43 ದಿನಗಳ ವಿರಾಮದ ಬಳಿಕ ಮರಳಿ ಕಣಕ್ಕಿಳಿಯಲಿದೆ ಟೀಮ್​ ಇಂಡಿಯಾ; ಇಂದಿನಿಂದ ಬಾಂಗ್ಲಾ ಎದುರು ಟೆಸ್ಟ್​ ಸರಣಿ

web ind vs ban
Published on

ಚೆನ್ನೈ: ಟೀಮ್​ ಇಂಡಿಯಾ ಬರೋಬ್ಬರಿ 43 ದಿನಗಳ ವಿಶ್ರಾಂತಿಯ ಬಳಿಕ ಮರಳಿ ಕಣಕ್ಕಿಳಿಯಲು ಸಜ್ಜಾಗಿದೆ. ಪ್ರವಾಸಿ ಬಾಂಗ್ಲಾದೇಶ ವಿರುದ್ಧ ಭಾರತ ತಂಡ ಗುರುವಾರದಿಂದ ಎರಡು ಪಂದ್ಯಗಳ ಟೆಸ್ಟ್​ ಸರಣಿ ಆಡಲಿದ್ದು, ಚೆಪಾಕ್​ನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮೊದಲ ಹಣಾಹಣಿ ನಡೆಯಲಿದೆ. ಟಿ20 ವಿಶ್ವಕಪ್​ ಗೆಲುವಿನ ಸಂಭ್ರಮದ ಬಳಿಕ ರೋಹಿತ್​ ಶರ್ಮ ಬಳಗ ಮುಂದಿನ ಮೂರೂವರೆ ತಿಂಗಳ ಅವಧಿಯಲ್ಲಿ 10 ಟೆಸ್ಟ್​ ಆಡುವ ಸವಾಲು ಹೊಂದಿದೆ. ಜತೆಗೆ ಸತತ 3ನೇ ಮೂರನೇ ಬಾರಿಗೆ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್ ಫೈನಲ್​ ಪ್ರವೇಶಿಸುವುದು ಪ್ರಮುಖ ಗುರಿಯಾಗಿದೆ. ಹೊಸ ಕೋಚ್​ ಗೌತಮ್​ ಗಂಭೀರ್​ಗೆ ಇದು ತವರಿನಲ್ಲಿ ಮೊದಲ ಸವಾಲೆನಿಸಿದೆ.

ಭಾರತ ತಂಡ ಕಳೆದ ದಶಕದಲ್ಲಿ ತವರಿನಲ್ಲಿ ಆಡಿದ 44 ಟೆಸ್ಟ್​ಗಳಲ್ಲಿ 40ರಲ್ಲಿ ಗೆದ್ದು, 4ರಲ್ಲಿ ಮಾತ್ರ ಸೋಲುವ ಮೂಲಕ ಪ್ರಾಬಲ್ಯ ಮೆರೆದಿದೆ. ಆಸ್ಟ್ರೆಲಿಯಾ, ಇಂಗ್ಲೆಂಡ್​, ದಣ ಆಫ್ರಿಕಾದಂಥ ಬಲಿಷ್ಠ ತಂಡಗಳನ್ನೂ ಹಿಮ್ಮೆಟ್ಟಿಸಿದೆ. ಅಲ್ಲದೆ ಬಾಂಗ್ಲಾ ವಿರುದ್ಧದ ಹಿಂದಿನ ದಾಖಲೆಗಳನ್ನು ಪರಿಗಣಿಸಿದಾಗಲೂ ಭಾರತವೇ ಸರಣಿಯ ಹಾಟ್​ ಫೇವರಿಟ್​ ತಂಡವಾಗಿದೆ. ಆದರೆ ಬಾಂಗ್ಲಾ ತಂಡ ಇತ್ತೀಚೆಗೆ ಪಾಕಿಸ್ತಾನದಲ್ಲಿ 2-0ಯಿಂದ ಸರಣಿ ಗೆದ್ದ ವಿಶ್ವಾಸದಲ್ಲಿದೆ. ಹೀಗಾಗಿ ಭಾರತ ತಂಡ ಎದುರಾಳಿಯನ್ನು ಲುವಾಗಿ ಪರಿಗಣಿಸದೆ ಎಚ್ಚರಿಕೆಯಿಂದ ಆಡಬೇಕಾಗಿದೆ.

