ಆಸ್ಟ್ರೇಲಿಯಾ ಎದುರು ಸುದರ್ಶನ್​-ಪಡಿಕ್ಕಲ್​ ಆಸರೆಯಲ್ಲಿ ಭಾರತ ಎ ದಿಟ್ಟ ಪ್ರತಿಹೋರಾಟ

web padi
Published on

ಮೆಕಾಯ್​: ಯುವ ಎಡಗೈ ಬ್ಯಾಟರ್​ಗಳಾದ ಸಾಯಿ ಸುದರ್ಶನ್​ (96*ರನ್​, 185 ಎಸೆತ, 9 ಬೌಂಡರಿ) ಮತ್ತು ದೇವದತ್​ ಪಡಿಕ್ಕಲ್​ (80*ರನ್​, 167 ಎಸೆತ, 5 ಬೌಂಡರಿ) ಭರ್ಜರಿ ಜತೆಯಾಟದ ಬಲದಿಂದ ಭಾರತ ಎ ತಂಡ ಆತಿಥೇಯ ಆಸ್ಟ್ರೆಲಿಯಾ ಎ ವಿರುದ್ಧದ ಮೊದಲ ಚತುರ್ದಿನ ಪಂದ್ಯದ 2ನೇ ಇನಿಂಗ್ಸ್​ನಲ್ಲಿ ದಿಟ್ಟ ಪ್ರತಿಹೋರಾಟ ಸಂಟಿಸಿದೆ.

ಗ್ರೇಟ್​ ಬ್ಯಾರಿಯರ್​ ರೀಫ್ ಅರೇನಾದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶುಕ್ರವಾರ 4 ವಿಕೆಟ್​ಗೆ 99 ರನ್​ಗಳಿಂದ 2ನೇ ದಿನದಾಟ ಮುಂದುವರಿಸಿದ ಆಸೀಸ್​ ಎ ತಂಡ ವೇಗಿ ಮುಕೇಶ್​ ಕುಮಾರ್​ (46ಕ್ಕೆ 6) ದಾಳಿಗೆ ಕುಸಿದು 195 ರನ್​ಗಳಿಗೆ ಆಲೌಟ್​ ಆಯಿತು. 88 ರನ್​ ಹಿನ್ನಡೆಯೊಂದಿಗೆ 2ನೇ ಇನಿಂಗ್ಸ್​ ಆರಂಭಿಸಿದ ಭಾರತ ಎ ತಂಡ ಆರಂಭಿಕರಾದ ಅಭಿಮನ್ಯು ಈಶ್ವರನ್​ (12) ಮತ್ತು ನಾಯಕ ಋತುರಾಜ್​ ಗಾಯಕ್ವಾಡ್​ (5) ವಿಕೆಟ್​ಗಳನ್ನು ಬೇಗನೆ ಕಳೆದುಕೊಂಡು, ಮೊದಲ ಇನಿಂಗ್ಸ್​ನಂತೆ ಮತ್ತೆ ಕುಸಿಯುವ ಭೀತಿ ಎದುರಿಸಿತು. ಆಗ ಜತೆಯಾದ ಸಾಯಿ ಸುದರ್ಶನ್​ ಮತ್ತು ದೇವದತ್​ ಪಡಿಕ್ಕಲ್​ ಮುರಿಯದ 3ನೇ ವಿಕೆಟ್​ಗೆ ಸುಮಾರು 55 ಓವರ್​ ಎದುರಿಸಿ 178 ರನ್​ ಕಲೆಹಾಕಿದರು. ಇದರೊಂದಿಗೆ ಭಾರತ ಎ ತಂಡ ದಿನದಂತ್ಯಕ್ಕೆ 2 ವಿಕೆಟ್​ಗೆ 208 ರನ್​ ಗಳಿಸಿ ಸುಸ್ಥಿತಿಯಲ್ಲಿದೆ. ಭಾರತ ಎ ತಂಡ ಸದ್ಯ 120 ರನ್​ ಮುನ್ನಡೆ ಸಾಧಿಸಿದೆ. ಸುದರ್ಶನ್​&ಪಡಿಕ್ಕಲ್​ ಇಬ್ಬರೂ ಶತಕದತ್ತ ಮುನ್ನಡೆದಿದ್ದಾರೆ.

ಭಾರತ ಎ: 107 ಮತ್ತು 64 ಓವರ್​ಗಳಲ್ಲಿ 2 ವಿಕೆಟ್​ಗೆ 208 (ಈಶ್ವರನ್​ 12, ಋತುರಾಜ್​ 5, ಸುದರ್ಶನ್​ 96*, ಪಡಿಕ್ಕಲ್​ 80*, ಓನೀಲ್​ 33ಕ್ಕೆ 1), ಆಸ್ಟ್ರೆಲಿಯಾ ಎ: 62.4 ಓವರ್​ಗಳಲ್ಲಿ 195 (ಮೆಕ್​ಸ್ವೀನಿ 39, ಮರ್ಫಿ 33, ಮುಕೇಶ್​ 46ಕ್ಕೆ 6, ಪ್ರಸಿದ್ಧ ಕೃಷ್ಣ 59ಕ್ಕೆ 3, ನಿತೀಶ್​ 14ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net