

ನವದೆಹಲಿ: ಯುಎಇಯಲ್ಲಿ ಐಪಿಎಲ್ ಟೂರ್ನಿಗೆ ಪೂರ್ವಭಾವಿಯಾಗಿ ಕರೊನಾ ಪ್ರಕರಣ ದಾಖಲಾದ ಕಾರಣ ದೊಡ್ಡ ಆಘಾತ ಎದುರಿಸಿದ್ದ ಚೆನ್ನೈ ಸೂಪರ್‌ಕಿಂಗ್ಸ್ ತಂಡ ಈಗ ಅಭ್ಯಾಸ ಆರಂಭಿಸಲು ಸಜ್ಜಾಗಿದೆ. ಪಾಸಿಟಿವ್ ಆಗಿದ್ದ ತಂಡದ ಇಬ್ಬರು ಆಟಗಾರರು ಮತ್ತು ಇತರ ಸಿಬ್ಬಂದಿಯ ಸಹಿತ 13 ಸದಸ್ಯರ ಹೊರತಾಗಿ ತಂಡದ ಇತರರ ವರದಿ ನೆಗೆಟಿವ್ ಬಂದಿದೆ. 2ನೇ ಬಾರಿ ಮತ್ತೊಮ್ಮೆ ನೆಗೆಟಿವ್ ವರದಿ ಬಂದರೆ ತಂಡಕ್ಕೆ ದುಬೈನಲ್ಲಿ ಅಭ್ಯಾಸ ಆರಂಭಿಸಲು ಅವಕಾಶ ದೊರೆಯಲಿದೆ. ಸಿಎಸ್‌ಕೆ ಹೊರತಾಗಿ ಟೂರ್ನಿಯಲ್ಲಿ ಆಡಲಿರುವ ಇತರ 7 ತಂಡಗಳು ಈಗಾಗಲೆ ಅಭ್ಯಾಸ ಆರಂಭಿಸಿವೆ.
ಸಿಎಸ್‌ಕೆ ತಂಡದ ಸಿಇಒ ಕೆಎಸ್ ವಿಶ್ವನಾಥನ್ ಮಂಗಳವಾರ ಪಾಸಿಟಿವ್ ಆಗಿರುವ 13 ಮಂದಿಯ ವರದಿ ಕೂಡ ನೆಗೆಟಿವ್ ಬಂದಿದೆ ಎಂದು ಮೊದಲಿಗೆ ಹೇಳಿದರೂ, ಬಳಿಕ ತಂಡದ ಅಧಿಕೃತ ಪ್ರಕಟಣೆಯಲ್ಲಿ 13 ಸದಸ್ಯರ ಹೊರತಾಗಿ ಇತರರ ವರದಿಯಷ್ಟೇ ನೆಗೆಟಿವ್ ಬಂದಿದೆ ಎಂದಿದ್ದಾರೆ. ಅಲ್ಲದೆ, ಗುರುವಾರ ನಡೆಯಲಿರುವ ಮತ್ತೊಂದು ಕೋವಿಡ್-19 ಪರೀಕ್ಷೆಯಲ್ಲೂ ನೆಗೆಟಿವ್ ಬಂದರೆ, ಶುಕ್ರವಾರದಿಂದ (ಸೆ.4) ತಂಡದ ಅಭ್ಯಾಸ ಆರಂಭವಾಗಲಿದೆ ಎಂದಿದ್ದಾರೆ.
ವೇಗಿ ದೀಪಕ್ ಚಹರ್ ಮತ್ತು ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್ ವರದಿ ಕಳೆದ ವಾರ ಪಾಸಿಟಿವ್ ಬಂದಿತ್ತು. ಹೀಗಾಗಿ ಅವರನ್ನು 14 ದಿನಗಳ ಕ್ವಾರಂಟೈನ್‌ನಲ್ಲಿಡಲಾಗಿದೆ. ಇವರಿಬ್ಬರ ಸಹಿತ ಪಾಸಿಟಿವ್ ಆಗಿರುವ 13 ಸದಸ್ಯರನ್ನು ಕ್ವಾರಂಟೈನ್ ಅವಧಿಯ ಕೊನೆಯಲ್ಲಿ ಕರೊನಾ ಪರೀಕ್ಷೆಗೆ ಒಳಪಡಿಸಲಾಗುವುದು.
ದೀಪಕ್ ಚಹರ್ ಮತ್ತು ಋತುರಾಜ್ ಗಾಯಕ್ವಾಡ್ ಸೆಪ್ಟೆಂಬರ್ 12ರ ನಂತರವೇ ಅಭ್ಯಾಸ ಆರಂಭಿಸಲಿದ್ದಾರೆ ಎನ್ನಲಾಗಿದೆ. ಇನ್ನು ಸೋಮವಾರವಷ್ಟೇ ತಂಡವನ್ನು ಕೂಡಿಕೊಂಡಿರುವ ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್ ಮತ್ತು ಲುಂಜಿ ಎನ್‌ಗಿಡಿ 6 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರಲಿದ್ದಾರೆ.