ಭಾರತ ತಂಡ ಬರೋಬ್ಬರಿ 6 ತಿಂಗಳ ಬಳಿಕ ಟೆಸ್ಟ್​ ಪಂದ್ಯ ಆಡಲಿದೆ. ಕಳೆದ ಮಾರ್ಚ್​ನಲ್ಲಿ ತವರಿನಲ್ಲೇ ಇಂಗ್ಲೆಂಡ್​ ವಿರುದ್ಧ ಕೊನೆಯದಾಗಿ ಆಡಿತ್ತು ಮತ್ತು ಬಾಜ್​ಬಾಲ್​ ಸವಾಲಿನ ಆ ಸರಣಿಯಲ್ಲಿ 4-1ರಿಂದ ಗೆದ್ದು ಬೀಗಿತ್ತು. ನಂತರದಲ್ಲಿ ಐಪಿಎಲ್​&ಟಿ20 ವಿಶ್ವಕಪ್​ ಸಹಿತ ಭಾರತ ತಂಡದ ಆಟಗಾರರು ಬರೀ ವೈಟ್​ ಬಾಲ್​ನಲ್ಲೇ ಆಡುತ್ತ ಬಂದಿದ್ದಾರೆ. ಕೆಲ ಆಟಗಾರರು ಇತ್ತೀಚೆಗೆ ದುಲೀಪ್​ ಟ್ರೋಫಿಯಲ್ಲಿ ಆಡಿದ್ದರೂ, ರೋಹಿತ್​, ಕೊಹ್ಲಿ ಸಹಿತ ಪ್ರಮುಖರು ಸುದೀರ್ ಸಮಯದ ಬಳಿಕ ಕೆಂಪು ಬಣ್ಣದ ಚೆಂಡನ್ನು ಎದುರಿಸಲಿದ್ದಾರೆ.

ಸ್ಪಿನ್​ ಬೌಲಿಂಗ್​ ಸವಾಲು

ಭಾರತ ತಂಡ ಕಳೆದ ತಿಂಗಳು ಪ್ರಮುಖ ಬ್ಯಾಟರ್​ಗಳ ಹಾಜರಿಯ ನಡುವೆಯೂ ಶ್ರೀಲಂಕಾದಲ್ಲಿ ಆಡಿದ ಏಕದಿನ ಸರಣಿಯಲ್ಲಿ ಸೋತಿತ್ತು. ಇದಕ್ಕೆ ಕಾರಣ ಲಂಕಾ ಸ್ಪಿನ್ನರ್​ಗಳ ಎದುರು ಪರದಾಡಿದ್ದು. ಬಾಂಗ್ಲಾ ಕೂಡ ಎಡಗೈ ಸ್ಪಿನ್ನರ್​ಗಳಾದ ಶಕೀಬ್​ ಅಲ್​ ಹಸನ್​, ತೈಜುಲ್​ ಇಸ್ಲಾಂ, ಆ್​ ಸ್ಪಿನ್ನರ್​ ಮೆಹಿದಿ ಹಸನ್​ ಮಿರಾಜ್​ರಂಥ ಗುಣಮಟ್ಟದ ಸ್ಪಿನ್ನರ್​ಗಳನ್ನು ಹೊಂದಿದೆ. ಹೀಗಾಗಿ ಭಾರತೀಯ ಬ್ಯಾಟರ್​ಗಳು ಚೆನ್ನೆ$ನಲ್ಲಿ ನಡೆದ ಶಿಬಿರದಲ್ಲಿ ಸ್ಪಿನ್ನರ್​ಗಳ ವಿರುದ್ಧವೇ ಹೆಚ್ಚಿನ ಅಭ್ಯಾಸ ನಡೆಸಿದ್ದರು. ರೋಹಿತ್​, ಕೊಹ್ಲಿ, ಗಿಲ್​, ರಾಹುಲ್​, ಜೈಸ್ವಾಲ್​, ಪಂತ್​ರಂಥ ಪ್ರಮುಖ ಬ್ಯಾಟರ್​ಗಳಿರುವ ಭಾರತ ತಂಡಕ್ಕೆ ಬಾಂಗ್ಲಾ ಸ್ಪಿನ್ನರ್​ಗಳು ಎಷ್ಟರ ಮಟ್ಟಿಗೆ ಅಪಾಯಕಾರಿ ಆಗಬಲ್ಲರು ಎಂಬುದನ್ನು ಕಾದುನೋಡಬೇಕಿದೆ.

