4 ವರ್ಷಗಳ ಬಳಿಕ ಬೆಂಗಳೂರಿನಲ್ಲಿ IPL ಪಂದ್ಯಗಳು: ಟಿಕೆಟ್​ ಖರೀದಿ ಜೋರು, RCB ಅಭಿಮಾನಿಗಳ​ ಆಕ್ರೋಶ

RCB Fans
Published on

ಬೆಂಗಳೂರು: ನಾಲ್ಕು ವರ್ಷಗಳ ಬಳಿಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಐಪಿಎಲ್​ ಪಂದ್ಯಗಳ ನಡೆಯಲಿದ್ದು, ಟಿಕೆಟ್​ ಖರೀದಿಗಾಗಿ ರಾಯಲ್​ ಚಾಲೆಂಜರ್ಸ್​ ಅಭಿಮಾನಿಗಳು ಟಿಕೆಟ್​ ಖರೀದಿಗಾಗಿ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಮುಂದೆ ಸಾಲುಗಟ್ಟಿ ನಿಂತಿದ್ದಾರೆ.

ಏಪ್ರಿಲ್ 2ರಂದು ಹಾಗೂ ಏಪ್ರಿಲ್​ 10 ರಂದು ನಡೆಯುವ ಎರಡು ಪಂದ್ಯಗಳಿಗಾಗಿ ಟಿಕೆಟ್ ಖರೀದಿಗೆ ಅಭಿಮಾನಿಗಳು ಸರದಿ ಸಾಲಿನಲ್ಲಿ ನಿಂತಿದ್ದಾರೆ. ಏಪ್ರಿಲ್ 2 ರಂದು ಆರ್​ಸಿಬಿ‌ ಹಾಗೂ ಮುಂಬೈ ನಡುವೆ ನಡೆಯಲಿದೆ ಮತ್ತು ಏಪ್ರಿಲ್ 10 ರಂದು ಆರ್​ಸಿಬಿ‌ ಹಾಗೂ ಲಖನೌ ನಡುವೆ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಪಂದ್ಯದ ಟಿಕೆಟ್ ದರ 2300 ರೂ.ನಿಂದ ಆರಂಭವಾಗಲಿದೆ. ಆನ್​​​ಲೈನ್​ನಲ್ಲಿಯೂ ಟಿಕೆಟ್​ ದರ 2,300 ರೂ. ಇದೆ. ಬೆಳಗ್ಗೆ 10.30ರಿಂದ ಟಿಕೆಟ್ ವಿತರಣೆ ಆರಂಭವಾಗಲಿದೆ. ರಾತ್ರಿಯೇ ಸ್ಟೇಡಿಯಂ ಬಳಿ‌ ಬಂದು ಅಭಿಮಾನಿಗಳು ನಿಂತಿದ್ದಾರೆ. ಕಿಲೋಮೀಟರ್​ಗಟ್ಟಲೆ ಯುವಕ ಹಾಗೂ ಯುವತಿಯರು ಟಿಕೆಟ್​​ಗಾಗಿ ಸಾಲಿನಲ್ಲಿ ನಿಂತಿದ್ದಾರೆ.

ಗೇಟ್ ನಂಬರ್ 18ರಲ್ಲಿ ಎರಡು ಪಂದ್ಯದ ಟಿಕೆಟ್ ಮಾರಾಟವಾಗಲಿದೆ. ಒಬ್ಬರಿಗೆ ಒಂದು ಟಿಕೆಟ್ ಮಾತ್ರ ವಿತರಣೆ ಮಾಡಲಾಗುತ್ತಿದೆ. ಬಹಳ ವರ್ಷಗಳ ನಂತರ ಇದೀಗ ಬೆಂಗಳೂರಿನಲ್ಲಿ ಐಪಿಎಲ್​ ಪಂದ್ಯಗಳು ನಡೆಯಲಿದ್ದು, ಅಭಿಮಾನಿಗಳ ಪಾಲಿಗೆ ಖುಷಿ ತಂದಿದೆ.

ಅಭಿಮಾನಿಗಳ ಆಕ್ರೋಶ

ಐಪಿಎಲ್​ ಮ್ಯಾನೇಜ್ಮೆಂಟ್ ಗೇಟ್​ ನಂಬರ್​ 18 ಅಥಾವ 19 ಅಂತ ಮಾಹಿತಿ ನೀಡಿದೆ. ಆದರೆ, ಟಿಕೆಟ್​ಗಾಗಿ ಸಾಲುಗಟ್ಟಿ ನಿಂತಿರುವ ಅಭಿಮಾನಿಗಳಲ್ಲಿ ಗೊಂದಲ ಶುರುವಾಗಿದೆ. ಗೇಟ್ 19ರಲ್ಲಿ ಏಪ್ರಿಲ್ 10ರಂದು ನಡೆಯುವ ಲಖನೌ ಮತ್ತು ಆರ್​ಸಿಬಿ ಪಂದ್ಯದ ಟಿಕೆಟ್ ವಿತರಣೆ ಮಾಡಲಾಗುತ್ತಿದೆ. ಗೇಟ್ ನಂಬರ್ 18ರಲ್ಲಿ ಆರ್​ಸಿಬಿ-ಮುಂಬೈ ಪಂದ್ಯದ ಟಿಕೆಟ್‌ ನೀಡಲಾಗ್ತಿದೆ. ಈ ಬಗ್ಗೆ ಯಾವುದೇ ಮಾಹಿತಿ ಇಲ್ಲದೆ ಅಭಿಮಾನಿಗಳಿಗೆ ಗೊಂದಲ ಶುರುವಾಗಿದೆ. ರಾತ್ರಿಯೇ ಬಂದು ಸಾಲಿನಲ್ಲಿ ನಿಂತಿದ್ದೇವೆ. ಈಗ ನಮಗೆ ಬೇಕಾದ ಪಂದ್ಯದ ಟಿಕೆಟ್ ನೀಡ್ತಿಲ್ಲ ಎಂದು ಆಯೋಜಕರ ವಿರುದ್ಧ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.  (ದಿಗ್ವಿಜಯ ನ್ಯೂಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net