ಚೆಸ್​ ಸಾಧಕ ಪ್ರಜ್ಞಾನಂದಗೆ ಅಲ್ಲ, ಅವರ ತಂದೆ-ತಾಯಿಗೆ ಎಲೆಕ್ಟ್ರಿಕ್​ ಕಾರು ಗಿಫ್ಟ್​! ಕಾರಣ ಹೀಗಿದೆ…

praggnandha web
Published on

ಬೆಂಗಳೂರು: ಕ್ರೀಡಾಪಟುಗಳು ಪದಕ ಗೆದ್ದಾಗ, ದೇಶಕ್ಕೆ ಹೆಮ್ಮೆ ತಂದಾಗ ಅವರಿಗೆ ವಿಶೇಷ ಉಡುಗೊರೆಗಳನ್ನು ನೀಡುವುದು ಸಾಮಾನ್ಯ. ಆದರೆ, ಮಹೀಂದ್ರ ಗ್ರೂಪ್​ ಮಾಲೀಕ ಹಾಗೂ ಉದ್ಯಮಿ ಆನಂದ್​ ಮಹೀಂದ್ರ ಅವರು, ಕಳೆದ ಚೆಸ್​ ವಿಶ್ವಕಪ್​ನಲ್ಲಿ ರಜತ ಪದಕ ಗೆದ್ದು ಬೀಗಿದ ಚೆನ್ನೈನ 18 ವರ್ಷದ ಆಟಗಾರ ಆರ್​. ಪ್ರಜ್ಞಾನಂದ ವಿಶೇಷ ಸಾಧನೆಗಾಗಿ ಅವರ ತಾಯಿ ನಾಗಲಕ್ಷ್ಮೀ ಮತ್ತು ತಂದೆ ರಮೇಶ್​ಬಾಬುಗೆ ಎಲೆಕ್ಟ್ರಿಕ್​ ಕಾರು ಎಸ್​ಯುವಿ400 ಇವಿಯನ್ನು ಉಡುಗೊರೆ ನೀಡಲು ನಿರ್ಧರಿಸಿದ್ದಾರೆ. ಇದಕ್ಕೆ ಅವರು ನೀಡಿರುವ ಕಾರಣವೂ ವಿಶೇಷವಾಗಿದೆ.

'ಪ್ರಜ್ಞಾನಂದಗೆ ಥಾರ್​ ಜೀಪು ಗಿಫ್ಟ್​ ನೀಡುವಂತೆ ಹಲವರು ನನಗೆ ಸಲಹೆ ನೀಡಿದರು. ಆದರೆ, ನನ್ನ ಯೋಚನೆ ಭಿನ್ನವಾಗಿದೆ. ಹೆತ್ತವರು ತಮ್ಮ ಮಕ್ಕಳಿಗೆ ಚೆಸ್​ ಆಟವನ್ನು ಪರಿಚಯಿಸಬೇಕು ಮತ್ತು ಅದರಲ್ಲಿ ಮುಂದುವರಿಯಲು ಪ್ರೋತ್ಸಾಹಿಸಬೇಕೆಂದು ಬಯಸಿದ್ದೇನೆ. ಎಲೆಕ್ಟ್ರಿಕ್​ ವಾಹನದಂತೆ ಇದು ಉತ್ತಮ ಭವಿಷ್ಯದ ಮೇಲಿನ ಹೂಡಿಕೆ. ಹೀಗಾಗಿ ಪ್ರಜ್ಞಾನಂದ ತಂದೆ-ತಾಯಿಗೆ ಎಲೆಕ್ಟ್ರಿಕ್​ ಕಾರು ನೀಡುವೆ. ಮಗನ ಪ್ಯಾಷನ್​ಅನ್ನು ಪೋಷಿಸಿದ್ದಕ್ಕಾಗಿ ಮತ್ತು ಅವಿರತ ಬೆಂಬಲ ನೀಡಿದ್ದಕ್ಕಾಗಿ ಅವರು ನಮ್ಮ ಈ ಕೃತಜ್ಞತೆಗೆ ಅರ್ಹರು' ಎಂದು ಆನಂದ್​ ಮಹೀಂದ್ರ ವಿವರಿಸಿದ್ದಾರೆ. ಎಸ್​ಯುವಿ400 ಇವಿ ಕಾರು 16.85 ಲಕ್ಷ ರೂ. ಆನ್​-ರೋಡ್​ ಬೆಲೆ ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net