ಐಪಿಎಲ್​ಗೆ ಮುನ್ನ ಗೈರುಹಾಜರಿಯ ಕಿರಿಕಿರಿ; ಯಾರು ಫಿಟ್​, ಯಾರು ಔಟ್​? ಇಲ್ಲಿದೆ ಸಂಪೂರ್ಣ ವಿವರ...

ipl missing web
Published on

ಬೆಂಗಳೂರು: ಐಪಿಎಲ್​ 17ನೇ ಆವೃತ್ತಿಗೆ ಇನ್ನು ಒಂದು ವಾರವಷ್ಟೇ ಬಾಕಿ ಉಳಿದಿದ್ದು, ಎಲ್ಲ 10 ತಂಡಗಳು ಕೊನೇ ಹಂತದ ಪೂರ್ವಸಿದ್ಧತೆಯನ್ನು ಆರಂಭಿಸಿವೆ. ಇದರ ನಡುವೆ ತಂಡಗಳಿಗೆ ಕೆಲ ಆಟಗಾರರ ಅಲಭ್ಯತೆಯ ಕಿರಿಕಿರಿ ಎದುರಾಗಿದೆ. ಗಾಯ-ಫಿಟ್ನೆಸ್​ ವಿಚಾರದಲ್ಲಿ ಈಗಾಗಲೆ ಕೆಲ ಆಟಗಾರರು ಸಂಪೂರ್ಣ ಟೂರ್ನಿ ತಪ್ಪಿಸಿಕೊಳ್ಳುವುದು ಖಚಿತಗೊಂಡಿದ್ದರೆ, ಇನ್ನು ಕೆಲ ಆಟಗಾರರು ಆರಂಭಿಕ ಕೆಲ ಪಂದ್ಯಗಳನ್ನು ತಪ್ಪಿಸಿಕೊಳ್ಳುವ ಭೀತಿ ಇದೆ. ಇನ್ನು ಕೆಲ ಆಟಗಾರರು ವೈಯಕ್ತಿಕ ಕಾರಣ ನೀಡಿ ಹಿಂದೆ ಸರಿಯುತ್ತಿದ್ದಾರೆ. ಇದು ತಂಡಗಳ ಲೆಕ್ಕಾಚಾರವನ್ನೂ ತಪ್ಪಿಸುತ್ತಿದ್ದು, ಹರಾಜಿನಲ್ಲಿ ಮಾರಾಟವಾಗದ ಆಟಗಾರರನ್ನು ಸೇರ್ಪಡೆಗೊಳಿಸುವ ಮೂಲಕ ಹೊಸ ಕಾರ್ಯತಂತ್ರವನ್ನು ರೂಪಿಸುತ್ತಿವೆ.

ಗುಜರಾತ್​ ಟೈಟಾನ್ಸ್​

ಟೀಮ್​ ಇಂಡಿಯಾದ ಸ್ಟಾರ್​ ವೇಗಿ ಮೊಹಮದ್​ ಶಮಿ ಗಾಯದಿಂದಾಗಿ ಈಗಾಗಲೆ ಸಂಪೂರ್ಣ ಐಪಿಎಲ್​ನಿಂದ ಹೊರಬಿದ್ದಿದ್ದು, ಗುಜರಾತ್​ ತಂಡ ಇನ್ನೂ ಬದಲಿ ಆಟಗಾರನನ್ನು ಹೆಸರಿಸಿಲ್ಲ. ಆದರೆ ಶಮಿ ಕಿರಿಯ ಸಹೋದರ ಹಾಗೂ ವೇಗಿ ಮೊಹಮದ್​ ಕೈಫ್​ ಬದಲಿ ಆಟಗಾರನಾಗಿ ತಂಡ ಸೇರುವ ಸಾಧ್ಯತೆ ಇದೆ. ಇನ್ನು ವಿಕೆಟ್​ ಕೀಪರ್​-ಬ್ಯಾಟರ್​ ಮ್ಯಾಥ್ಯೂ ವೇಡ್​, ಆಸ್ಟ್ರೆಲಿಯಾದ ಶೀಫೀಲ್ಡ್​ ಶೀಲ್ಡ್​ ಫೈನಲ್​ನಲ್ಲಿ ಟಾಸ್ಮೇನಿಯಾ ಪರ ಮಾರ್ಚ್​ 21ರಿಂದ 25ರವರೆಗೆ ಆಡಲು ನಿರ್ಧರಿಸಿರುವುದರಿಂದ, ಮಾರ್ಚ್​ 25ರಂದು ನಡೆಯಲಿರುವ ಗುಜರಾತ್​ ತಂಡದ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಇತ್ತೀಚೆಗೆ ಬೈಕ್​ ಅಪಘಾತದಲ್ಲಿ ಗಾಯಗೊಂಡಿರುವ ಜಾರ್ಖಂಡ್​ನ ಯುವ ವಿಕೆಟ್​ ಕೀಪರ್​-ಬ್ಯಾಟರ್​ ರಾಬಿನ್​ ಮಿಂಜ್​ ಕೂಡ ಟೈಟಾನ್ಸ್​ನ ಆರಂಭಿಕ ಕೆಲ ಪಂದ್ಯಗಳಿಗೆ ಅಲಭ್ಯರೆನಿಸಿದ್ದಾರೆ.

