆಂಕಾ ಆಸ್ಟ್ರೆಲಿಯನ್ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಸತತ 2ನೇ ಬಾರಿ ಪ್ರಶಸ್ತಿ ಗೆದ್ದು ಬೀಗಿದ್ದಾರೆ. 2ನೇ ಶ್ರೇಯಾಂಕಿತೆ ಸಬಲೆಂಕಾ ಫೈನಲ್ ಪಂದ್ಯದಲ್ಲಿ ಚೀನಾದ ಯುವ ಆಟಗಾರ್ತಿ ಕ್ವಿನ್ವೆನ್ ಝೆಂಗ್ ಎದುರು ನೇರಸೆಟ್ಗಳಿಂದ ಸುಲಭ ಗೆಲುವು ದಾಖಲಿಸಿದರು. ಇದು ಸಬಲೆಂಕಾಗೆ ವೃತ್ತೀಜಿವನದ 2ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆಲುವಾಗಿದೆ.
ಮೆಲ್ಬೋರ್ನ್ ಪಾರ್ಕ್ನಲ್ಲಿ ಶನಿವಾರ ನಡೆದ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ 25 ವರ್ಷದ ಸಬಲೆಂಕಾ 6-3, 6-2ರಿಂದ ಜಯ ಸಾಧಿಸಿದರು. ತನ್ನದೇ ದೇಶದ ವಿಕ್ಟೋರಿಯಾ ಅಜರೆಂಕಾ ಬಳಿಕ ಸತತ 2 ಬಾರಿ ಆಸ್ಟ್ರೆಲಿಯನ್ ಓಪನ್ ಗೆದ್ದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆ ಸಬಲೆಂಕಾ ಅವರದಾಗಿದೆ. ಅಜರೆಂಕಾ 2012-2013ರಲ್ಲಿ ಈ ಸಾಧನೆ ಮಾಡಿದ್ದರು. ಅಲ್ಲದೆ ಅಜರೆಂಕಾ ಬಳಿಕ ವೃತ್ತೀಜಿವನದ ಮೊದಲ 2 ಗ್ರಾಂಡ್ ಸ್ಲಾಂ ಪ್ರಶಸ್ತಿಗಳನ್ನು ಮೆಲ್ಬೋರ್ನ್ನಲ್ಲೇ ಗೆದ್ದ ಮೊದಲ ಆಟಗಾರ್ತಿಯೂ ಆಗಿದ್ದಾರೆ.
21 ವರ್ಷದ ಝೆಂಗ್, ನಾ ಲೀ ಬಳಿಕ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆದ್ದ ಚೀನಾದ 2ನೇ ಆಟಗಾರ್ತಿ ಎನಿಸುವ ಪ್ರಯತ್ನದಲ್ಲಿ ಎಡವಿದರು. ಆದರೆ ನಾ ಲೀ ಬಳಿಕ ವಿಶ್ವ ರ್ಯಾಂಕಿಂಗ್ನಲ್ಲಿ ಅಗ್ರ 10ರೊಳಗೆ ಸ್ಥಾನ ಪಡೆದ ಚೀನಾ ಆಟಗಾರ್ತಿ ಎನಿಸಿದ್ದಾರೆ. ಟೂರ್ನಿಯಲ್ಲಿ ಸರ್ವಾಧಿಕ 54 ಏಸ್ ಸಿಡಿಸಿದ ಸಾಧನೆಯೂ ಝೆಂಗ್ ಅವರದಾಗಿದೆ.
ಸೆಟ್ ಸೋಲದೆ ಚಾಂಪಿಯನ್
ಸಬಲೆಂಕಾ ಕಳೆದ 3 ವರ್ಷಗಳಲ್ಲಿ ಟೂರ್ನಿಯುದ್ದಕ್ಕೂ ಒಂದೂ ಸೆಟ್ ಸೋಲದೆ ಆಸ್ಟ್ರೆಲಿಯನ್ ಓಪನ್ ಪ್ರಶಸ್ತಿ ಗೆದ್ದ 2ನೇ ಆಟಗಾರ್ತಿ ಎನಿಸಿದ್ದಾರೆ. 2022ರಲ್ಲಿ ಆಶ್ಲೆ ಬಾರ್ಟಿ ಕೂಡ ಈ ಸಾಧನೆ ಮಾಡಿದ್ದರು.
ಸಬಲೆಂಕಾ ಮುಕ್ತ ಟೆನಿಸ್ ಯುಗದಲ್ಲಿ ಸತತ 2 ಬಾರಿ ಆಸ್ಟ್ರೆಲಿಯನ್ ಓಪನ್ ಗೆದ್ದ 9ನೇ ಆಟಗಾರ್ತಿಯಾಗಿದ್ದಾರೆ. ಮಾರ್ಗರೇಟ್ ಕೋರ್ಟ್, ಗೂಲಗೊಂಗ್, ಸ್ಟೆಫಿಗ್ರಾಫ್, ಮೋನಿಕಾ ಸೆಲೆಸ್, ಮಾರ್ಟಿನಾ ಹಿಂಗಿಸ್, ಜೆನ್ನಿರ್ ಕ್ಯಾಪ್ರಿಯಾಟಿ, ಸೆರೇನಾ ವಿಲಿಯಮ್ಸ್ ಮತ್ತು ಅಜರೆಂಕಾ ಹಿಂದಿನ ಸಾಧಕಿಯರು.