ರೋಹಿತ್​ ಹೇಳಿದ ಆ ಒಂದು ಮಾತಿನಿಂದ ನನ್ನ ನೋವೆಲ್ಲ ಮಾಯವಾಯ್ತು ಅಂದ್ರು ರಿಂಕು ಸಿಂಗ್​!

Rinku Singh
Published on

ನವದೆಹಲಿ: ರಿಂಕು ಸಿಂಗ್ ಟೀಮ್ ಇಂಡಿಯಾದ ಯುವ ಕ್ರಿಕೆಟಿಗರಲ್ಲಿ ಭರವಸೆಯ ಆಟಗಾರ ಎಂಬುದು ಕ್ರೀಡಾಭಿಮಾನಿಗಳಿಗೆ ತಿಳಿದಿದೆ. ಐಪಿಎಲ್ ಮೂಲಕ ಬೆಳಕಿಗೆ ಬಂದ ಈ ಅದ್ಭುತ ಪ್ರತಿಭೆ, ಟೀಮ್​ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದು, ತನ್ನನ್ನು ಅರಸಿ ಬಂದ ಪ್ರತಿಯೊಂದು ಅವಕಾಶವನ್ನೂ ಸದುಪಯೋಗಪಡಿಸಿಕೊಂಡು ತಂಡದಲ್ಲಿ ಪ್ರಮುಖ ಆಟಗಾರ ಎನಿಸಿಕೊಂಡಿದ್ದಾರೆ.

ರಿಂಕು ಸಿಂಗ್​, ಟಿ20 ಪಂದ್ಯಗಳಲ್ಲಿ ಉತ್ತಮ ಫಿನಿಶರ್ ಆಗಿ ಆಡಿದ ರೀತಿ ಹಾಗೂ ಏಕಾಂಗಿಯಾಗಿ ತಂಡವನ್ನು ಗೆಲ್ಲಿಸಿದ ರೀತಿಯನ್ನು ನೋಡಿದ ಕ್ರೀಡಾಭಿಮಾನಿಗಳು ರಿಂಕುಗೆ ಟಿ20 ವಿಶ್ವಕಪ್​ಗೆ ತಂಡದಲ್ಲಿ ಸ್ಥಾನ ಸಿಗುವುದು ಗ್ಯಾರಂಟಿ ಎಂದೇ ಭಾವಿಸಿದ್ದರು. ಆದರೆ, ಸ್ಥಾನ ನೀಡದೆ, ಕಾಯ್ದಿರಿಸಿದ ಆಟಗಾರನಾಗಿ ತಂಡಕ್ಕೆ ತೆಗೆದುಕೊಳ್ಳಲಾಯಿತು. ಇದರಿಂದ ಬೇಸರಗೊಂಡು ರಿಂಕು ಕಣ್ಣೀರು ಸಹ ಹಾಕಿದರು. ಆದರೆ, ನಾಯಕ ರೋಹಿತ್ ಶರ್ಮ ಹೇಳಿದ ಒಂದೇ ಒಂದು ಮಾತಿನಿಂದ ತನ್ನೆಲ್ಲ ನೋವು ದೂರವಾಯಿತು ಎಂದು ರಿಂಕು ಸಿಂಗ್​ ಹೇಳಿದ್ದಾರೆ.

ಬೇಸರಗೊಂಡಿದ್ದ ನನಗೆ ರೋಹಿತ್ ಭಯ್ಯಾ ಸಾಂತ್ವನ ಹೇಳಿದರು. ನಿಮಗೆ ಉತ್ತಮ ಭವಿಷ್ಯವಿದೆ. ಮುಂದೆ ಹಲವು ವಿಶ್ವಕಪ್‌ಗಳು ಬರಲಿವೆ. ಹಾಗಾಗಿ ಹತಾಶರಾಗಬೇಡಿ. ನಿಮ್ಮ ಆಟದ ಮೇಲೆ ಹೆಚ್ಚಿನ ಗಮನವಹಿಸಿ, ಕಾಲಕಾಲಕ್ಕೆ ನಿಮ್ಮನ್ನು ಸುಧಾರಿಸಿಕೊಳ್ಳಿ. ಹೆಚ್ಚೆಚ್ಚು ಶ್ರಮವಹಿಸಿ ಎಂದು ಸಲಹೆ ನೀಡಿದರು. ಅವರ ಮಾತಿನಿಂದಲೇ ನನ್ನ ನೋವುಗಳೆಲ್ಲ ಮಾಯವಾಗಿ ಭವಿಷ್ಯದತ್ತ ಗಮನ ಹರಿಸುತ್ತಿದ್ದೇನೆ. ರೋಹಿತ್ ಭಯ್ಯಾ ಮಾತುಗಳು ಮಂತ್ರದಂತೆ ಕೆಲಸ ಮಾಡಿದೆ. ಅವರ ನಾಯಕತ್ವ ಅಂದರೆ ನನಗೆ ತುಂಬಾ ಇಷ್ಟ ಎಂದು ನ್ಯೂಸ್​ 24 ಸ್ಫೋರ್ಟ್ಸ್​ ಮಾಧ್ಯಮಕ್ಕೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ರಿಂಕು ಸಿಂಗ್​ ಹೇಳಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವವೂ ನನಗೆ ಇಷ್ಟ. ಅದರಲ್ಲೂ ಅವರ ಆಕ್ರಮಣಶೀಲತೆ ಬಹಳ ಇಷ್ಟ. ಕೊಹ್ಲಿ ಭಯ್ಯಾ ತಂಡವನ್ನು ಮುನ್ನಡೆಸುವಾಗ ತುಂಬಾ ಆಕ್ರಮಣಕಾರಿ ಮತ್ತು ಅವರ ನಾಯಕತ್ವ ತುಂಬಾ ವಿಶೇಷವಾಗಿರುತ್ತದೆ. ಭಾರತ ತಂಡದಲ್ಲಿ ವಿರಾಟ್, ಅತ್ಯಂತ ಫಿಟ್ ಆಟಗಾರ. ಪ್ರತಿಯೊಬ್ಬರೂ ಅವರಿಂದ ಬಹಳಷ್ಟು ಕಲಿಯುತ್ತಾರೆ. ಫಿಟ್‌ನೆಸ್‌ನಲ್ಲಿ ಕೊಹ್ಲಿಯ ಮಟ್ಟವನ್ನು ತಲುಪಲು ಎಲ್ಲರೂ ಪ್ರಯತ್ನಿಸುತ್ತಾರೆ ಎಂದು ರಿಂಕು ಹೇಳಿದರು.

ಟೀಮ್​ ಇಂಡಿಯಾ ಪರ ಹಲವು ಪಂದ್ಯಗಳಲ್ಲಿ ಆಡಿದ್ದರೂ ಕೊಹ್ಲಿ ಜತೆ ಬ್ಯಾಟಿಂಗ್ ಮಾಡುವ ಅವಕಾಶ ನನಗೆ ಸಿಗಲಿಲ್ಲ. ಅದೇ ನನ್ನ ಕನಸು. ಅದು ಈಡೇರುವ ದಿನಕ್ಕಾಗಿ ನಾನು ಕಾಯುತ್ತಿದ್ದೇನೆ. ಶೀಘ್ರದಲ್ಲಿ ಅದು ಸಾಧ್ಯವಾಗಲಿದೆ ಎಂದು ರಿಂಕು ಸಿಂಗ್​ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net