ಲಖನೌ ಸೂಪರ್​ಜೈಂಟ್ಸ್​

ಇಂಗ್ಲೆಂಡ್​ ವೇಗಿ ಮಾರ್ಕ್​ ವುಡ್​ ಟಿ20 ವಿಶ್ವಕಪ್​ಗೆ ಮುನ್ನ ಕಾರ್ಯದೊತ್ತಡ ತಗ್ಗಿಸಲು ಐಪಿಎಲ್​ನಿಂದ ಹಿಂದೆ ಸರಿದಿದ್ದು, ಅವರ ಬದಲಿಗೆ ಈಗಾಗಲೆ ವೆಸ್ಟ್​ ಇಂಡೀಸ್​ನ ಸೆನ್ಸೇಶನಲ್​ ಯುವ ವೇಗಿ ಶಮರ್​ ಜೋಸೆಫ್​ ಎಲ್​ಎಸ್​ಜಿ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಇನ್ನು ಲಖನೌ ನಾಯಕ ಕೆಎಲ್​ ರಾಹುಲ್​ ಫಿಟ್ನೆಸ್​ ಸಮಸ್ಯೆ ಹೊಂದಿದ್ದರೂ, ಮೊದಲ ಪಂದ್ಯಕ್ಕೆ ಫಿಟ್​ ಆಗುವ ನಿರೀಕ್ಷೆ ಇದೆ.

ರಾಜಸ್ಥಾನ ರಾಯಲ್ಸ್​

ಕನ್ನಡಿಗ ಹಾಗೂ ವೇಗಿ ಪ್ರಸಿದ್ಧ ಕೃಷ್ಣ ಗಾಯದಿಂದಾಗಿ ಸತತ 2ನೇ ಬಾರಿ ಸಂಪೂರ್ಣ ಐಪಿಎಲ್​ ತಪ್ಪಿಸಿಕೊಳ್ಳಲಿದ್ದಾರೆ. ರಣಜಿ ಪಂದ್ಯದ ವೇಳೆ ಅವರು ಗಾಯಗೊಂಡಿದ್ದರು. ಅವರ ಬದಲಿಗೆ ಬೇರೆ ಆಟಗಾರನನ್ನು ರಾಜಸ್ಥಾನ ತಂಡ ಇನ್ನೂ ಹೆಸರಿಸಿಲ್ಲ.

