ಟಿ20 ವಿಶ್ವಕಪ್ ಮುಂದೂಡಿದ ಐಸಿಸಿ ನಿರ್ಧಾರವನ್ನು ಸ್ವಾಗತಿಸಿದ ಆಸ್ಟ್ರೇಲಿಯಾ

aus cricket
Published on

ಮೆಲ್ಬೋರ್ನ್: ಕರೊನಾ ಹಾವಳಿಯಿಂದಾಗಿ ಈ ವರ್ಷದ ಟಿ20 ವಿಶ್ವಕಪ್ ಮುಂದೂಡಿರುವ ಐಸಿಸಿ ಕ್ರಮವನ್ನು ಆತಿಥೇಯ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಸ್ವಾಗತಿಸಿದೆ. ಹಾಲಿ ಪರಿಸ್ಥಿತಿಯಲ್ಲಿ 16 ತಂಡಗಳ ಟೂರ್ನಿಯನ್ನು ಆಯೋಜಿಸುವುದು ಅಪಾಯಕಾರಿಯಾಗಿತ್ತು ಎಂದು ಸಿಎ ಮತ್ತೊಮ್ಮೆ ಪ್ರತಿಪಾದಿಸಿದೆ.

ಕಳೆದ 2 ತಿಂಗಳಿನಿಂದಲೂ ಟಿ20 ವಿಶ್ವಕಪ್ ಟೂರ್ನಿಯ ಭವಿಷ್ಯ ನಿರ್ಧರಿಸದೆ ಗೊಂದಲ ಹರಡಿದ್ದ ಐಸಿಸಿ, ಸೋಮವಾರದ ಸಭೆಯಲ್ಲಿ ಕೊನೆಗೂ ವಿಶ್ವಕಪ್ ಮುಂದೂಡಿದೆ. ಆದರೆ, 2021 ಮತ್ತು 2022ರಲ್ಲಿ ