

ಬೆಂಗಳೂರು: ಕಳೆದ ಕೆಲ ದಿನಗಳಿಂದ ಸ್ಟಾರ್ ದಂಪತಿಗಳ ಸಂಸಾರದಲ್ಲಿ ಬಿರುಕು ಮೂಡುತ್ತಿದ್ದು, ವಿಚ್ಛೇದನದ (Divorce) ಮೊರೆ ಹೋಗುತ್ತಿದ್ದಾರೆ. ಯಜುವೇಂದ್ರ ಚಹಲ್ ಹಾಗೂ ಧನಶ್ರೀ ಡಿವೋರ್ಸ ವಿಚಾರ ಇನ್ನೂ ಮಾಸದಿರುವ ನಡುವೆಯೇ ಖ್ಯಾತ ಸ್ಟಾರ್ ಕ್ರಿಕೆಟಿಗರೊಬ್ಬರ (Star Cricketer) ಸಂಸಾರದಲ್ಲಿ ಬಿರುಕು ಮೂಡಿದ್ದು, ವಿಚ್ಛೇದನ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕರ್ನಾಟಕ ಮೂಲದ ಕ್ರಿಕೆಟಗ ಮನೀಷ್ ಪಾಂಡೆ (Manish Pandey) ಹಾಗೂ ಅವರ ಪತ್ನಿ ಆಶ್ರಿತಾ ಶೆಟ್ಟಿ (Ashrita Shetty) ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಈ ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಇದಕ್ಕೆ ಪುಷ್ಠಿ ಎಂಬಂತೆ ದಂಪತಿಗಳು ಸಾಮಾಜಿಕ ಜಾಲತಾಣದಲ್ಲಿ ಒಬ್ಬರನ್ನೊಬ್ಬರು ಅನ್ಫಾಲೋ ಮಾಡಿ ಜತೆಗಿರುವ ಫೋಟೋಗಳನ್ನು ಡಿಲೀಟ್ ಮಾಡುವ ಮೂಲಕ ವಿಚ್ಛೇದನ ವದಂತಿಗೆ ಮತ್ತಷ್ಟು ಪುಷ್ಠಿ ನೀಡಿದ್ದಾರೆ.
2019ರಲ್ಲಿ ನಟಿ ಆಶ್ರಿತಾರೊಂದಿಗೆ ವೈವಾಹಿಕ ಜೀವನಕ್ಕೆ ಮನೀಷ್ ಪಾಂಡೆ (Manish Pandey) ಕಾಲಿಟ್ಟಿದ್ದರು. ಐಪಿಎಲ್ ಸಮಯದಲ್ಲಿ ಪತಿಯನ್ನು ಬೆಂಬಲಿಸಲು ಹಲವು ಬಾರಿ ಆಶ್ರಿತಾ ಅವರು ಮೈದಾನಕ್ಕೆ ಬಂದಿದ್ದರು. 2024ರಲ್ಲಿ ಕಲ್ಕತ್ತಾ ನೈಟ್ರೈಡರ್ಸ್ ತಂಡದ ಭಾಗವಾಗಿದ್ದ ಮನೀಷ್ರನ್ನು ಬೆಂಬಲಿಸಲು ಆಶ್ರಿತಾ ಮೈದಾನದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದಲ್ಲದೆ ತಂಡ ಚಾಂಪಿಯನ್ ಆದರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಪೋಸ್ಟ್ ಹಾಕಿರಲಿಲ್ಲ. ಈ ವಿಚಾರ ಹಲವು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿತ್ತು. ಇದೀಗ ದಂಪತಿಗಳು ವಿಚ್ಛೇದನ ಪಡೆಯಲು ಮುಂದಾಗಿದ್ದು, ಅಭಿಮಾನಿಗಳಿಗೆ ಈ ವಿಚಾರ ಬೇಸರವನ್ನು ಉಂಟು ಮಾಡಿದೆ.
2015ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಮನೀಷ್ ಪಾಂಡೆ (Manish Pandey) 68 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಐಪಿಎಲ್‌ನಲ್ಲಿ ಕೆಕೆಆರ್ ತಂಡಕ್ಕಾಗಿ ಆಡಲು ಸಜ್ಜಾಗಿದ್ದಾರೆ. 2025ರ ಮೆಗಾ ಹರಾಜಿನಲ್ಲಿ ಮನೀಶ್ ಪಾಂಡೆ ಅವರನ್ನು ಕೆಕೆಆರ್ 75 ಲಕ್ಷ ರೂಪಾಯಿ ನೀಡಿ ಖರೀದಿ ಮಾಡಿದೆ.