

ನವದೆಹಲಿ: ದೆಹಲಿ ಕಾಮನ್ವೆಲ್ತ್ ಗೇಮ್ಸ್ ಸ್ವರ್ಣ ಪದಕ ವಿಜೇತೆ ಮಾಜಿ ಕುಸ್ತಿಪಟು ಅನಿತಾ ಶೆರಾನ್ ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್ಐ) ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿದ್ದಾರೆ. ನಿರ್ಗಮನ ಅಧ್ಯಕ್ಷ ಬ್ರಿಜ್ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಾಕ್ಷಿ ಹೇಳಿದ್ದ ಅನಿತಾ ಈಗ ಅವರ ವಿರುದ್ಧ ನೇರವಾಗಿ ತೊಡೆ ತಟ್ಟಿ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.
ಅಧ್ಯಕ್ಷ ಹುದ್ದೆಯ ರೇಸ್ನಲ್ಲಿರುವ ನಾಲ್ವರು ಅಭ್ಯರ್ಥಿಗಳಲ್ಲಿ ಅನಿತಾ ಏಕೈಕ ಮಹಿಳೆ ಆಗಿದ್ದಾರೆ. ಬ್ರಿಜ್ ಭೂಷಣ್ ಬಣದಿಂದ ಜೈ ಪ್ರಕಾಶ್ (ದೆಹಲಿ), ಸಂಜಯ್ ಸಿಂಗ್ (ಉತ್ತರ ಪ್ರದೇಶ) ಅಧ್ಯಕ್ಷ ಹುದ್ದೆಯ ಕಣದಲ್ಲಿದ್ದಾರೆ. ಜಮ್ಮು ಕಾಶ್ಮೀರದ ಹಿರಿಯ ಎಸ್ಪಿ ದುಶ್ಯಂತ್ ಶರ್ಮ ಅಧ್ಯಕ್ಷ ಹುದ್ದೆಯ ಸ್ಪರ್ಧೆಯಲ್ಲಿರುವ ನಾಲ್ಕನೇ ಅಭ್ಯರ್ಥಿ ಆಗಿದ್ದಾರೆ.
ಚುನಾವಣಾಧಿಕಾರಿ ಆಗಿರುವ ಜಮ್ಮು-ಕಾಶ್ಮೀರದ ಹೈಕೋರ್ಟ್ ನ್ಯಾಯಮೂರ್ತಿ ಮಹೇಶ್ ಮಿತ್ತಲ್ ಕುಮಾರ್ ಮಂಗಳವಾರ ನಾಮಪತ್ರ ಪರಿಶೀಲನೆಯ ಬಳಿಕ ಡಬ್ಲ್ಯುಎಫ್ಐನ ಎಲ್ಲ 15 ಹುದ್ದೆಗಳಿಗೆ ರೇಸ್ನಲ್ಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದಾರೆ. ನಾಮಪತ್ರಗಳನ್ನು ಹಿಂಪಡೆಯಲು ಆಗಸ್ಟ್ 7 ಕೊನೇ ದಿನವಾಗಿದ್ದು, ಅಧ್ಯಕ್ಷ ಹುದ್ದೆಗೆ ರೇಸ್ನಲ್ಲಿರುವ ಬ್ರಿಜ್ಭೂಷಣ್ ಬಣದ ಇಬ್ಬರು ಅಭ್ಯರ್ಥಿಗಳಲ್ಲಿ ಒಬ್ಬರು ಹಿಂದೆ ಸರಿಯುವ ನಿರೀಕ್ಷೆ ಇದೆ. ದೆಹಲಿ ಕುಸ್ತಿ ಸಂಸ್ಥೆ ಅಧ್ಯಕ್ಷ ಜೈ ಪ್ರಕಾಶ್ ಅಧ್ಯಕ್ಷ ಹುದ್ದೆಯ ಜತೆಗೆ ಉಪಾಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಹುದ್ದೆಗೂ ಅರ್ಜಿ ಸಲ್ಲಿಸಿದ್ದಾರೆ. ಆಗಸ್ಟ್ 12ರಂದು ಚುನಾವಣೆ ನಡೆಯಲಿದೆ.
ಮಹಿಳಾ ಕುಸ್ತಿಪಟುಗಳಿಗೆ ಬ್ರಿಜ್ಭೂಷಣ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿರುವ ಪ್ರಕರಣದಲ್ಲಿ ಅನಿತಾ ಶೆರಾನ್ ಪ್ರಮುಖ ಸಾಕ್ಷಿ ಆಗಿದ್ದಾರೆ. 38 ವರ್ಷದ ಅನಿತಾ ಹರಿಯಾಣ ಮೂಲದವರಾಗಿದ್ದರೂ, ಡಬ್ಲ್ಯುಎಫ್ಐ ಚುನಾವಣೆಯಲ್ಲಿ ಒಡಿಶಾ ಪ್ರತಿನಿಧಿಯಾಗಿ ಕಣಕ್ಕಿಳಿದಿದ್ದಾರೆ.