

ಬೆಂಗಳೂರು: ಆರ್ಸಿಬಿ ತಂಡ ಸಾಮಾಜಿಕ ಜಾಲತಾಣದಲ್ಲಿ ಕನ್ನಡದ ಜತೆಗೆ ಹಿಂದಿಯಲ್ಲೂ ಪೋಸ್ಟ್ ಮಾಡಲು ಪ್ರತ್ಯೇಕ ಖಾತೆಯನ್ನು ಆರಂಭಿಸಿದ ಬೆನ್ನಲ್ಲೇ ರಾಜ್ಯದ ಅಭಿಮಾನಿಗಳಿಂದ ತೀವ್ರ ಟೀಕೆಗಳಿಗೆ ಗುರಿಯಾಗಿತ್ತು. ಹಿಂದಿ ಹೇರಿಕೆ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಆದರೆ ದೇಶದೆಲ್ಲೆಡೆಯ ಅಭಿಮಾನಿಗಳನ್ನು ತಲುಪುವ ಸಲುವಾಗಿ ಈ ಕ್ರಮ ತೆಗೆದುಕೊಂಡಿರುವುದಾಗಿ ತನ್ನ ನಿಲುವನ್ನು ಸಮರ್ಥಿಸಿಕೊಂಡಿರುವ ಆರ್ಸಿಬಿ, ಮುಂಬರುವ ದಿನಗಳಲ್ಲಿ ಭಾರತದ ಇತರ ಭಾಷೆಗಳಲ್ಲೂ ಖಾತೆ ಆರಂಭಿಸಿ ಪೋಸ್ಟ್ ಮಾಡುವುದಾಗಿ ತಿಳಿಸಿದೆ.
ಹಾಲಿ ವರ್ಷವೇ ತೆಲುಗು ಖಾತೆಯನ್ನೂ ಆರಂಭಿಸುವುದಾಗಿ ತಿಳಿಸಿರುವ ಆರ್ಸಿಬಿ, 2026ರಲ್ಲಿ ಮಲಯಾಳಿ, ಪಂಜಾಬಿ ಮತ್ತು ಬೆಂಗಾಲಿ ಭಾಷೆಯಲ್ಲೂ ಖಾತೆ ತೆರೆದು ಪೋಸ್ಟ್ ಮಾಡುವುದಾಗಿ ಹೇಳಿದೆ. ಈ ಮೂಲಕ ಭಾರತ ಮತ್ತು ವಿಶ್ವದ ಪ್ರತಿ ಮೂಲೆಯಲ್ಲಿರುವ ಅಭಿಮಾನಿಗಳನ್ನು ತಲುಪಲು ಪ್ರಯತ್ನಿಸುವುದಾಗಿ ತಿಳಿಸಿದೆ.
ವಿವಿಧ ಭಾರತೀಯ ಭಾಷೆಗಳಲ್ಲಿ ಒಂದು ಸಾವಿರಕ್ಕೂ ಅಧಿಕ ಡಬ್ ಮಾಡಲಾದ ವಿಡಿಯೋಗಳನ್ನು ಪೋಸ್ಟ್ ಮಾಡುವುದು ತನ್ನ ಗುರಿಯಾಗಿದೆ ಎಂದು ಆರ್ಸಿಬಿ ತಿಳಿಸಿದೆ. ಕನ್ನಡ ರಾಜ್ಯೋತ್ಸವದಂದು ಕನ್ನಡ ಖಾತೆಯನ್ನು ಆರಂಭಿಸಿದ್ದ ಆರ್ಸಿಬಿ ಒಂದು ತಿಂಗಳ ಅವಧಿಯಲ್ಲಿ 1.6 ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಪಡೆದುಕೊಂಡಿದೆ. ಕನ್ನಡದ ಖಾತೆಗೆ ದೊರೆತ ಪ್ರೋತ್ಸಾಹದ ಬಲದಿಂದಲೇ ಇತರ ಭಾಷೆಗಳಲ್ಲೂ ಖಾತೆಗಳನ್ನು ಆರಂಭಿಸಲು ಮುಂದಾಗಿರುವುದಾಗಿ ಆರ್ಸಿಬಿ ವಿವರಿಸಿದೆ.