ಮುಂಬೈ ತಂಡ ತೊರೆಯುತ್ತಾರಂತೆ ಅರ್ಜುನ್​? ಸಚಿನ್​ ಪುತ್ರನಿಗಾಗಿ ಮುಂದೆ ಬಂದ ಬಲಿಷ್ಠ ತಂಡವಿದು... IPL 2026

IPL 2026
Published on

ಮುಂಬೈ: ಇಂಡಿಯನ್​ ಪ್ರೀಮಿಯರ್​ ಲೀಗ್​- 2026ರ ( IPL 2026 ) ಸೀಸನ್ ಆರಂಭಕ್ಕೆ ಇನ್ನೂ ಸಾಕಷ್ಟು ಸಮಯ ಉಳಿದಿದೆ. ಸದ್ಯ ಎಲ್ಲ ಫ್ರಾಂಚೈಸಿಗಳು ಈ ಸೀಸನ್‌ಗೆ ಈಗಿನಿಂದಲೇ ಭಾರಿ ತಯಾರಿ ಮಾಡಿಕೊಳ್ಳುತ್ತಿವೆ. ಈ ಸೀಸನ್‌ಗೂ ಮುನ್ನ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಆಟಗಾರರನ್ನು ಉಳಿಸಿಕೊಳ್ಳಲು ನವೆಂಬರ್ 15 ಕೊನೆಯ ದಿನಾಂಕವಾಗಿದೆ. ಅಂದರೆ, ನಾಳೆ ಎಲ್ಲ ಫ್ರಾಂಚೈಸಿಗಳು ರೀಟೈನ್​ ಮಾಡಿಕೊಂಡ ಹಾಗೂ ಬಿಡುಗಡೆ ಮಾಡಿದ ಆಟಗಾರರ ಪಟ್ಟಿಯನ್ನು ಕೊಡಬೇಕಾಗಿದೆ. ಹೀಗಾಗಿ ಎಲ್ಲ ಐಪಿಎಲ್​ ಫ್ರಾಂಚೈಸಿಗಳು ವ್ಯಾಪಾರ ಒಪ್ಪಂದಗಳಲ್ಲಿ ಬಿಜಿಯಾಗಿವೆ.

ಚೆನ್ನೈ ಸೂಪರ್ ಕಿಂಗ್ಸ್ ( CSK ) ಮತ್ತು ರಾಜಸ್ಥಾನ ರಾಯಲ್ಸ್ ( ಆರ್​ಆರ್​ ) ನಡುವೆ ಈಗಾಗಲೇ ವ್ಯಾಪಾರ ಒಪ್ಪಂದ ಪೂರ್ಣಗೊಂಡಿದೆ ಎಂಬ ವರದಿಗಳು ಬಂದಿವೆ. ಈ ಒಪ್ಪಂದದ ಪ್ರಕಾರ, ಆರ್​ಆರ್ ತಂಡ​ ಸಂಜು ಸ್ಯಾಮ್ಸನ್ ಅವರನ್ನು ಸಿಎಸ್​ಕೆಗೆ ಟ್ರೇಡ್​​ ಮಾಡಿದರೆ, ಅದಕ್ಕೆ ಪ್ರತಿಯಾಗಿ ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜಾ ಮತ್ತು ಸ್ಯಾಮ್ ಕರನ್ ಅವರನ್ನು ಸಿಎಸ್​ಕೆ, ಆರ್​ಆರ್​ ತಂಡಕ್ಕೆ ವರ್ಗಾಯಿಸಲಿದೆ. ಆದರೆ, ಈ ಬಗ್ಗೆ ಎರಡೂ ತಂಡಗಳಿಂದ ಈವರೆಗೂ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.

ಇದೀಗ ಮತ್ತೊಂದು ವ್ಯಾಪಾರ ಒಪ್ಪಂದ ಕುತೂಹಲ ಕೆರಳಿಸುತ್ತಿದೆ. ಅದೇನೆಂದರೆ, ಲಖನೌ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಈ ಒಪ್ಪಂದ ನಡೆಯುತ್ತಿದೆ ಎಂಬ ವರದಿಗಳಿವೆ. ಟೀಮ್ ಇಂಡಿಯಾದ ದಂತಕತೆ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರನ್ನು ವೇಗಿ ಶಾರ್ದೂಲ್ ಠಾಕೂರ್​ಗಾಗಿ ಲಖನೌ ಸೂಪರ್ ಜೈಂಜ್ಸ್​ ತಂಡಕ್ಕೆ ನೀಡುವ ಬಗ್ಗೆ ಮುಂಬೈ ಪರಿಗಣಿಸುತ್ತಿದೆ ಎಂದು ವರದಿಯಾಗಿದೆ. ಇದಕ್ಕೆ ಸಂಬಂಧಿಸಿದ ಮಾತುಕತೆಗಳು ಈಗಾಗಲೇ ಅಂತಿಮ ಹಂತವನ್ನು ತಲುಪಿವೆ ಎಂಬ ವರದಿ ಬಂದಿದೆ. ಅಂದಹಾಗೆ, ಇದು ಆಟಗಾರರ ವಿನಿಮಯವಲ್ಲ, ತಂಡದ ನಡುವಿನ ವೈಯಕ್ತಿಯ ವ್ಯವಹಾರದ ಒಪ್ಪಂದವಾಗಿದೆ.

