

ನಾರ್ತ್ ಸೌಂಡ್: ಇಂದು (ಜೂ.24) ಇಲ್ಲಿನ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ 3 ವಿಕೆಟ್ಗಳ ಅಂತರದಿಂದ ಸೌತ್ ಆಫ್ರಿಕಾ ತಂಡ ಜಯ ಸಾಧಿಸಿತು. ಪಂದ್ಯಕ್ಕೆ ಮಳೆ ಅಡ್ಡಿ ಉಂಟುಮಾಡಿದ ಕಾರಣ ಡಿಎಲ್‌ಎಸ್ ವಿಧಾನವನ್ನು ಅನುಸರಿಸಲಾಯಿತು. ಐಸಿಸಿ ಟಿ20 ವಿಶ್ವಕಪ್ 2024ರ ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ಸಹ-ಆತಿಥ್ಯ ತಂಡವಾದ ವಿಂಡೀಸ್ ಅನ್ನು ಹೊರಗಟ್ಟಿದ ದಕ್ಷಿಣ ಆಫ್ರಿಕಾಗೆ ಇದೀಗ ಮಾಜಿ ಕ್ರಿಕೆಟಿಗರು ಅಭಿನಂದನೆ ತಿಳಿಸಿದ್ದಾರೆ.
ಟಾಸ್ ಸೋತ ರೋವ್‌ಮನ್ ಪೊವೆಲ್ ನೇತೃತ್ವದ ವೆಸ್ಟ್ ಇಂಡೀಸ್ ಮೊದಲು ಬ್ಯಾಟಿಂಗ್ ಮಾಡಿತು. 20 ಓವರ್ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡ ವಿಂಡೀಸ್ 135 ರನ್ ಕಲೆಹಾಕುವಲ್ಲಿ ಶಕ್ತವಾಯಿತು. ಈ ಗುರಿ ದಕ್ಷಿಣ ಆಫ್ರಿಕಾಗೆ ಬಹಳ ಸಾಧಾರಣ ಮೊತ್ತ ಎಂಬಂತೆ ತೋರಿದ್ದು ಸತ್ಯ. ಅಂತಿಮವಾಗಿ ಡಿಎಲ್‌ಎಸ್ ನಿಯಮದ ಅನುಸಾರ ಚೇಸಿಂಗ್ ಮಾಡಿದ ಆಫ್ರಿಕಾ 16.1 ಓವರ್‌ಗಳಲ್ಲಿ ಗುರಿ ತಲುಪಿ, ತಮ್ಮ ಸೆಮಿಫೈನಲ್ ಕನಸನ್ನು ಈಡೇರಿಸಿಕೊಂಡಿತು.
ಎಂದಿನಂತೆ ಪಂದ್ಯಾವಳಿಗಳಲ್ಲಿ ಸೋಲು ಅನುಭವಿಸುವ ಆಯಾ ತಂಡಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುವ, ಟೀಕಿಸುವ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು, ಈ ಬಾರಿ ಗೆಲುವನ್ನು ಕೈಚೆಲ್ಲಿದ ವೆಸ್ಟ್ ಇಂಡೀಸ್ ತಂಡದ ವಿರುದ್ಧ ವ್ಯಂಗ್ಯವಾಡಿದ್ದಾರೆ. "ಇವರು ಮೆದುಳಿಲ್ಲದೆ ಬ್ಯಾಟಿಂಗ್ ಮಾಡಿದ್ದಾರೆ. ಪಿಚ್ ನಿಧಾನವಾಗಿತ್ತು. ಬೇಕಿದ್ದ ತಾಳ್ಮೆಯ ಆಟವನ್ನು ವೆಸ್ಟ್ ಇಂಡೀಸ್ ಬ್ಯಾಟರ್‌ಗಳು ತೋರಲಿಲ್ಲ. ತಂಡದ ಸೋಲಿಗೆ ಅವರ ಕಳಪೆ ಬ್ಯಾಟಿಂಗ್ ಪ್ರದರ್ಶನವೇ ಕಾರಣ" ಎಂದು ದೂರಿದರು.
"ಕ್ರಿಕೆಟ್ ಲೋಕದಲ್ಲಿ ಶೈ ಹೋಪ್ ಉತ್ತಮ ಅನುಭವವನ್ನು ಹೊಂದಿದ್ದಾರೆ. ಆದರೆ ಅವರು ಎದುರಿಸಿದ ಮೊದಲ ಎಸೆತದಲ್ಲಿಯೇ ಔಟ್ ಆಗಿ ಪೆವಿಲಿಯನ್ ಸೇರಿದರು. ನಿಕೋಲಸ್ ಪೂರನ್ ಮೂರು ಎಸೆತಗಳಿಗೆ ವಿಕೆಟ್ ಕಳೆದುಕೊಂಡರು. ಪಿಚ್‌ನ ಸ್ವರೂಪವನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಹೇಗೆ ಬೇಕೋ ಹಾಗೆ ಬ್ಯಾಟ್ ಮಾಡಲು ಸಾಧ್ಯವಿಲ್ಲ" ಎಂದು ಅಂಬಟಿ ರಾಯುಡು ಹೇಳಿದ್ದಾರೆ,(ಏಜೆನ್ಸೀಸ್).