ಬುಧವಾರ ತಂಡವನ್ನು ಕೂಡಿಕೊಳ್ಳಬೇಕಾಗಿದ್ದ ಸ್ಪಿನ್ನರ್ ಹರ್ಭಜನ್ ಸಿಂಗ್ ಯುಎಇಗೆ ಪ್ರಯಾಣವನ್ನು ಇನ್ನಷ್ಟು ದಿನ ಮುಂದೂಡಿದ್ದಾರೆ. ತಾಯಿಯ ಅನಾರೋಗ್ಯದಿಂದಾಗಿ ಅವರು ತಂಡದ ಜತೆಗೆ ಪ್ರಯಾಣಿಸಿರಲಿಲ್ಲ. ಇದೀಗ ಕರೊನಾ ಭೀತಿಯಿಂದಾಗಿ ಟೂರ್ನಿಯಿಂದ ಹಿಂದೆ ಸರಿಯುವ ಸಾಧ್ಯತೆಯೂ ಇದೆ.
ಐಪಿಎಲ್‌ಗೆ ವಿನಾಯಿತಿ ನೀಡಿದ ಅಬುಧಾಬಿ
ಅಬುಧಾಬಿ ಪ್ರವೇಶಕ್ಕೆ ಮುನ್ನ ಕರೊನಾ ಪರೀಕ್ಷೆ ಮತ್ತು 14 ದಿನಗಳ ಕ್ವಾರಂಟೈನ್ ಕಡ್ಡಾಯ ಎಂಬ ನಿಯಮದಿಂದ ಐಪಿಎಲ್‌ಗೆ ಸ್ಥಳೀಯ ಸರ್ಕಾರ ವಿನಾಯಿತಿ ನೀಡಿದೆ. ಇದರಿಂದ ಐಪಿಎಲ್ ಟೂರ್ನಿಗೆ ಇದ್ದ ದೊಡ್ಡ ತಡೆಯೊಂದು ನಿವಾರಣೆಯಾಗಿದ್ದು, ಶೀಘ್ರದಲ್ಲೇ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಳ್ಳುವ ನಿರೀಕ್ಷೆ ಇದೆ.
ಅಬುಧಾಬಿಯಲ್ಲಿ ಕರೊನಾ ಪ್ರಕರಣಗಳ ಏರಿಕೆಯಾದ ಕಾರಣದಿಂದಾಗಿ ನಗರವನ್ನು ಪ್ರವೇಶಿಸುವ ಮುನ್ನ ಎಲ್ಲರಿಗೂ ಕರೊನಾ ಪರೀಕ್ಷೆ ಕಡ್ಡಾಯ ಮಾಡಲಾಗಿತ್ತು. ಇದರಿಂದ ತಂಡಗಳು ದುಬೈ ಅಥವಾ ಶಾರ್ಜಾದಿಂದ ಅಬುಧಾಬಿ ಪ್ರವೇಶಿಸುವ ವೇಳೆಯೂ ಪರೀಕ್ಷೆಗೆ ಒಳಗಾದ ಕಾರಣದಿಂದಾಗಿ ಬಿಸಿಸಿಐಗೆ ದೊಡ್ಡ ತಲೆನೋವು ಎದುರಾಗಿತ್ತು. ಆದರೆ ಈಗ ಯುಎಇ ಕ್ರಿಕೆಟ್ ಮಂಡಳಿ ಸ್ಥಳೀಯ ಸರ್ಕಾರದೊಂದಿಗೆ ಮಾತನಾಡಿ ಐಪಿಎಲ್‌ಗೆ ವಿನಾಯಿತಿ ಕೊಡಿಸಿದೆ. ಇದರಿಂದಾಗಿ ಯೋಜನೆಯಂತೆಯೇ ಟೂರ್ನಿಯನ್ನು ಯುಎಇಯ ಮೂರೂ ತಾಣಗಳಲ್ಲಿ ಆಯೋಜಿಸಲು ಸಾಧ್ಯವಾಗಲಿದೆ.
ತಂಡಗಳು ಟೂರ್ನಿಯ ವೇಳೆ ಬಯೋ-ಬಬಲ್ ವಾತಾವರಣದಲ್ಲೇ ಇದ್ದು ಪ್ರಯಾಣ ಮಾಡುವುದರಿಂದಾಗಿ ಐಪಿಎಲ್‌ಗೆ ವಿನಾಯಿತಿ ನೀಡಲು ಅಬುಧಾಬಿ ಸರ್ಕಾರ ಸಮ್ಮಿತಿಸಿದೆ ಎಂದು ಯುಎಇ ಕ್ರಿಕೆಟ್ ಮಂಡಳಿ ಅಧಿಕಾರಿ ತಿಳಿಸಿದ್ದಾರೆ.