ಈ ದಾಖಲೆ ನಿರ್ಮಿಸಲು ನಮ್ಮ ದಿಗ್ಗಜರೇ ಪರದಾಡಿದ್ರು! ಭಾರತದ ಸ್ಟಾರ್​ ಆಟಗಾರನನ್ನು ಹೊಗಳಿದ ಅಜಯ್ ಜಡೇಜಾ

ವಿಜಯವಾಣಿ - 2024-11-16T171319.133
Published on

ನವದೆಹಲಿ: ನಿನ್ನೆ (ನ.15) ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯದಲ್ಲಿ ಬರೋಬ್ಬರಿ 135 ರನ್​ಗಳ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾಗೆ ವ್ಯಾಪಕ ಅಭಿನಂದನೆ, ಪ್ರಶಂಸೆ ವ್ಯಕ್ತವಾಗುತ್ತಿದೆ. ಸೌತ್​ ಆಫ್ರಿಕಾ ವಿರುದ್ಧ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ತಿಲಕ್ ವರ್ಮ ಮತ್ತು ಸಂಜು ಸ್ಯಾಮ್​ಸನ್​, ಕ್ರಿಕೆಟ್​ ಪ್ರಿಯರ ಹುಬ್ಬೇರುವಂತೆ ರನ್​ಗಳ ಸುರಿಮಳೆಯನ್ನು ಹರಿಸಿದರು. ತಿಲಕ್​ ಅಜೇಯ 120 (47) ರನ್​ ಗಳಿಸಿದರೆ, ಸಂಜು ಸ್ಯಾಮ್​ಸನ್​ 109 (56) ಬಾರಿಸಿದರು. ಇವರಿಬ್ಬರ ಅತ್ಯುತ್ತಮ ಜತೆಯಾಟ ತಂಡದ ಗೆಲುವಿಗೆ ಮುಖ್ಯ ಕಾರಣವಾಗಿದ್ದು, ಮಾಜಿ ಕ್ರಿಕೆಟಿಗರ ಮೆಚ್ಚುಗೆಗೆ ಗುರಿಯಾಗಿದೆ.

ಸಂಜು ಸ್ಯಾಮ್ಸನ್ ಬ್ಯಾಟಿಂಗ್ ವೈಖರಿಯನ್ನು ಕೊಂಡಾಡಿದ ಟೀಮ್ ಇಂಡಿಯಾದ ಮಾಜಿ ಹಿರಿಯ ಕ್ರಿಕೆಟಿಗ ಅಜಯ್​ ಜಡೇಜಾ, "ತಮ್ಮ ಐದು ಪಂದ್ಯಗಳಲ್ಲಿ ಮೂರು ಟಿ20 ಶತಕಗಳನ್ನು ಸಂಜು ಬಾರಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕು ಪಂದ್ಯಗಳ ಸರಣಿಯಲ್ಲಿ, ಅವರು ಮೊದಲ ಮತ್ತು ಅಂತಿಮ ಪಂದ್ಯಗಳಲ್ಲಿ ಆಕರ್ಷಕ ಶತಕ ಸಿಡಿಸಿದ್ದಾರೆ. ನಮ್ಮ ಭಾರತದ ದಿಗ್ಗಜ ಆಟಗಾರರು ಈ ದಾಖಲೆಯನ್ನು ತಲುಪಲು 150 ಮ್ಯಾಚ್​ಗಳನ್ನು ಆಡುತ್ತಾರೆ. ಆದರೆ, ಕೇವಲ ಐದು ಟಿ20 ಪಂದ್ಯದಲ್ಲಿ ಸ್ಯಾಮ್​ಸನ್​ ಮೂರು ಶತಕಗಳನ್ನು ನಿರ್ಮಿಸಿರುವುದು ನಿಜಕ್ಕೂ ಶ್ಲಾಘನೀಯ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

"ಸಂಜು ಇನ್ನಿಂಗ್ಸ್ ಆರಂಭಕ್ಕೆ ಕಾಯುತ್ತಿದ್ದರು. ಈಗ ಅವರು ವಿಭಿನ್ನ ಶೈಲಿಯ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ಅವರಲ್ಲಿ ಪ್ರತಿಭೆಯಿದೆ ಆದರೆ ಸ್ಥಿರತೆ ಕಾಣುತ್ತಿರಲಿಲ್ಲ. ಆದರೆ, ಇಂದು ಡಕ್​ಔಟ್​ಗಳನ್ನು ಮೀರಿ, ತಮ್ಮದೇ ಒಂದು ದಾಖಲೆಯನ್ನು ಮುಂದಕ್ಕೆ ಕೊಂಡೊಯ್ಯುತ್ತಿರುವುದು ನಿಜಕ್ಕೂ ಖುಷಿಯಾದ ವಿಷಯ. ಎರಡು ಡಕ್​ಔಟ್​ಗಳನ್ನು ನೋಡಿದ್ದೇ ಆದರೂ ಅವರ ರನ್​ಗಳ ಸಂಖ್ಯೆ ಉತ್ತಮವಾಗಿದೆ" ಎಂದು ಮೆಚ್ಚಿ ಮಾತನಾಡಿದ್ದಾರೆ.  ಮೂರು ಪಂದ್ಯಗಳ ಬಾಂಗ್ಲಾದೇಶದ ವಿರುದ್ಧ ಉತ್ತಮ ಬ್ಯಾಟಿಂಗ್ ಆರಂಭಿಸಿದ ಸಂಜು, ಇಲ್ಲಿಯವೆರೆಗೆ ಹಿಂದೆ ತಿರುಗಿ ನೋಡದೆ, ಮುಂದೆ ಸಾಗುತ್ತಿರುವುದು ಗಮನಾರ್ಹ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net