ಮಗಳು ಅವೆಲ್ಲ ಅರ್ಥವಾಗದಷ್ಟು ಚಿಕ್ಕವಳು: ಕೊಹ್ಲಿ ಆಟಕ್ಕೆ ಸಂಭ್ರಮಿಸಿ ಅನುಷ್ಕಾ ಪ್ರತಿಕ್ರಿಯಿಸಿದ್ದು ಹೀಗೆ..

Virat Kohli
Published on

ಬೆಂಗಳೂರು: ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ರೋಚಕ ಜಯ ಗಳಿಸಿದ್ದು, ಅದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿರಾಟ್​ ಕೊಹ್ಲಿಯ ಕುರಿತು ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದರಲ್ಲೂ ಅಂತ್ಯದ ಕೆಲವು ಕ್ಷಣಗಳ ಆಟಕ್ಕೆ ಹಲವರಿಂದ ಪ್ರಶಂಸೆಗಳ ಸುರಿಮಳೆಯಾಗುತ್ತಿದ್ದು, ಕಿಂಗ್ ಈಸ್ ಬ್ಯಾಕ್ ಎಂದೂ ಹೊಗಳಿದ್ದಾರೆ.

ಈ ಮಧ್ಯೆ ಪತಿಯ ಆಟದ ಕುರಿತು ನಟಿ ಅನುಷ್ಕಾ ಶರ್ಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ಕೊಹ್ಲಿ ಆಟವನ್ನು ನೋಡುತ್ತ ಹೇಗೆ ಸಂಭ್ರಮಿಸಿದೆ ಎಂಬುದನ್ನೂ ಹೇಳಿಕೊಂಡಿದ್ದಾರೆ. ನೀವು ಈ ರಾತ್ರಿ, ಅದರಲ್ಲೂ ದೀಪಾವಳಿಯ ಈ ಸಂದರ್ಭದಲ್ಲಿ ಜನರ ಜೀವನದಲ್ಲಿ ಸಂತೋಷವನ್ನು ತಂದ್ರಿ ಎಂದು ಅನುಷ್ಕಾ ಸಂತೋಷ ವ್ಯಕ್ತಪಡಿಸಿದ್ದಾರೆ.

ನೀವು ನನ್ನ ಪ್ರೀತಿಯ ಅದ್ಭುತ ವ್ಯಕ್ತಿ. ನಿಮ್ಮ ಶ್ರದ್ಧೆ, ನಿರ್ಣಯ ಮತ್ತು ನಂಬಿಕೆ ಮನಸ್ಸಿಗೆ ಮುದ ನೀಡುತ್ತದೆ. ನಾನು ನನ್ನ ಜೀವನದ ಶ್ರೇಷ್ಠ ಪಂದ್ಯವನ್ನು ನೋಡಿದೆ ಎಂದು ಹೇಳಬಹುದು ಎಂದ ಅನುಷ್ಕಾ, ಆ ಆಟದ ಕ್ಷಣಗಳನ್ನು ಹೇಗೆ ಸಂಭ್ರಮಿಸಿದೆ ಎಂಬುದನ್ನೂ ಹೇಳಿಕೊಂಡಿದ್ದಾರೆ.

ನಮ್ಮ ಮಗಳು ಅಮ್ಮ ಯಾಕೆ ಕೋಣೆಯಲ್ಲಿ ಹೀಗೆ ನರ್ತಿಸುತ್ತಿದ್ದಾರೆ ಮತ್ತು ಜೋರಾಗಿ ಕಿರುಚುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳಲಾಗದಷ್ಟು ಚಿಕ್ಕವಳು. ಆದರೆ ಒಂದು ದಿನ ಅವಳ ತಂದೆ ಆ ರಾತ್ರಿ ತನ್ನ ಅತ್ಯುತ್ತಮ ಇನ್ನಿಂಗ್ಸ್‌ ಆಡಿದರು ಮತ್ತು ಅದುವರೆಗೂ ಕಠಿಣವಾಗಿದ್ದ ಒಂದು ಹಂತದ ನಂತರ ಅವರು ಹಿಂದೆಂದಿಗಿಂತಲೂ ಬಲಶಾಲಿ ಮತ್ತು ಬುದ್ಧಿವಂತರಾಗಿ ಹೊರಹೊಮ್ಮಿದ್ರು ಎಂಬುದನ್ನು ಅವಳು ಅರ್ಥಮಾಡಿಕೊಳ್ಳುವಳು ಎಂದು ಅನುಷ್ಕಾ ಹೇಳಿಕೊಂಡಿದ್ದಾರೆ.

ನಿಮ್ಮ ಬಗ್ಗೆ ತುಂಬಾ ಹೆಮ್ಮೆಯಾಗುತ್ತಿದೆ, ನೀವು ಶಕ್ತಿವಂತ, ಸೀಮಾತೀತ ವ್ಯಕ್ತಿ, ನಿಮ್ಮನ್ನು ಸದಾ ಪ್ರೀತಿಸುತ್ತಿರುತ್ತೇನೆ ಎಂಬುದಾಗಿ ಅನುಷ್ಕಾ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net