ಕೋಲ್ಕತ ನೈಟ್​ರೈಡರ್ಸ್​

ರಣಜಿ ಫೈನಲ್​ನಲ್ಲಿ ಬೆನ್ನುನೋವಿನ ಸಮಸ್ಯೆ ಮರುಕಳಿಸಿದ ಕಾರಣ ನಾಯಕ ಶ್ರೇಯಸ್​ ಅಯ್ಯರ್​ ಆರಂಭಿಕ ಕೆಲ ಪಂದ್ಯ ತಪ್ಪಿಸಿಕೊಳ್ಳುವ ಭೀತಿ ಇದೆ. ಇದರ ಹೊರತಾಗಿ ಜೇಸನ್​ ರಾಯ್​ ವೈಯಕ್ತಿಕ ಕಾರಣ ನೀಡಿ ಹಿಂದೆ ಸರಿದಿರುವುದರಿಂದ ಇಂಗ್ಲೆಂಡ್​ನ ಮತ್ತೋರ್ವ ಸ್ಫೋಟಕ ಬ್ಯಾಟರ್​ ಫಿಲ್​ ಸಾಲ್ಟ್​ ಸೇರ್ಪಡೆಯಾಗಿದ್ದಾರೆ. ಕಳೆದ ಹರಾಜಿನಲ್ಲಿ 1 ಕೋಟಿ ರೂ.ಗೆ ಖರೀದಿಸಿದ ಇಂಗ್ಲೆಂಡ್​ ವೇಗಿ ಗಸ್​ ಅಟ್ಕಿನ್​ಸನ್​ ಇಸಿಬಿ ಸೂಚನೆಯಂತೆ ಕಾರ್ಯದೊತ್ತಡ ತಗ್ಗಿಸಲು ಹಿಂದೆ ಸರಿದಿದ್ದು, ಶ್ರೀಲಂಕಾದ ದುಶ್ಮಂತ ಚಮೀರ ಬದಲಿ ಆಟಗಾರನಾಗಿದ್ದಾರೆ.

ಚೆನ್ನೈ ಸೂಪರ್​ಕಿಂಗ್ಸ್​

ನ್ಯೂಜಿಲೆಂಡ್​ ಎಡಗೈ ಆರಂಭಿಕ ಡೆವೊನ್​ ಕಾನ್​ವೇ ಕೈಬೆರಳು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಟೂರ್ನಿಯ ಮೊದಲ 8 ವಾರದ ಪಂದ್ಯಗಳಲ್ಲಿ ಆಡುವುದು ಅನುಮಾನವೆನಿಸಿದೆ. ಇದರಿಂದ ಅವರು ಬಹುತೇಕ ಟೂರ್ನಿ ತಪ್ಪಿಸಿಕೊಳ್ಳಲಿದ್ದು, ಸಿಎಸ್​ಕೆ ತಂಡ ಬದಲಿ ಆಟಗಾರನನ್ನು ಸೇರ್ಪಡೆಗೊಳಿಸುವುದೇ ಅಥವಾ ಋತುರಾಜ್​ ಗಾಯಕ್ವಾಡ್​ ಜತೆ ರಚಿನ್​ ರವೀಂದ್ರರನ್ನೇ ಆರಂಭಿಕನಾಗಿ ಕಣಕ್ಕಿಳಿಸುವುದೇ ಎಂದು ಕಾದುನೋಡಬೇಕಿದೆ. ಮಾಲಿಂಗ ಬೌಲಿಂಗ್​ ಶೈಲಿಯ ಲಂಕಾ ವೇಗಿ ಮಥೀಶ ಪಥಿರಣ, ಶಿವಂ ದುಬೆ ಗಾಯದಿಂದಾಗಿ ಆರಂಭಿಕ ಕೆಲ ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆಗಳಿವೆ.

ಡೆಲ್ಲಿ ಕ್ಯಾಪಿಟಲ್ಸ್​

ಅಜ್ಜಿಯ ಸಾವಿನಿಂದ ಕುಟುಂಬದಲ್ಲಿರುವ ಶೋಕದಿಂದಾಗಿ ಇಂಗ್ಲೆಂಡ್​ ಬ್ಯಾಟರ್​ ಹ್ಯಾರಿ ಬ್ರೂಕ್​ ಟೂರ್ನಿಯಿಂದ ಹಿಂದೆ ಸರಿದಿದ್ದು, ಡೆಲ್ಲಿ ತಂಡ ಇನ್ನೂ ಬದಲಿ ಆಟಗಾರನನ್ನು ಹೆಸರಿಸಿಲ್ಲ. ದಣ ಆಫ್ರಿಕಾ ವೇಗಿ ಲುಂಗಿ ಎನ್​ಗಿಡಿ ಗಾಯದಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದು, ಆಸೀಸ್​ನ 21 ವರ್ಷದ ಆಲ್ರೌಂಡರ್​ ಜೇಕ್​ ಫ್ರೇಸರ್​ ಮೆಕ್​ಗುರ್ಕ್​ಗೆ ಡೆಲ್ಲಿ ತಂಡ ಮಣೆ ಹಾಕಿದೆ. ಕಳೆದ ತಿಂಗಳು ವಿಂಡೀಸ್​ ವಿರುದ್ಧ ಏಕದಿನಕ್ಕೆ ಪದಾರ್ಪಣೆ ಮಾಡಿದ್ದ ಮೆಕ್​ಗುರ್ಕ್​, 50 ಲಕ್ಷ ರೂ. ಮೂಲಬೆಲೆಗೆ ತಂಡ ಸೇರಿದ್ದಾರೆ. ಇನ್ನು ರಸ್ತೆ ಅಪಘಾತದಿಂದ ಚೇತರಿಸಿಕೊಂಡ ವಿಕೆಟ್​ ಕೀಪರ್​-ಬ್ಯಾಟರ್​ ರಿಷಭ್​ ಪಂತ್​ ಈ ಬಾರಿ ಮತ್ತೆ ನಾಯಕರಾಗಿ ಮರಳುತ್ತಿರುವುದು ಡೆಲ್ಲಿಗೆ ಸಮಾಧಾನಕರ ಅಂಶ.

