ಉದ್ದೀಪನ ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಮಹಿಳಾ ಕ್ರಿಕೆಟರ್!

doping cricket
Published on

ನವದೆಹಲಿ: ಮಧ್ಯಪ್ರದೇಶದ ಕ್ರಿಕೆಟ್ ಆಟಗಾರ್ತಿ ಅಂಶುಲಾ ರಾವ್ ಉದ್ದೀಪನ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ಅವರು ಮಹಿಳಾ ಕ್ರಿಕೆಟ್‌ನಲ್ಲಿ ಡೋಪಿಂಗ್ ಕಳಂಕ ಎದುರಿಸಿದ ಮೊದಲ ಆಟಗಾರ್ತಿ ಎನಿಸಿದ್ದಾರೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಬಿಸಿಸಿಐ, ರಾಷ್ಟ್ರೀಯ ಉದ್ದೀಪನ ನಿಗ್ರಹ ಘಟಕದ (ನಾಡಾ) ಅಡಿಯಲ್ಲಿ ಬರಲು ಒಪ್ಪಿಕೊಂಡ ಬಳಿಕ ಪುರುಷ, ಮಹಿಳಾ, ಸೀನಿಯರ್-ಜೂನಿಯರ್ ವಿಭಾಗದಲ್ಲಿ ಇದು ಮೊದಲ ಉದ್ದೀಪನ ಪ್ರಕರಣವೂ ಆಗಿದೆ. ಕಳೆದ ವರ್ಷ ಮುಂಬೈ ಬ್ಯಾಟ್ಸ್‌ಮನ್ ಪೃಥ್ವಿ ಷಾ ಉದ್ದೀಪನ ಪರೀಕ್ಷೆಯಲ್ಲಿ ವಿಫಲರಾಗಿದ್ದರೂ, ಅದು ಬಿಸಿಸಿಐ ನಾಡಾ ಅಡಿಯಲ್ಲಿ ಬರುವುದಕ್ಕೆ ಮುನ್ನ ದಾಖಲಾದ ಪ್ರಕರಣವಾಗಿತ್ತು.

ಮಧ್ಯಪ್ರದೇಶ ಸೀನಿಯರ್ ಮಹಿಳಾ ತಂಡದ ಭಾಗವಾಗಿದ್ದ ಅಂಶುಲಾ ರಾವ್, ಅವರ ಉದ್ದೀಪನ ಪರೀಕ್ಷೆಯಲ್ಲಿ ನಿಷೇಧಿತ ನಾರನ್‌ಡ್ರೋಸ್ಟೆರೋನ್ ಅನಾಬೋಲಿಕ್ ಸ್ಟಿರಾಯ್ಡಿ ಪತ್ತೆಯಾಗಿದೆ. ಬಲಗೈ ಬ್ಯಾಟುಗಾರ್ತಿ ಮತ್ತು ಮಧ್ಯಮ ವೇಗದ ಬೌಲರ್ ಆಗಿರುವ ಅಂಶುಲಾ ರಾವ್ ಈಗ ನಾಡಾದಿಂದ ತಾತ್ಕಾಲಿಕವಾಗಿ ಅಮಾನತುಗೊಂಡಿದ್ದಾರೆ. ಅವರ ಮೂತ್ರದ ಸ್ಯಾಂಪಲ್ ಪರೀಕ್ಷೆಯಲ್ಲೂ ಸ್ಟಿರಾಯ್ಡಿ ಪತ್ತೆಯಾಗಿದೆ ಎನ್ನಲಾಗಿದೆ.

23 ವರ್ಷದ ಅಂಶುಲಾ ರಾವ್ ಅವರನ್ನು ಕಳೆದ ಮಾರ್ಚ್ 14ರಂದು ಬರೋಡದಲ್ಲಿ ಉದ್ದೀಪನ ಪರೀಕ್ಷೆಗೆ ಒಳಪಡಿಸಲಾಗಿತ್ತು. ಪ್ರಕರಣದಲ್ಲಿ ಅವರು ಗರಿಷ್ಠ 4 ವರ್ಷಗಳ ನಿಷೇಧ ಶಿಕ್ಷೆಗೆ ಒಳಗಾಗುವ ಭೀತಿ ಇದೆ. ಅವರು 2019-20ರ ಸಾಲಿನಲ್ಲಿ ಬಿಸಿಸಿಐನ 23 ವಯೋಮಿತಿ ಟಿ20 ಟೂರ್ನಿಯಲ್ಲಿ ಆಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net