

ಹಾಂಗ್ಝೌ: ಏಷ್ಯಾಡ್ನಲ್ಲಿ ಭಾರತ ತಂಡದ ಪದಕ ಬೇಟೆಗೆ ವೇಗ ತುಂಬಬಲ್ಲ ಅಥ್ಲೆಟಿಕ್ಸ್ ಸ್ಪರ್ಧೆಗಳು ಶುಕ್ರವಾರ ಆರಂಭಗೊಳ್ಳಲಿವೆ. ಒಲಿಂಪಿಕ್ಸ್-ವಿಶ್ವ ಚಾಂಪಿಯನ್ ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಸಾರಥ್ಯದ ಭಾರತ ತಂಡ 65 ಅಥ್ಲೀಟ್ಗಳ ದೊಡ್ಡ ತಂಡದೊಂದಿಗೆ ಪದಕ ಸ್ಪರ್ಧೆಗೆ ಪ್ರವೇಶಿಸುತ್ತಿದ್ದು, ಅಥ್ಲೆಟಿಕ್ಸ್ನಲ್ಲೇ ಕೂಟದ ಗರಿಷ್ಠ ಪದಕಗಳನ್ನು ಬಾಚಿಕೊಳ್ಳುವ ನಿರೀಕ್ಷೆ ಇದೆ. ಕಳೆದ ಆವೃತ್ತಿಯ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ 8 ಚಿನ್ನ ಸಹಿತ 20 ಪದಕ ಗೆದ್ದುಕೊಂಡಿದ್ದ ಭಾರತ ಈ ಬಾರಿ ಕನಿಷ್ಠ 25 ಪದಕ ಗೆಲ್ಲುವ ಹಂಬಲದಲ್ಲಿದೆ.
ನೀರಜ್ ಚೋಪ್ರಾ ಜತೆಗೆ ಶಾಟ್ಪುಟ್ ಪಟು ತೇಜಿಂದರ್ ಸಿಂಗ್ ಟೂರ್, 3,000 ಮೀ. ಸ್ಟೀಪಲ್ ಚೇಸ್ ಓಟಗಾರ ಅವಿನಾಶ್ ಸಾಬ್ಲೆ, ಪುರುಷ-ಮಹಿಳೆಯರ 4/400 ಮೀ. ರಿಲೇ ತಂಡಗಳು ಈ ಬಾರಿ ಪದಕ ಗೆಲ್ಲುವ ನಿರೀಕ್ಷೆ ಇದೆ. ಅಂದರೆ ಕಳೆದ ಆವೃತ್ತಿಯ 8 ಚಿನ್ನದ ಸಾಧನೆಯನ್ನು ಭಾರತ ಈ ಬಾರಿ ಸರಿಗಟ್ಟುವುದು ತುಸು ಕಷ್ಟವೆನಿಸಿದೆ. ಪುರುಷರ ಲಾಂಗ್ಜಂಪ್ನಲ್ಲಿ ಮುರಳಿ ಶ್ರೀಶಂಕರ್ ಮತ್ತು ಜೆಸ್ವಿನ್ ಅಲ್ಡ್ರಿನ್, ಚೀನಾ ಮತ್ತು ಚೀನಾ ತೈಪೆ ಸ್ಪರ್ಧಿಗಳ ಸವಾಲು ಹಿಮ್ಮೆಟ್ಟಿಸಿದರೆ ಚಿನ್ನದ ನೆಗೆತ ಕಾಣಬಹುದಾಗಿದೆ. 4/400 ಮೀ. ರಿಲೇಯಲ್ಲಿ ಭಾರತ ಏಷ್ಯನ್ ದಾಖಲೆ ಹೊಂದಿರುವುದರಿಂದ ಚಿನ್ನ ಗೆಲ್ಲುವ ಫೇವರಿಟ್ ಎನಿಸಿದೆ.