ಆರ್​ಸಿಬಿ

ವೈಯಕ್ತಿಕ ಕಾರಣ ನೀಡಿ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿ ತಪ್ಪಿಸಿಕೊಂಡಿದ್ದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಸಂಪೂರ್ಣ ಐಪಿಎಲ್​ನಲ್ಲಿ ಆಡುವ ಬಗ್ಗೆ ಇನ್ನೂ ಖಚಿತತೆ ದೊರೆತಿಲ್ಲ. ಮಾರ್ಚ್​ 19ರಂದು ಬೆಂಗಳೂರಿನಲ್ಲಿ ನಡೆಯಲಿರುವ ಆರ್​ಸಿಬಿ ಅನ್​ಬಾಕ್ಸ್​ ಕಾರ್ಯಕ್ರಮದ ವೇಳೆ ಕೊಹ್ಲಿ ಹಾಜರಿದ್ದರೆ ಅವರು ಐಪಿಎಲ್​ನಲ್ಲೂ ಆಡುವ ಭರವಸೆ ಇಡಬಹುದು. ಇಂಗ್ಲೆಂಡ್​ ವಿರುದ್ಧ ಟೆಸ್ಟ್​ ಸರಣಿ ಯಲ್ಲಿ ಗಾಯಗೊಂಡಿದ್ದ ಬ್ಯಾಟರ್​ ರಜತ್​ ಪಾಟೀದಾರ್​ ಫಿಟ್​ ಆಗುವ ನಿರೀೆ ಇದೆ. ಇಂಗ್ಲೆಂಡ್​ ವೇಗಿಗಳಾದ ರೀಸ್​ ಟಾಪ್ಲೆ, ಟಾಮ್​ ಕರನ್​ ಫಿಟ್ನೆಸ್​ ಕೂಡ ಗೊಂದಲದಲ್ಲಿದೆ. ಇನ್ನು ಇಂಗ್ಲೆಂಡ್​ ವೇಗಿಗಳಾದ ರೀಸ್​ ಟಾಪ್ಲೆ, ಟಾಮ್​ ಕರನ್​ ಕೂಡ ಇತ್ತೀಚೆಗೆ ಫಿಟ್ನೆಸ್​ ಕಳವಳ ಎದುರಿಸಿದ್ದು, ಅವರ ಲಭ್ಯತೆ ಬಗ್ಗೆ ಸ್ಪಷ್ಟತೆ ಮೂಡಿಲ್ಲ.

ಮುಂಬೈ ಇಂಡಿಯನ್ಸ್​

ದಣ ಆಫ್ರಿಕಾ ಪ್ರವಾಸದಲ್ಲಿ ಗಾಯಗೊಂಡ ಸೂರ್ಯಕುಮಾರ್​ ನಂತರದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಿಂದ ಫಿಟ್ನೆಸ್​ ಬಗ್ಗೆ ಇನ್ನೂ ಹಸಿರು ನಿಶಾನೆ ಪಡೆದಿಲ್ಲ. ಹೀಗಾಗಿ ಸೂರ್ಯಕುಮಾರ್​ ಮುಂಬೈ ತಂಡದ ಆರಂಭಿಕ ಕೆಲ ಪಂದ್ಯಗಳಿಗೆ ಅಲಭ್ಯರಾದರೆ ಅಚ್ಚರಿ ಇಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net