ಇನ್ನು ಕಳೆದ ಹರಾಜಿನಲ್ಲಿ ಶಾರ್ದೂಲ್ ಠಾಕೂರ್ ಮಾರಾಟವಾಗಲಿಲ್ಲ. ಆದಾಗ್ಯೂ, ಐಪಿಎಲ್ 2025ರ ಸೀಸನ್​ನಲ್ಲಿ ಆಟಗಾರನೊಬ್ಬ ಗಾಯಗೊಂಡ ಕಾರಣ, ಲಖನೌ ಸೂಪರ್ ಜೈಂಟ್ಸ್ ತಂಡ ಶಾರ್ದೂಲ್ ಠಾಕೂರ್ ಅವರನ್ನು 2 ಕೋಟಿ ರೂ. ಮೂಲ ಬೆಲೆಗೆ ಖರೀದಿಸಿತು. ಆ ಸೀಸನ್​ನಲ್ಲಿ ಶಾರ್ದೂಲ್​ ಒಟ್ಟು 10 ಪಂದ್ಯಗಳನ್ನು ಆಡಿದರು ಮತ್ತು 11.03 ರ ಎಕಾನಮಿಯಲ್ಲಿ 13 ವಿಕೆಟ್‌ಗಳನ್ನು ಪಡೆದರು. ಆದಾಗ್ಯೂ, ಅವರು ಬ್ಯಾಟಿಂಗ್‌ನಲ್ಲಿ ಕೇವಲ 18 ರನ್‌ಗಳನ್ನು ಮಾತ್ರ ಗಳಿಸಿದರು.

ಅದೇ ರೀತಿ ಅರ್ಜುನ್ ತೆಂಡೂಲ್ಕರ್ ಕಳೆದ ಕೆಲವು ವರ್ಷಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಮುಂಬೈ ತಂಡ ಅವರನ್ನು 20 ಲಕ್ಷ ರೂ. ಮೂಲ ಬೆಲೆಗೆ ಖರೀದಿಸಿತು. 26 ವರ್ಷದ ಆಲ್‌ರೌಂಡರ್ ಕಳೆದ ಸೀಸನ್​ನಲ್ಲಿ ಒಂದೇ ಒಂದು ಪಂದ್ಯವನ್ನು ಆಡಲಿಲ್ಲ. ಐಪಿಎಲ್ 2023 ಮತ್ತು 2024ರ ಎರಡು ಸೀಸನ್​ಗಳಲ್ಲಿ ಅರ್ಜುನ್​ ಅವರು ಕೇವಲ ನಾಲ್ಕು ಪಂದ್ಯಗಳನ್ನು ಮಾತ್ರ ಆಡಿದರು. ಒಟ್ಟಾರೆಯಾಗಿ, ಅವರು 5 ಐಪಿಎಲ್ ಪಂದ್ಯಗಳನ್ನು ಆಡಿದ್ದು, ಮೂರು ವಿಕೆಟ್‌ಗಳನ್ನು ಪಡೆದಿದ್ದಾರೆ. ಒಂದು ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಸಿಕ್ಕಾಗ ಅವರು 13 ರನ್ ಗಳಿಸಿದರು.

ಅಶ್ವಿನ್ ಆಕಸ್ಮಿಕವಾಗಿ ಹೇಳಿದ್ರಾ?

ಟೀಮ್​ ಇಂಡಿಯಾದ ಮಾಜಿ ಸ್ಪಿನ್ನರ್ ಆರ್. ಅಶ್ವಿನ್, ಆಲ್ರೌಂಡರ್ ಶಾರ್ದೂಲ್ ಠಾಕೂರ್ ಅವರನ್ನು ಐಪಿಎಲ್ 2026 ಕ್ಕೂ ಮೊದಲು ಮುಂಬೈ ಇಂಡಿಯನ್ಸ್‌ಗೆ ವರ್ಗಾಯಿಸಲಾಗಿದೆ ಎಂದು ಆಕಸ್ಮಿಕವಾಗಿ ಹೇಳಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅಶ್ವಿನ್​, ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಮುಂಬೈ ತಂಡ ಯಾರನ್ನೂ ಬಿಡುಗಡೆ ಮಾಡುವುದಿಲ್ಲ. ದೀಪಕ್ ಚಾಹರ್ ಗಾಯಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರನ್ನು ಬದಲಾಯಿಸಲು ಯಾರನ್ನಾದರೂ ಹುಡುಕುವುದು ಮುಂಬೈನ ಮುಖ್ಯ ಕೆಲಸ. ಅವರು ಈಗಾಗಲೇ ವ್ಯಾಪಾರ ಒಪ್ಪಂದದ ಮೂಲಕ ಲಖನೌದಿಂದ ಶಾರ್ದೂಲ್ ಠಾಕೂರ್ ಅವರನ್ನು ಪಡೆದುಕೊಂಡಿದ್ದಾರೆ. ಈಗ ಅವರು ಸ್ಪಿನ್ನರ್‌ಗಾಗಿ ಹುಡುಕುತ್ತಿದ್ದಾರೆ ಎಂದು ಹೇಳಿದರು. ಆದರೆ, ಅಶ್ವಿನ್ ನಂತರ ತನ್ನ ತಪ್ಪನ್ನು ಅರಿತುಕೊಂಡು ವಿಡಿಯೋವನ್ನು ಡಿಲೀಟ್​ ಮಾಡಿದರು. ಆದರೆ, ಅಷ್ಟರಲ್ಲಾಗಲೇ ವಿಡಿಯೋ ಹರಿದಾಡಿತ್ತು. ಕೆಲವರು ವಿಡಿಯೋವನ್ನು ಡೌನ್‌ಲೋಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವುದರಿಂದ ವೈರಲ್ ಆಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net