

ನವದೆಹಲಿ: ತಮ್ಮ ಸಿಡುಕು ಮನೋಭಾವದಿಂದಲೇ ಕ್ರೀಡಾ ವಲಯದಲ್ಲಿ ಹೆಚ್ಚು ಖ್ಯಾತಿ ಪಡೆದಿರುವ ಗೌತಮ್ ಗಂಭೀರ್ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಐಪಿಎಲ್ ಶುರುವಾಗುವುದಕ್ಕೂ ಮುನ್ನ ಸಂಸದರ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣಾ ರಾಜಕೀಯಕ್ಕೆ ನಿವೃತ್ತಯಿ ಘೋಷಿಸಿದ ಗೌತಮ್ ಬಳಿಕ ಕೆಕೆಆರ್ ಮೆಂಟರ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಇದಾದ ಬಳಿಕ ಅವರು ಕೆಕೆಆರ್ ತಂಡಕ್ಕೆ ಕಪ್ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇತ್ತ ಟೀಮ್ ಇಂಡಿಯಾ ಲೆಜೆಂಡರಿ ಆಟಗಾರ ಗೌತಮ್ ಗಂಭೀರ್ ತಮ್ಮ ಕ್ರೇಜ್ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಆಟಗಾರರಲ್ಲಿರುವ ಪ್ರತಿಭೆಯನ್ನು ಹೊರತಂದು ಅವರಿಗೆ ಬೇಕಾದ ಬೆಂಬಲ ನೀಡುವ ಮೂಲಕ ಗಂಭೀರ್ ಕೆಕೆಆರ್ಗೆ ಹೊಸ ಹೀರೋ ಎನಿಸಿಕೊಂಡಿದ್ದಾರೆ. 17 ನೇ ಆವೃತ್ತಿಯಲ್ಲಿ ಕೆಕೆಆರ್ ಕಪ್ ಗೆದ್ದ ಬೆನ್ನಲ್ಲೇ ಅವರು ಟೀಮ್ ಇಂಡಿಯಾ ಕೋಚ್ ಆಗುತ್ತಾರೆ ಎಂಬ ವಿಚಾರ ಕ್ರೀಡಾ ವಲಯದಲ್ಲಿ ವ್ಯಾಪಕವಾಗಿ ಹರಿದಾಡಲು ಶುರು ಮಾಡಿದ್ದು, ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗೌತಮ್ ಗಂಭೀರ್ ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ.
ಈ ಕುರಿತು ಮಾತನಾಡಿರುವ ಗೌತಮ್, ನಾವು ಮೂರನೇ ಬಾರಿಗೆ ಐಪಿಎಲ್ ಟ್ರೋಫಿ ಗೆಲ್ಲಿಸಿಕೊಟ್ಟೆ ಎಂಬ ಕಾರಣಕ್ಕೆ ಎಲ್ಲರೂ ಈ ಮಾತನ್ನು ಹೇಳುತ್ತಿದ್ದಾರೆ. ಆದರೆ, ನನ್ನ ಪ್ರಕಾರ ನಾವು ಸಿಎಸ್ಕೆ ಹಾಗೂ ಮುಂಬೈಗಿಂತ ಟ್ರೋಫಿಗಳ ಸಂಖ್ಯೆಯಲ್ಲಿ ಹಿಂದೆ ಇದ್ದು, ಆ ಹಸಿವು ನನ್ನನ್ನು ಹೆಚ್ಚಾಗಿ ಕಾಡುತ್ತಿದೆ. ನಾವು ಇನ್ನಷ್ಟು ಐಪಿಎಲ್ ಟ್ರೋಫಿಗಳನ್ನು ಗೆಲ್ಲಬೇಕಿದ್ದು, ಇನ್ನಷ್ಟು ಪರಿಶ್ರಮ ಹಾಕಬೇಕಿದೆ. ನನ್ನ ಮುಂದಿನ ಗುರಿ ಎಂದರೆ ಕೆಕೆಆರ್ ತಂಡವನ್ನು ಐಪಿಎಲ್ನಲ್ಲಿ ಅತ್ಯಂತ ಯಶಸ್ವಿ ತಂಡವನ್ನಾಗಿ ಮಾಡುವುದು. ಅದರ ಪ್ರಯಾಣ ಈಗಷ್ಟೇ ಆರಂಭವಾಗಿದೆ. ಮಾಡುವುದು ಸಾಕಷ್ಟಿದೆ ಎಂದು ಗೌತಮ್ ಗಂಭೀರ್ ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.