

Rajat Patidar : ಪ್ರಸಕ್ತ ಐಪಿಎಲ್ ಸೀಸನ್ನಲ್ಲಿ ಸತತ ಎರಡು ಗೆಲುವುಗಳೊಂದಿಗೆ ಭರ್ಜರಿ ಪ್ರದರ್ಶನ ನೀಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಗುಜರಾತ್ ಟೈಟಾನ್ಸ್ ಆಘಾತ ನೀಡಿದೆ. ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 14ನೇ ಐಪಿಎಲ್ ಪಂದ್ಯದಲ್ಲಿ ಗುಜರಾತ್ ತಂಡವು ಬೆಂಗಳೂರು ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಬೆಂಗಳೂರು ತಂಡದ ಸೋಲಿಗೆ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯವೇ ಪ್ರಮುಖ ಕಾರಣ ಎಂದು ಆರ್‌ಸಿಬಿ ನಾಯಕ ರಜತ್ ಪಟಿದಾರ್ ಹೇಳಿದ್ದಾರೆ.
ಈ ಪಂದ್ಯದಲ್ಲಿ ಆರ್‌ಸಿಬಿ ಪವರ್ ಪ್ಲೇನಲ್ಲೇ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಪಂದ್ಯದ ಬಳಿಕ ಮಾತನಾಡಿದ ರಜತ್ ಪಾಟಿದಾರ್, ಇದೇ ವಿಚಾರವನ್ನು ಪ್ರಸ್ತಾಪ ಮಾಡಿದರು. ಪವರ್ ಪ್ಲೇನಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದರೆ ಮತ್ತು ಗುಜರಾತ್‌ಗೆ 190 ರನ್‌ಗಳ ಗುರಿಯನ್ನು ನೀಡಿದ್ದರೆ, ಫಲಿತಾಂಶ ವಿಭಿನ್ನವಾಗಿರುತ್ತಿತ್ತು ಎಂದು ಹೇಳಿದರು.
ಈ ಪಂದ್ಯವನ್ನು ಸೋತರು ಕೂಡ ಹಲವು ಸಕಾರಾತ್ಮಕ ಅಂಶಗಳು ಇದ್ದವು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಪವರ್ ಪ್ಲೇ ನಂತರ ನಾವು 200 ರನ್‌ಗಳಲ್ಲ, 190 ರನ್‌ಗಳ ಗುರಿಯನ್ನು ನಿಗದಿಪಡಿಸಲು ಬಯಸಿದ್ದೆವು. ಆದಾಗ್ಯೂ, ಆರಂಭದಲ್ಲಿ ಹೆಚ್ಚು ವಿಕೆಟ್‌ಗಳನ್ನು ಕಳೆದುಕೊಂಡಿರುವುದು ನಮ್ಮ ಗೆಲುವಿನ ಸಾಧ್ಯತೆಗಳನ್ನು ಹಾನಿಗೊಳಿಸಿತು. ಆಟಗಾರರ ಉದ್ದೇಶ ಒಳ್ಳೆಯದಾಗಿತ್ತು. ಆದರೆ, ಪವರ್ ಪ್ಲೇನಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿದ್ದು ಸರಿ ಎನಿಸಲಿಲ್ಲ ಎಂದು ಪಾಟಿದಾರ್ ಹೇಳಿದರು.
ಪವರ್ ಪ್ಲೇನಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡಿದ್ದರೆ ಚೆನ್ನಾಗಿರುತ್ತಿತ್ತು. ಪಂದ್ಯ ಮುಂದುವರೆದಂತೆ ಪರಿಸ್ಥಿತಿಗಳು ಸಾಕಷ್ಟು ಸುಧಾರಿಸಿತು. ಗುರಿ ಚಿಕ್ಕದಾಗಿದ್ದರೂ ಅದನ್ನು ಕಾಯ್ದುಕೊಳ್ಳಲು ಬೌಲರ್‌ಗಳು ಶ್ರಮಿಸಿದ್ದಕ್ಕಾಗಿ ಪಾಟಿದಾರ್ ಶ್ಲಾಘಿಸಿದರು. ಪಂದ್ಯವನ್ನು 18ನೇ ಓವರ್‌ಗೆ ಕೊಂಡೊಯ್ದಿದ್ದು ಒಂದು ಪವಾಡ ಎಂದರು.
