

ನವದೆಹಲಿ: ವೆಸ್ಟ್ಇಂಡೀಸ್ ಮತ್ತು ಅಮೆರಿಕ ಜಂಟಿಯಾಗಿ ಆಯೋಜನೆ ಮಾಡಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗೆದ್ದು, ಟೀಮ್ ಇಂಡಿಯಾ ಟ್ರೋಫಿ ಎತ್ತಿಹಿಡಿದು ನೂರಕ್ಕೂ ಹೆಚ್ಚು ದಿನಗಳೇ ಕಳೆದಿವೆ. ಕಿರು ವಿಶ್ವಕಪ್ ಮುಗಿದು ಜಿಂಬಾಬ್ವೆ ಹಾಗೂ ಶ್ರೀಲಂಕಾ ವಿರುದ್ಧ ಸರಣಿಯನ್ನು ಮುಗಿಸಿ, ಇದೀಗ ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ಅಣಿಯಾಗುತ್ತಿದೆ. ಈ ಹೊತ್ತಿನಲ್ಲಿ ಪಾಕಿಸ್ತಾನದ ಮಾಜಿ ನಾಯಕಿ ನಿದಾ ದಾರ್, ವಿಶ್ವಕಪ್ ಗೆದ್ದಿದ್ದಕ್ಕೆ ಭಾರತ ತಂಡಕ್ಕೆ ಅಭಿನಂದನೆಗಳನ್ನು ಎನ್ನುವ ಮೂಲಕ ಟ್ರೋಲ್ಗೆ ಗುರಿಯಾಗಿದ್ದಾರೆ. ಇದರ ಬೆನ್ನಲ್ಲೇ ನಿದಾ ಅವರ ಸ್ಪಷ್ಟನೆ ಸಹ ನೀಡಿದ್ದಾರೆ.
ಸೆ.5ರಂದು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ನಿದಾ, ಟಿ20 ವಿಶ್ವಕಪ್ ಗೆದ್ದಿದ್ದಕ್ಕೆ ಟೀಮ್ ಇಂಡಿಯಾಗೆ ಧನ್ಯವಾದಗಳು. ವಿಶ್ವ ಕ್ರಿಕೆಟ್ಗೆ ತಮ್ಮದೇ ಕೊಡುಗೆ ನೀಡಿದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿಗೆ ವಿಶೇಷ ಅಭಿನಂದನೆಗಳು. ನಿಮ್ಮ ನಾಯಕತ್ವ, ಕೌಶಲ ಹಾಗೂ ಸಮರ್ಪಣಾ ಮನೋಭಾಗ ಜಗತ್ತಿನ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುತ್ತದೆ. ನಿವೃತ್ತಿಯ ಶುಭಾಶಯಗಳು ಲೆಂಜೆಂಡ್ಸ್ ಎಂದು ಬರೆದು ಪೋಸ್ಟ್ ಮಾಡಿದ್ದರು.
ವಿಶ್ವಕಪ್ ಗೆದ್ದು 100ಕ್ಕೂ ಅಧಿಕ ದಿನಗಳು ಕಳೆದುಹೋಗಿವೆ. ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದ್ದಕ್ಕೆ ನಿದಾ ಅವರು ಸಿಕ್ಕಾಪಟ್ಟೆ ಟ್ರೋಲ್ಗೆ ಗುರಿಯಾದರು. ಪಾಕಿಸ್ತಾನದಲ್ಲಿ ಇಂಟರ್ನೆಟ್ ನಿಧಾನ ಇರಬೇಕು ಅದಕ್ಕಾಗಿ, ಇಷ್ಟು ದಿನ ತೆಗೆದುಕೊಂಡಿದೆ. ನಿದಾ ಅವರು ಮಂಗಳ ಗ್ರಹಕ್ಕೆ ಹೋಗಿದ್ದರು ಅನಿಸುತ್ತದೆ. ಭೂಮಿಗೆ ಬಂದ ಬಳಿಕ ವಿಚಾರ ತಿಳಿದು ಪೋಸ್ಟ್ ಮಾಡಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡಿ ಟೀಕಿಸಿದ್ದಾರೆ.
ಸ್ಪಷ್ಟನೆ ನೀಡಿದ ನಿದಾ ತೀವ್ರ ಟ್ರೋಲ್ ಆಗುತ್ತಿದ್ದಂತೆ ಪೋಸ್ಟ್ ಡಿಲೀಟ್ ಮಾಡಿರುವ ನಿದಾ, ಸ್ಪಷ್ಟನೆ ನೀಡಿದ್ದಾರೆ. ನಾನು ಈ ಪೋಸ್ಟ್ ಅನ್ನು 2024ರ ಜೂನ್ 30ರಂದೇ ಮಾಡಿದ್ದೇನೆ ಆದರೆ, ಪಾಕಿಸ್ತಾನದಲ್ಲಿ ಎಕ್ಸ್ಗೆ ಹೇರಿದ ನಿರ್ಬಂಧಗಳಿಂದಾಗಿ ಅದು ಕಳೆದ ರಾತ್ರಿ ಪೋಸ್ಟ್ ಆಗಿದೆ. ಈ ಬಗ್ಗೆ ಮಾಧ್ಯಮಗಳಿಂದ ತಿಳಿದ ಕೂಡಲೇ ಪೋಸ್ಟ್ ಡಿಲೀಟ್ ಮಾಡಿ, ನನ್ನ ಹಳೆಯ ಮತ್ತು ಈಗಿನ ಎರಡೂ ಪೋಸ್ಟ್ಗಳ ಚಿತ್ರವನ್ನು ಲಗತ್ತಿಸಿದ್ದೇನೆ ಎಂದು ನಿದಾ ತಿಳಿಸಿದ್ದಾರೆ.
ಅಂದಹಾಗೆ ಸುಮಾರು 17 ವರ್ಷಗಳ ನಂತರ ಟೀಮ್ ಇಂಡಿಯಾ ಎರಡನೇ ಬಾರಿಗೆ ಟಿ20 ವಿಶ್ವ ಚಾಂಪಿಯನ್ ಆಗಿದ್ದು ಎಲ್ಲರಿಗೂ ಗೊತ್ತೇ ಇದೆ. ಅಮೆರಿಕ-ವೆಸ್ಟ್ ಇಂಡೀಸ್ ಜಂಟಿಯಾಗಿ ಆಯೋಜಿಸಿದ್ದ ಟಿ20 ವಿಶ್ವಕಪ್ನಲ್ಲಿ ರೋಹಿತ್ ಶರ್ಮ ನಾಯಕತ್ವದ ಭಾರತ ತಂಡ ಅದ್ಭುತ ಪ್ರದರ್ಶನ ನೀಡಿ ಅಜೇಯ ತಂಡವಾಗಿ ಕಪ್ ಗೆದ್ದುಕೊಂಡಿತು. ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಅಮೋಘ ಹೋರಾಟ ನಡೆಸಿ, ಸೋಲಿನ ದವಡೆಯಲ್ಲಿದ್ದ ಪಂದ್ಯವನ್ನು ಗೆದ್ದು ಟೀಮ್ ಇಂಡಿಯಾ ಎರಡನೇ ಬಾರಿ ಚಾಂಪಿಯನ್ ಆಯಿತು. (ಏಜೆನ್ಸೀಸ್)