

Arjun Tendulkar: ಭಾರತೀಯ ಹೆಮ್ಮೆಯ ಕ್ರಿಕೆಟಿಗ, ದಿಗ್ಗಜ, 'ಕ್ರಿಕೆಟ್ ದೇವರು' ಎಂದೇ ಕರೆಯಲ್ಪಡುವ ಮಾಸ್ಟರ್ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಸುಪುತ್ರ ಅರ್ಜುನ್ ಕೂಡ ಇದೀಗ ಕ್ರಿಕೆಟ್ ಅನ್ನೇ ತಮ್ಮ ವೃತ್ತಿಯಾಗಿ ಮುಂದುವರಿಸಲು ದೃಢವಾಗಿ ನಿರ್ಧರಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದಿದ್ದ ಅರ್ಜುನ್, ಕೇವಲ ಒಂದೆರೆಡು ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಂಡರು. ಬೌಲಿಂಗ್ ಮೂಲಕ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯಲು ಪ್ರಯತ್ನಿಸಿದ ಅರ್ಜುನ್, ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲಿಲ್ಲ. ಇದು ಅವರನ್ನು ಮುಂದಿನ ಪಂದ್ಯಗಳಲ್ಲಿ ಆಡಿಸದಿರಲು ಕಾರಣವಾಯಿತು. ಅರ್ಜುನ್ ಮುಂಬರುವ ದಿನಗಳಲ್ಲಿ ಅತ್ಯುತ್ತಮ ಬ್ಯಾಟರ್ ಆಗಿ ಹೊರಹೊಮ್ಮಲಿದ್ದಾರೆ ಎಂದು ಮಾಜಿ ಹಿರಿಯ ಆಟಗಾರ ಯೋಗರಾಜ್ ಸಿಂಗ್ ಭವಿಷ್ಯ ನುಡಿದಿದ್ದಾರೆ.
ಇದುವರೆಗೆ ದೇಶೀಯ ಕ್ರಿಕೆಟ್ ಅಥವಾ ಐಪಿಎಲ್‌ನಲ್ಲಿ ತನ್ನ ಛಾಪು ಮೂಡಿಸಲು ಸಾಧ್ಯವಾಗದ ಅರ್ಜುನ್ ಕುರಿತು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್, "ಅರ್ಜುನ್ ಆಲ್‌ರೌಂಡರ್ ಆಗಿರುವುದರಿಂದ, ಅವರು ಬ್ಯಾಟಿಂಗ್‌ನತ್ತ ಹೆಚ್ಚು ಗಮನಹರಿಸಬೇಕು. ಅರ್ಜುನ್ ನನ್ನ ಬಳಿಗೆ ಬಂದರೆ, ಆರು ತಿಂಗಳಲ್ಲಿ ಅವರನ್ನು ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿ ಮಾಡುತ್ತೇನೆ. ಅವರಲ್ಲಿ ಅದ್ಭುತ ಬ್ಯಾಟಿಂಗ್ ಕೌಶಲ್ಯವಿದೆ. ಅವರ ಸಾಮರ್ಥ್ಯ ಇನ್ನೂ ಯಾರಿಗೂ ತಿಳಿದಿಲ್ಲ" ಎಂದರು.
"ನಾನು ಅವರಿಗೆ 12 ದಿನಗಳ ಕಾಲ ತರಬೇತಿ ನೀಡಿದ್ದೇನೆ. ಆಗ ಅವರ ಬ್ಯಾಟಿಂಗ್ ಸಾಮರ್ಥ್ಯವನ್ನು ಗಮನಿಸಿದ್ದೆ. ಅರ್ಜುನ್ ತಮ್ಮ ರಣಜಿ ಟ್ರೋಫಿ ಚೊಚ್ಚಲ ಪಂದ್ಯದಲ್ಲಿ ಶತಕ ಗಳಿಸಿ, ನಮ್ಮೆಲ್ಲರ ಗಮನ ಸೆಳೆದಿದ್ದರು. ಸಚಿನ್ ಮತ್ತು ಯುವರಾಜ್ ಇಬ್ಬರೂ ಅರ್ಜುನ್ ತೆಂಡೂಲ್ಕರ್ ಬಗ್ಗೆ ಗಮನ ಹರಿಸಬೇಕು. ಅರ್ಜುನ್ ಒಬ್ಬ ಉತ್ತಮ ಬ್ಯಾಟ್ಸ್‌ಮನ್. ಆದರೆ, ಬೌಲಿಂಗ್‌ನಲ್ಲಿ ಸಾಕಷ್ಟು ಸಮಯ ವ್ಯರ್ಥ ಮಾಡುತ್ತಿದ್ದಾರೆ" ಎಂದು ಸಂದರ್ಶನವೊಂದರಲ್ಲಿ ಹೇಳಿದರು,(ಏಜೆನ್ಸೀಸ್).