ಟೀಮ್​ ನ್ಯೂಸ್​:

ಭಾರತ: ಸರ್ಫ್ರಾಜ್​​ ಖಾನ್​ರನ್ನು ಹಿಮ್ಮೆಟ್ಟಿಸಿ ಕನ್ನಡಿಗ ಕೆಎಲ್​ ರಾಹುಲ್​ 5ನೇ ಕ್ರಮಾಂಕದಲ್ಲಿ ಆಡುವುದು ಖಚಿತವೆನಿಸಿದೆ. ಹೀಗಾಗಿ ಸದ್ಯ ಭಾರತ ತಂಡದ ಬೌಲಿಂಗ್​ ವಿಭಾಗದಲ್ಲಿ ಮಾತ್ರ ಸ್ವಲ್ಪ ಗೊಂದಲ ಉಳಿದಿದೆ. ಚೆನ್ನೈನ ಕೆಂಪು ಮಣ್ಣಿನ ಪಿಚ್​ ವೇಗಿಗಳಿಗೆ ನೆರವಾಗುವ ನಿರೀೆಯ ನಡುವೆಯೂ ಭಾರತ ತಂಡ ಇಬ್ಬರು ವೇಗಿಗಳ ಜತೆ ಮೂವರು ಸ್ಪಿನ್ನರ್​ಗಳನ್ನು ಆಡಿಸಲು ಬಯಸಿದ್ದು, 3ನೇ ಸ್ಪಿನ್ನರ್​ ಆಗಿ ಕುಲದೀಪ್​ ಯಾದವ್​ ಆಡಬಹುದು. ಸರಣಿಯಲ್ಲಿ ಬುಮ್ರಾ-ಸಿರಾಜ್​ಗೆ ಆವರ್ತನದಲ್ಲಿ ವಿಶ್ರಾಂತಿ ನೀಡುವ ಸಾಧ್ಯತೆ ಇದ್ದು, ಚೆನ್ನೆ$ನಲ್ಲಿ ಬುಮ್ರಾ ಜತೆಗೆ ಆಕಾಶ್​ದೀಪ್​ ಹೊಸ ಚೆಂಡು ಹಂಚಿಕೊಳ್ಳಬಹುದು.

ಸಂಭಾವ್ಯ ತಂಡ: ರೋಹಿತ್​ ಶರ್ಮ (ನಾಯಕ), ಯಶಸ್ವಿ ಜೈಸ್ವಾಲ್​, ಶುಭಮಾನ್​ ಗಿಲ್​, ವಿರಾಟ್​ ಕೊಹ್ಲಿ, ಕೆಎಲ್​ ರಾಹುಲ್​, ರಿಷಭ್​ ಪಂತ್​ (ವಿ.ಕೀ), ರವೀಂದ್ರ ಜಡೇಜಾ, ಆರ್​. ಅಶ್ವಿನ್​, ಕುಲದೀಪ್​ ಯಾದವ್​, ಜಸ್​ಪ್ರೀತ್​ ಬುಮ್ರಾ, ಮೊಹಮದ್​ ಸಿರಾಜ್​/ಆಕಾಶ್​ದೀಪ್​.

