

ಬೆಂಗಳೂರು: ಐಪಿಎಲ್ ಮೆಗಾ ಹರಾಜಿನಲ್ಲಿ ದಾಖಲೆಯ 27 ಕೋಟಿ ರೂ. ಬಿಡ್ ಪಡೆದುಕೊಂಡಿರುವ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಮುಂದಿನ ವರ್ಷದ ಟೂರ್ನಿಯ ವೇಳೆ ಪ್ರತಿ ನಿಮಿಷಕ್ಕೆ 2,568 ರೂ. ಸಂಪಾದಿಸಲಿದ್ದಾರೆ. 2025ರ ಐಪಿಎಲ್ ಮಾರ್ಚ್ 14ರಿಂದ ಮೇ 25ರವರೆಗೆ ನಿಗದಿಯಾಗಿದೆ. ಅಂದರೆ ಟೂರ್ನಿ ಒಟ್ಟು 73 ದಿನಗಳ ಕಾಲ ನಡೆಯಲಿದೆ. ಈ ಆಧಾರದಲ್ಲಿ ಪಂತ್ ಟೂರ್ನಿಯ ವೇಳೆ ಪ್ರತಿದಿನ 36.98 ಲಕ್ಷ ರೂ. ಗಳಿಸಲಿದ್ದಾರೆ. ಅಂದರೆ ಪ್ರತಿ ಗಂಟೆಗೆ 1.54 ಲಕ್ಷ ರೂ. ಸಂಪಾದಿಸಲಿದ್ದಾರೆ. ಅಂದರೆ ಟೂರ್ನಿಯ ವೇಳೆ ಪ್ರತಿ ಸೆಕೆಂಡ್ಗೆ 42.80 ರೂ. ಗಳಿಸಲಿದ್ದಾರೆ!
ರಿಷಭ್ ಪಂತ್ಗಿಂತ ಕೇವಲ 25 ಲಕ್ಷ ರೂ. ಕಡಿಮೆ ಮೊತ್ತಕ್ಕೆ ಅಂದರೆ 26.75 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್ ಪಾಲಾಗಿರುವ ಶ್ರೇಯಸ್ ಅಯ್ಯರ್, ಐಪಿಎಲ್ ಟೂರ್ನಿಯ ವೇಳೆ ಪ್ರತಿ ದಿನಕ್ಕೆ 36.64 ಲಕ್ಷ ರೂ. ಗಳಿಸಲಿದ್ದಾರೆ. ಪ್ರತಿ ಗಂಟೆಗೆ 1.52 ಲಕ್ಷ ರೂ. ಮತ್ತು ಪ್ರತಿ ನಿಮಿಷಕ್ಕೆ 2,544 ರೂ. ಗಳಿಸಲಿದ್ದಾರೆ. ಪ್ರತಿ ಸೆಕೆಂಡ್ಗೆ 42.41 ರೂ. ಸಂಪಾದಿಸಲಿದ್ದಾರೆ.
ಐಪಿಎಲ್ ಹರಾಜಿನಲ್ಲಿ ಕನಿಷ್ಠ 30 ಲಕ್ಷ ರೂ. ಮೂಲಬೆಲೆಗೆ ಮಾರಾಟವಾಗಿರುವ ಆಟಗಾರರು ಟೂರ್ನಿಯ ವೇಳೆ ಪ್ರತಿ ದಿನಕ್ಕೆ 41,095 ರೂ. ಮಾತ್ರ ಗಳಿಸಲಿದ್ದಾರೆ. ಪ್ರತಿ ಗಂಟೆಗೆ 1,712 ರೂ. ಮತ್ತು ಪ್ರತಿ ನಿಮಿಷಕ್ಕೆ 28 ರೂ. ಮಾತ್ರ ಗಳಿಸಲಿದ್ದಾರೆ. ಪ್ರತಿ ಸೆಕೆಂಡ್ಗೆ 47 ಪೈಸೆ ಮಾತ್ರ ಪಡೆಯಲಿದ್ದಾರೆ.