ಅಕ್ಷರ್ ಪಟೇಲ್‌ಗೆ ಕೋವಿಡ್-19, ಐಪಿಎಲ್ ಆರಂಭಿಕ ಪಂದ್ಯಗಳಿಗೆ ಅನುಮಾನ..!

AKSHARA PATEL FOR WEB
Published on

ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಲ್ರೌಂಡರ್ ಅಕ್ಷರ್ ಪಟೇಲ್‌ಗೆ ಕೋವಿಡ್-19 ದೃಢಪಟ್ಟಿದೆ. ಏಪ್ರಿಲ್ 10 ರಂದು ಸಿಎಸ್ ಕೆ ವಿರುದ್ಧ ನಡೆಯಲಿರುವ ತಂಡದ ಮೊದಲ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಬಿಸಿಸಿಐ ಮಾರ್ಗಸೂಚಿಯಂತೆ ಕೋವಿಡ್-19 ಕಾಣಿಸಿಕೊಂಡ ಆಟಗಾರ ಕಡ್ಡಾಯವಾಗಿ 10 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರಬೇಕು. ಹೀಗಾಗಿ ಅಕ್ಷರ್ ಪಟೇಲ್ ಆರಂಭಿಕ ಪಂದ್ಯಗಳಲ್ಲಿ ಆಡುವುದು ಅನುಮಾನವಾಗಿದೆ. ‘ಡೆಲ್ಲಿ ತಂಡದ ಆಲ್ರೌಂಡರ್ ಅಕ್ಷರ್ ಪಟೇಲ್‌ಗೆ ಕೋವಿಡ್-19 ಪಾಸಿಟಿವ್ ಬಂದಿದ್ದು, ಮಾರ್ಚ್ 28 ರಂದು ಮುಂಬೈ ಹೋಟೆಲ್‌ಗೆ ಆಗಮಿಸಿದಾಗ ನೆಗೆಟಿವ್ ವರದಿ ಬಂದಿತ್ತು. ಆದರೆ, ಎರಡನೇ ವರದಿ ಪಾಸಿಟಿವ್ ಬಂದಿದೆ’ ಎಂದು ಡೆಲ್ಲಿ ಫ್ರಾಂಚೈಸಿ ಪ್ರಕಟಣೆಯಲ್ಲಿ ತಿಳಿಸಿದೆ.

ವೈದ್ಯಕೀಯ ಸುರಕ್ಷತೆಯೊಂದಿಗೆ ಅಕ್ಷರ್ ಪಟೇಲ್ ಸದ್ಯ ಐಸೋಲೇಷನ್‌ನಲ್ಲಿದ್ದಾರೆ. ಅವರೊಂದಿಗೆ ಡೆಲ್ಲಿ ತಂಡದ ವೈದ್ಯಕೀಯ ಸಿಬ್ಬಂದಿ ಸಂಪರ್ಕದಲ್ಲಿದ್ದಾರೆ. ಸಾಧ್ಯವಾದಷ್ಟು ಬೇಗ ಸುಧಾರಣೆ ಕಾಣಲಿದ್ದಾರೆ ಎಂದು ಡೆಲ್ಲಿ ಫ್ರಾಂಚೈಸಿ ತಿಳಿಸಿದೆ. ಬಯೋಬಬಲ್‌ಗೆ ಎಂಟ್ರಿ ಕೊಡುವುದಕ್ಕೂ ಮುನ್ನ 9 ಹಾಗೂ 10ನೇ ದಿನದ ಕೋವಿಡ್-19 ವರದಿ ನೆಗೆಟಿವ್ ವರದಿ ಬರಬೇಕಿದೆ. ಸಂಪೂರ್ಣ ಸುಧಾರಿಸಿದ ಬಳಿಕ ಅಕ್ಷರ್ ಪಟೇಲ್ ಕಾರ್ಡಿಕ್ ಸ್ಕ್ರೀನಿಂಗ್ ಟೆಸ್ಟ್‌ಗೂ ಒಳಗಾಗಬೇಕಿದ್ದು, ಬಳಿಕವಷ್ಟೇ ತಂಡ ಕೂಡಿಕೊಳ್ಳಲಿದ್ದಾರೆ.

ಅಕ್ಷರ್ ಪಟೇಲ್, ಇತ್ತೀಚೆಗೆ ತವರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 3 ಪಂದ್ಯಗಳಿಂದ 27 ವಿಕೆಟ್ ಕಬಳಿಸಿದ್ದರು. ನಿತೀಶ್ ರಾಣಾ ಬಳಿಕ ಕೋವಿಡ್-19 ಕಾಣಿಸಿಕೊಂಡ ಎರಡನೇ ಐಪಿಎಲ್ ಆಟಗಾರನಾಗಿದ್ದಾರೆ. ಕೆಕೆಆರ್ ತಂಡದ ನಿತೀಶ್ ರಾಣಾಗೆ ಕೋವಿಡ್-19 ಕಾಣಿಸಿಕೊಂಡಿತ್ತು. ಬಳಿಕ ನಡೆದ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net