ಬಾಂಗ್ಲಾದೇಶ: ಇಬ್ಬರು ಸ್ಪಿನ್​ ಬೌಲಿಂಗ್​ ಆಲ್ರೌಂಡರ್​ಗಳೊಂದಿಗೆ ಬಾಂಗ್ಲಾ ಕಣಕ್ಕಿಳಿಯಲಿದೆ. ಪಾಕಿಸ್ತಾನದಲ್ಲಿ ಮೂವರು ವೇಗಿಗಳೊಂದಿಗೆ ಆಡಿದ್ದ ಬಾಂಗ್ಲಾ, ಚೆನ್ನೈ ಪಿಚ್​ ಸ್ಪಿನ್​ ಸ್ನೇಹಿಯಾಗಿರುವುದನ್ನು ಪರಿಗಣಿಸಿ 3ನೇ ಸ್ಪಿನ್ನರ್​ ಆಗಿ ತೈಜುಲ್​ ಇಸ್ಲಾಂಗೆ ಅವಕಾಶ ಕಲ್ಪಿಸಬಹುದು.

ಸಂಭಾವ್ಯ ತಂಡ: ಶಾದ್ಮನ್​ ಇಸ್ಲಾಂ, ಜಾಕಿರ್​ ಹಸನ್​, ನಜ್ಮುಲ್​ ಹೊಸೈನ್​ ಶಾಂಟೊ (ನಾಯಕ), ಮಾಮಿನುಲ್​ ಹಕ್​, ಮುಶ್ಫಿಕರ್​ ರಹೀಂ, ಶಕೀಬ್​ ಅಲ್​ ಹಸನ್​, ಲಿಟನ್​ ದಾಸ್​ (ವಿ.ಕೀ), ಮೆಹಿದಿ ಹಸನ್​ ಮಿರಾಜ್​, ತೈಜುಲ್​ ಇಸ್ಲಾಂ, ಟಸ್ಕಿನ್​ ಅಹ್ಮದ್​, ನಹಿದ್​ ರಾಣಾ.

*ಆರಂಭ: ಬೆಳಗ್ಗೆ 9.30

*ನೇರಪ್ರಸಾರ: ಸ್ಪೋರ್ಟ್ಸ್​18, ಜಿಯೋಸಿನಿಮಾ

ಮುಖಾಮುಖಿ: 13

ಭಾರತ: 11

ಬಾಂಗ್ಲಾ: 0

ಡ್ರಾ: 2

*ನಮ್ಮ ಬ್ಯಾಟಿಂಗ್​ ವಿಭಾಗ ಯಾವುದೇ ಸ್ಪಿನ್​ ದಾಳಿಯನ್ನು ಸಮರ್ಥವಾಗಿ ಎದುರಿಸಬಲ್ಲ ಗುಣಮಟ್ಟ ಹೊಂದಿದೆ. ನಾವು ಯಾವುದೇ ಎದುರಾಳಿಯನ್ನು ಲುವಾಗಿ ಪರಿಗಣಿಸುವುದಿಲ್ಲ. ಬಾಂಗ್ಲಾ ತಂಡ ಪಾಕಿಸ್ತಾನದಲ್ಲಿ ಗೆದ್ದಿರುವುದಕ್ಕೆ ಅಭಿನಂದನೆಗಳು. ಆದರೆ ಇದು ಹೊಸ ಸರಣಿ ಮತ್ತು ಅವರಿಗೆ ನಾವು ಹೊಸ ಎದುರಾಳಿ. ಟೆಸ್ಟ್​ನಲ್ಲಿ ಎಲ್ಲ 20 ವಿಕೆಟ್​ ವಿಕೆಟ್​ ಕಬಳಿಸಬಲ್ಲಂಥ ಬೌಲಿಂಗ್​ ವಿಭಾಗ ನಮ್ಮ ಬಳಿ ಇದೆ.

| ಗೌತಮ್​ ಗಂಭೀರ್​, ಟೀಮ್​ ಇಂಡಿಯಾ ಕೋಚ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net