ಗಾಯಗೊಂಡ​ ಕೊಹ್ಲಿ ಮುಂದಿನ ಪಂದ್ಯಕ್ಕೆ ಲಭ್ಯವಾಗ್ತಾರಾ? ಇಲ್ಲಿದೆ ನೋಡಿ ಆರ್​ಸಿಬಿ ಕೋಚ್​ ಕೊಟ್ಟ ಉತ್ತರ... Virat Kohli

Virat Kohli
Published on

Virat Kohli : ನಿನ್ನೆ (ಏಪ್ರಿಲ್ 2) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಪ್ರಸಕ್ತ ಸಾಲಿನ 14ನೇ ಐಪಿಎಲ್ ಪಂದ್ಯದ ವೇಳೆ ಆರ್‌ಸಿಬಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಗಾಯಗೊಂಡರು. ಇನ್ನಿಂಗ್ಸ್‌ನ 12 ನೇ ಓವರ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ವಿರಾಟ್ ಹೆಬ್ಬೆರಳಿಗೆ ಗಾಯವಾಯಿತು. ಈ ವೇಳೆ ವಿರಾಟ್ ನೋವಿನಿಂದ ಒದ್ದಾಡಿದರು. ವಿರಾಟ್ ಈ ರೀತಿ ಗಾಯಗೊಂಡಿರುವುದು ಬಹಳ ಅಪರೂಪ. ನೋವು ಸಹಿಸಲಾರದೆ ವಿರಾಟ್​ ನೆಲಕ್ಕೆ ಬಿದ್ದಿದ್ದರಿಂದ ಇಡೀ ಚಿನ್ನಸ್ವಾಮಿ ಕ್ರೀಡಾಂಗಣ ಸ್ತಬ್ಧವಾಯಿತು. ಫಿಸಿಯೋ ಪ್ರಥಮ ಚಿಕಿತ್ಸೆ ನೀಡಿದ ನಂತರ, ವಿರಾಟ್ ಸ್ವಲ್ಪ ಸಮಯದೊಳಗೆ ಚೇತರಿಸಿಕೊಂಡಂತೆ ತೋರುತ್ತಿತ್ತು.

ಆದಾಗ್ಯೂ, ವಿರಾಟ್ ಅಭಿಮಾನಿಗಳಲ್ಲಿ ಒಂದು ಆತಂಕ ಹಾಗೆಯೇ ಉಳಿದಿದೆ. ಗಾಯದ ನಂತರ ವಿರಾಟ್ ಮೊದಲಿನಂತೆ ಸಕ್ರಿಯರಾಗಿರಲಿಲ್ಲ. ಇದರೊಂದಿಗೆ, ಮುಂದಿನ ಪಂದ್ಯಕ್ಕೆ ವಿರಾಟ್ ಲಭ್ಯವಿರುತ್ತಾರೋ? ಇಲ್ಲವೋ? ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡಲು ಆರಂಭಿಸಿದೆ. ಆದರೆ, ಆರ್‌ಸಿಬಿ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ವಿರಾಟ್ ಗಾಯದ ಬಗ್ಗೆ ಪಾಸಿಟಿವ್​ ಮಾಹಿತಿ ನೀಡಿದ್ದು, ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ವಿರಾಟ್​ಗೆ ಆಗಿರುವ ಗಾಯವು ಚಿಕ್ಕದಾಗಿದೆ ಎಂದು ಆ್ಯಂಡಿ ಫ್ಲವರ್ ಘೋಷಿಸಿದರು. ಆರ್‌ಸಿಬಿ ತನ್ನ ಮುಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಏಪ್ರಿಲ್ 7 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಎಂದಿನಂತೆ ಈ ಪಂದ್ಯಕ್ಕೂ ವಿರಾಟ್​ ಕೊಹ್ಲಿ ಅವರು ಲಭ್ಯವಾಗಲಿದ್ದಾರೆ.

ಪಂದ್ಯ ವಿಚಾರಕ್ಕೆ ಬಂದರೆ, ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 169 ರನ್ ಗಳಿಸಿತು. ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ (54 ರನ್​ 40 ಎಸೆತ, 1 ಬೌಂಡರಿ, 5 ಸಿಕ್ಸರ್) ಅರ್ಧಶತಕ ಗಳಿಸಿದರು. ಜಿತೇಶ್ ಶರ್ಮಾ (33) ಮತ್ತು ಟಿಮ್ ಡೇವಿಡ್ (32) ಉತ್ತಮ ಪ್ರದರ್ಶನ ನೀಡಿದರು. ಫಿಲ್ ಸಾಲ್ಟ್ (14), ವಿರಾಟ್ ಕೊಹ್ಲಿ (7), ದೇವದತ್ ಪಡಿಕ್ಕಲ್ (4), ರಜತ್ ಪಾಟಿದಾರ್ (12), ಮತ್ತು ಕೃನಾಲ್ ಪಾಂಡ್ಯ (5) ವಿಫಲರಾದರು. ಗುಜರಾತ್ ಬೌಲರ್‌ಗಳಲ್ಲಿ ಸಿರಾಜ್ ಮೂರು ವಿಕೆಟ್ ಪಡೆದರು. ಸಾಯಿ ಕಿಶೋರ್ ಎರಡು ವಿಕೆಟ್ ಪಡೆದರೆ, ಅರ್ಷದ್ ಖಾನ್, ಪ್ರಸಿದ್ಧ್ ಕೃಷ್ಣ ಮತ್ತು ಇಶಾಂತ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು.

ನಂತರ, ಜೋಸ್ ಬಟ್ಲರ್ (ಔಟಾಗದೆ 73 ರನ್​, 39 ಎಸೆತ, 5 ಬೌಂಡರಿ, 6 ಸಿಕ್ಸರ್) ಬಿರುಸಿನ ಅರ್ಧಶತಕ ಗಳಿಸಿದರೆ, ಸಾಯಿ ಸುದರ್ಶನ್ (49) ಮತ್ತು ಶೆರ್ಫೇನ್ ರುದರ್ಫೋರ್ಡ್ (ಔಟಾಗದೆ 30) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಗುಜರಾತ್ 17.5 ಓವರ್‌ಗಳಲ್ಲಿ ಎರಡು ವಿಕೆಟ್‌ಗಳ ನಷ್ಟಕ್ಕೆ ಗುರಿ ತಲುಪಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net