ಕ್ರಿಕೆಟ್ ದಂತಕತೆ ಮಗನಾದರೂ ಅಷ್ಟೇ... ಯಾರಿಗೂ ಬೇಡವಾದ ಅರ್ಜುನ್ ತೆಂಡೂಲ್ಕರ್! Arjun Tendulkar

Arjun Tendulkar
Published on

Arjun Tendulkar : ಟೀಮ್​ ಇಂಡಿಯಾದ ಕ್ರಿಕೆಟ್​ ದಂತಕತೆ ಸಚಿನ್ ತೆಂಡೂಲ್ಕರ್​ ಅವರನ್ನು​ ಕ್ರಿಕೆಟ್‌ ದೇವರೆಂದು ಸಹ ಕರೆಯುತ್ತಾರೆಂಬುದು ನಿಮಗೆಲ್ಲರಿಗೂ ತಿಳಿದಿದೆ. ಭಾರತದಲ್ಲಿ ಕ್ರಿಕೆಟ್ ಇಷ್ಟೊಂದು ಜನಪ್ರಿಯವಾಗಲು ಬಹುಮುಖ್ಯ ಕಾರಣವೆಂದರೆ ಅದು ಸಚಿನ್ ತೆಂಡೂಲ್ಕರ್. ಹೀಗಾಗಿ ಅವರಿಗೆ ಭಾರತದ ಜೊತೆಗೆ ವಿದೇಶದಲ್ಲೂ ಅಪಾರ ಅಭಿಮಾನಿಗಳಿದ್ದಾರೆ. ಅದಕ್ಕೂ ಮಿಗಿಲಾಗಿ ಇಂದು ವಿಶ್ವ ಕ್ರಿಕೆಟ್‌ನ ಏಕೈಕ ರಾಜನಾಗಿ ಮೆರೆಯುತ್ತಿರುವ ವಿರಾಟ್ ಕೊಹ್ಲಿ ಕೂಡ ತಮ್ಮ ಆರಾಧ್ಯ ದೈವ ಸಚಿನ್ ಎಂದು ಹೇಳಿಕೊಂಡಿದ್ದಾರೆ. ಸಚಿನ್​ ಅವರನ್ನು ನೋಡಿಯೇ ಕ್ರಿಕೆಟ್ ಆಡಲು ಆರಂಭಿಸಿದೆ ಎಂದಿದ್ದಾರೆ.

ಸಚಿನ್​​ ತೆಂಡೂಲ್ಕರ್​​ ಹಾದಿಯಲ್ಲಿ ಅವರ ಮಗ ಅರ್ಜುನ್ ತೆಂಡೂಲ್ಕರ್ ಕೂಡ ಕ್ರಿಕೆಟ್​ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಆದರೆ, ನಿರೀಕ್ಷೆಗೆ ತಕ್ಕಂತೆ ಸಚಿನ್ ಅವರ ಮಗ ಕ್ರಿಕೆಟ್​ನಲ್ಲಿ ಮಿಂಚುತ್ತಿಲ್ಲ. ನಿಜ ಹೇಳಬೇಕೆಂದರೆ ಅರ್ಜುನ್​ ತೆಂಡೂಲ್ಕರ್​ರಿಂದ ಯಾವುದೇ ಉತ್ತಮ ಪ್ರದರ್ಶನ ಬಂದಿಲ್ಲ. ಅರ್ಜುನ್​ ಅವರು ಮುಂಬೈ ರಣಜಿ ತಂಡದಲ್ಲಿ ಅರ್ಜುನ್ ಆಡಿದ್ದರು. ಆದರೆ, ಮುಂಬೈನಲ್ಲಿ ತನಗೆ ಸಿಗುತ್ತಿರುವ ಅವಕಾಶ ಸಾಕಾಗಲಿಲ್ಲ ಎಂದರಿತ ಅರ್ಜುನ್, ಹೆಚ್ಚಿನ ಅವಕಾಶಗಳ ಹುಡುಕಾಟದಲ್ಲಿ ಗೋವಾ ತಂಡವನ್ನು ಸೇರಿಕೊಂಡರು.