ಬ್ಯಾಟಿಂಗ್ ವಿಷಯದಲ್ಲಿ, ಜಿತೇಶ್ ಶರ್ಮಾ, ಲಿಯಾನ್ ಲಿವಿಂಗ್‌ಸ್ಟೋನ್ ಮತ್ತು ಟಿಮ್ ಡೇವಿಡ್ ತುಂಬಾ ಚೆನ್ನಾಗಿ ಆಡಿದ್ದಾರೆ. ಇದು ನಮಗೆ ಸಕಾರಾತ್ಮಕ ಅಂಶ. ನಮ್ಮ ಬ್ಯಾಟಿಂಗ್ ಲೈನ್‌ಅಪ್‌ನಲ್ಲಿ ನಮಗೆ ವಿಶ್ವಾಸವಿದೆ ಎಂದು ಪಾಟಿದಾರ್ ಹೇಳಿದರು.
ಪಂದ್ಯ ವಿಚಾರಕ್ಕೆ ಬಂದರೆ, ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 169 ರನ್ ಗಳಿಸಿತು. ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ (54 ರನ್ 40 ಎಸೆತ, 1 ಬೌಂಡರಿ, 5 ಸಿಕ್ಸರ್) ಅರ್ಧಶತಕ ಗಳಿಸಿದರು. ಜಿತೇಶ್ ಶರ್ಮಾ (33) ಮತ್ತು ಟಿಮ್ ಡೇವಿಡ್ (32) ಉತ್ತಮ ಪ್ರದರ್ಶನ ನೀಡಿದರು. ಫಿಲ್ ಸಾಲ್ಟ್ (14), ವಿರಾಟ್ ಕೊಹ್ಲಿ (7), ದೇವದತ್ ಪಡಿಕ್ಕಲ್ (4), ರಜತ್ ಪಾಟಿದಾರ್ (12), ಮತ್ತು ಕೃನಾಲ್ ಪಾಂಡ್ಯ (5) ವಿಫಲರಾದರು. ಗುಜರಾತ್ ಬೌಲರ್‌ಗಳಲ್ಲಿ ಸಿರಾಜ್ ಮೂರು ವಿಕೆಟ್ ಪಡೆದರು. ಸಾಯಿ ಕಿಶೋರ್ ಎರಡು ವಿಕೆಟ್ ಪಡೆದರೆ, ಅರ್ಷದ್ ಖಾನ್, ಪ್ರಸಿದ್ಧ್ ಕೃಷ್ಣ ಮತ್ತು ಇಶಾಂತ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು.
ನಂತರ, ಜೋಸ್ ಬಟ್ಲರ್ (ಔಟಾಗದೆ 73 ರನ್, 39 ಎಸೆತ, 5 ಬೌಂಡರಿ, 6 ಸಿಕ್ಸರ್) ಬಿರುಸಿನ ಅರ್ಧಶತಕ ಗಳಿಸಿದರೆ, ಸಾಯಿ ಸುದರ್ಶನ್ (49) ಮತ್ತು ಶೆರ್ಫೇನ್ ರುದರ್ಫೋರ್ಡ್ (ಔಟಾಗದೆ 30) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಗುಜರಾತ್ 17.5 ಓವರ್‌ಗಳಲ್ಲಿ ಎರಡು ವಿಕೆಟ್‌ಗಳ ನಷ್ಟಕ್ಕೆ ಗುರಿ ತಲುಪಿತು. (ಏಜೆನ್ಸೀಸ್)