ಟ್ರಿಪಲ್ ಜಂಪ್ನಲ್ಲಿ ಪ್ರವಿಣ್ ಚಿತ್ರವೆಲ್, 1,500 ಮೀ. ಓಟದಲ್ಲಿ ಅಜಯ್ ಕುಮಾರ್ ಸರೋಜ್, ಮಹಿಳೆಯರ 100 ಮೀ. ಹರ್ಡರ್ಲ್ಸ್ನಲ್ಲಿ ಜ್ಯೋತಿ ಯರಾಜಿ, 400 ಮೀ. ಹರ್ಡಲ್ಸ್ನಲ್ಲಿ ವಿದ್ಯಾ ರಾಮರಾಜ್, ಲಾಂಗ್ ಜಂಪ್ನಲ್ಲಿ ಶೈಲಿ ಸಿಂಗ್, ಸ್ಟೀಪಲ್ಚೇಸ್ನಲ್ಲಿ ಪಾರುಲ್ ಚೌಧರಿ, ಹೆಪ್ಟಾಥ್ಲಾನ್ನಲ್ಲಿ ಸ್ವಪ್ನಾ ಬರ್ಮನ್ ಪದಕದ ಆಕಾಂಕ್ಷಿಗಳಾಗಿದ್ದಾರೆ.
ಅಕ್ಟೋಬರ್ 4ರಂದು ನೀರಜ್ ಕಣಕ್ಕೆ
ಟೋಕಿಯೊ ಒಲಿಂಪಿಕ್ಸ್ ಬಳಿಕ ಇತ್ತೀಚೆಗೆ ವಿಶ್ವ ಚಾಂಪಿಯನ್ಷಿಪ್ನಲ್ಲೂ ಚಿನ್ನ ಗೆದ್ದಿರುವ ನೀರಜ್ ಚೋಪ್ರಾ ಏಷ್ಯಾಡ್ನಲ್ಲಿ 2018ರಲ್ಲಿ ಗೆದ್ದ ಸ್ವರ್ಣ ಪದಕವನ್ನು ರಕ್ಷಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಅವರು ಅಕ್ಟೋಬರ್ 4ರಂದು ನಡೆಯಲಿರುವ ಸಂಜೆ 4.30ರಿಂದ ನಡೆಯಲಿರುವ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಕಣಕ್ಕಿಳಿಯಲಿದ್ದು, ಪಾಕಿಸ್ತಾನದ ಅರ್ಷದ್ ನದೀಂ ಪ್ರಮುಖ ಪ್ರತಿಸ್ಪರ್ಧಿ ಎನಿಸಿದ್ದಾರೆ. ಒಡಿಶಾದ ಕಿಶೋರ್ ಜೆನಾ ಜಾವೆಲಿನ್ ಎಸೆತದಲ್ಲಿ ಭಾರತದ ಮತ್ತೋರ್ವ ಸ್ಪರ್ಧಿಯಾಗಿದ್ದಾರೆ.
ಕಣದಲ್ಲಿ ರಾಜ್ಯದ 6 ಅಥ್ಲೀಟ್ಗಳು
ಅಥ್ಲೆಟಿಕ್ಸ್ನಲ್ಲಿ ರಾಜ್ಯದ 6 ಅಥ್ಲೀಟ್ಗಳು ಕಣಕ್ಕಿಳಿಯಲಿದ್ದಾರೆ. ಅವರೆಂದರೆ ಬೆಳ್ಳಿಯಪ್ಪ ಎಬಿ (ಮ್ಯಾರಥಾನ್), ಮಿಜೋ ಚಾಕೋ ಕುರಿಯನ್ (4/400 ಮೀ. ರಿಲೇ), ಸಿಂಚಲ್ ಕಾವೇರಮ್ಮ (400 ಮೀ. ಹರ್ಡಲ್ಸ್), ಜೆಸ್ ಸಂದೇಶ್ (ಹೈಜಂಪ್), ಯಶಸ್ ಪಾಲಾಕ್ಷ (400 ಮೀ. ಹರ್ಡಲ್ಸ್), ನಿಹಾಲ್ ಜೋಯೆಲ್ (ಮಿಶ್ರ ರಿಲೇ).