

ಟ್ರನಿಡಾಡ್: ಇಲ್ಲಿನ ಬ್ರಯನ್ ಲಾರಾ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ನ ಮೊದಲ ಸಮಿಫೈನಲ್ನಲ್ಲಿ ಅಫ್ಘಾನಿಸ್ತಾನ ತಂಡವು ದಕ್ಷಿಣ ಆಫ್ರಿಕಾ ಎದುರು ಸೋಲುಂಡಿದ್ದು, ಮೊದಲ ಬಾರಿಗೆ ಫೈನಲ್ ಪ್ರವೇಶಿಸುವ ಆಸೆ ಭಗ್ನಗೊಂಡಿದೆ. ವಿಶ್ವಕ್ರಿಕೆಟ್ನಲ್ಲಿ ಚೋಕರ್ಸ್ ಎಂಬ ಹಣೆಪಟ್ಟಿಯನ್ನು ಹೊಂದಿದ್ದ ದಕ್ಷಿಣ ಆಫ್ರಿಕಾ ತಂಡವು ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ.
ಇನ್ನೂ ಸೆಮಿಫೈನಲ್ನಲ್ಲಿ ಅಫ್ಘಾನಿಸ್ತಾನ ಸೋಲಲು ಭಾರತ ಕಾರಣ ಎಂದು ಮಾಜಿ ಕ್ರಿಕೆಟಿಗರೊಬ್ಬರು ಆರೋಪಿಸಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ಅಫ್ಘಾನಿಸ್ತಾನ್ ತಂಡ ಸೋಲಲು ವೇಳಾಪಟ್ಟಿಯೇ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು ಅಫ್ಘಾನಿಸ್ತಾನ ಸೋಲಲು ಭಾರತ ಕಾರಣ ಎಂದು ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿರುವ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಮೈಕೆಲ್ ವಾನ್, ಬಾಂಗ್ಲಾದೇಶದ ವಿರುದ್ಧ ಸೂಪರ್-8 ಪಂದ್ಯದಲ್ಲಿ ಗೆದ್ದ ಅಫ್ಘಾನಿಸ್ತಾನ್ ತಂಡಕ್ಕೆ ಕೇವಲ ಒಂದು ದಿನದ ಸಮಯವಕಾಶ ನೀಡಲಾಗಿದೆ. ಜೂನ್ 25 ರಂದು ಪಂದ್ಯ ಮುಗಿಸಿ ಜೂನ್ 26 ರಂದು ಅಫ್ಘಾನಿಸ್ತಾನ್ ತಂಡ ಸೆಮಿಫೈನಲ್ ಆಡಲು ಟ್ರಿನಿಡಾಡ್ಗೆ ಬಂದಿಳಿದಿದೆ. ಇದರಿಂದ ಅಫ್ಘಾನ್ ತಂಡಕ್ಕೆ ಅಭ್ಯಾಸ ಮಾಡಲು ಸಮಯ ಸಿಕ್ಕಿಲ್ಲ. ನನ್ನ ಪ್ರಕಾರ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಮೊದಲು ನಡೆಯಬೇಕಿತ್ತು. ಆದರೆ ಭಾರತ ತಂಡಕ್ಕೆ ಅನುಕೂಲವಾಗುವಂತೆ 2ನೇ ಸೆಮಿಫೈನಲ್ನಲ್ಲಿ ಟೀಮ್ ಇಂಡಿಯಾವನ್ನು ಇರಿಸಲಾಗಿದೆ. ಇದು ಪಕ್ಷಪಾತ ಧೋರಣೆ, ಇದರಿಂದ ಇತರೆ ತಂಡಗಳಿಗೆ ಅನ್ಯಾಯವಾಗಿದೆ.
ಇಲ್ಲಿ ಭಾರತ ತಂಡಕ್ಕೆ ಅನುಕೂಲವಾಗುವಂತೆ ಸೆಮಿಫೈನಲ್ ವೇಳಾಪಟ್ಟಿಯನ್ನು ಮೊದಲೇ ನಿರ್ಧರಿಸಲಾಗಿದ್ದು, ಇದರಿಂದ ಉಳಿದ ತಂಡಗಳಿಗೆ ಅನ್ಯಾಯವಾಗಿರುವುದು ಸ್ಪಷ್ಟ. ಅದರಲ್ಲೂ ಇದೇ ಮೊದಲ ಬಾರಿಗೆ ಸೆಮಿಫೈನಲ್ಗೆ ಪ್ರವೇಶಿಸಿದ್ದ ಅಫ್ಘಾನಿಸ್ತಾನ್ ತಂಡವನ್ನು ಸೂಪರ್-8 ಪಂದ್ಯದ ಮುಕ್ತಾಯದ ಬೆನ್ನಲ್ಲೇ ಸೆಮಿಫೈನಲ್ ಆಡಿಸಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ತಂಡಗಳು ಅಫ್ಘಾನಿಸ್ತಾನ ತಂಡದ ಕೊನೆಯ ಪಂದ್ಯಕ್ಕೂ ಮುನ್ನವೇ ಸೂಪರ್-8 ಪಂದ್ಯಗಳನ್ನು ಮುಗಿಸಿತ್ತು. ಹೀಗಾಗಿ ಮೊದಲ ಸೆಮಿಫೈನಲ್ ಪಂದ್ಯವು ಇಂಗ್ಲೆಂಡ್ ಮತ್ತು ಇಂಡಿಯಾ ನಡುವೆ ನಡೆಯಬೇಕಿತ್ತು. ಆದರೆ ಭಾರತದ ಪರ ಪಕ್ಷಪಾತ ಮಾಡಿರುವ ಕಾರಣ ಅಫ್ಘಾನಿಸ್ತಾನ ತಂಡಕ್ಕೆ ಅನ್ಯಾಯವಾಗಿದೆ ಎಂದು ಮೈಕಲ್ ವಾನ್ ಹೇಳಿದ್ದಾರೆ.