ಆದರೆ, ಗೋವಾದಲ್ಲಿಯೂ ಅರ್ಜುನ್​ ಮಿಂಚಲಿಲ್ಲ. ಇದೀಗ ಸತತ ಕಳಪೆ ಪ್ರದರ್ಶನದ ಬಳಿಕ ಗೋವಾ ಕೂಡ ಈ ಅರ್ಜುನ್​ರನ್ನು ತಂಡದಿಂದ ಹೊರಹಾಕಿದೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅರ್ಜುನ್​ ಗೋವಾ ಪರ ಆಡಿದರು. ಮುಂಬೈ ವಿರುದ್ಧದ ಪಂದ್ಯದಲ್ಲಿ ಅರ್ಜುನ್ ನಾಲ್ಕು ಓವರ್ ಗಳಲ್ಲಿ 48 ರನ್ ಬಿಟ್ಟುಕೊಟ್ಟು ಬ್ಯಾಟಿಂಗ್​ನಲ್ಲಿ ಕೇವಲ 9 ರನ್ ಗಳಿಸಿದರು.

ಕಳಪೆ ಪ್ರದರ್ಶನದ ಹೊರತಾಗಿಯೂ ಅರ್ಜುನ್​ಗೆ ಎರಡನೇ ಪಂದ್ಯದಲ್ಲಿ ಅವಕಾಶ ನೀಡಲಾಯಿತು. ಈ ವೇಳೆ ಉತ್ತಮ ಪ್ರದರ್ಶನ ನೀಡಿದರು. ಮೂರು ಓವರ್‌ಗಳಲ್ಲಿ ಕೇವಲ 19 ರನ್‌ಗಳನ್ನು ಬಿಟ್ಟುಕೊಟ್ಟರು. ಈ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಸಿಗಲಿಲ್ಲ. ಮತ್ತೆ ಆಂಧ್ರಪ್ರದೇಶ ವಿರುದ್ಧ ಮೂರನೇ ಬಾರಿ ಅವಕಾಶ ನೀಡಲಾಯಿತು. ಈ ಪಂದ್ಯದಲ್ಲಿ ಅರ್ಜುನ್ 3.4 ಓವರ್​ಗಳಲ್ಲಿ 36 ರನ್ ಬಿಟ್ಟುಕೊಟ್ಟರು. ಗೋವಾ ತಂಡ ಕೇರಳ ವಿರುದ್ಧದ ಪಂದ್ಯಕ್ಕೆ ಅರ್ಜುನ್ ಅವರನ್ನು ಪರಿಗಣಿಸಿರಲಿಲ್ಲ. ಇದಾದ ಬಳಿಕ ಇದೀಗ ಅವರನ್ನು ತಂಡದಿಂದ ಹೊರ ಹಾಕಲಾಗಿದೆ.

25 ವರ್ಷದ ಅರ್ಜುನ್ ತೆಂಡೂಲ್ಕರ್ ಇದುವರೆಗೆ ಒಟ್ಟು 17 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 37 ವಿಕೆಟ್ ಹಾಗೂ 1 ಶತಕ ಮತ್ತು ಎರಡು ಅರ್ಧಶತಕಗಳ ನೆರವಿನಿಂದ 532 ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ, ಅವರು 15 ಲಿಸ್ಟ್ ಎ ಪಂದ್ಯಗಳಲ್ಲಿ 21 ವಿಕೆಟ್ ಮತ್ತು 62 ರನ್ ಗಳಿಸಿದ್ದಾರೆ. ಅರ್ಜುನ್ 24 ಟಿ20 ಪಂದ್ಯಗಳಲ್ಲಿ 27 ವಿಕೆಟ್ ಹಾಗೂ 119 ರನ್ ಗಳಿಸಿದ್ದಾರೆ.

ಸಚಿನ್ ತೆಂಡೂಲ್ಕರ್ ಅವರ ಪುತ್ರ ಎಂಬ ಕಾರಣಕ್ಕೆ ಮುಂಬೈ ಇಂಡಿಯನ್ಸ್ ತಂಡ 30 ಲಕ್ಷ ರೂಪಾಯಿಗೆ ತಾರೆಯನ್ನು ತೆಗೆದುಕೊಂಡಿದೆ, ಆದರೆ ಅವಕಾಶ ಸಿಗುವ ಸಾಧ್ಯತೆ ಇಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net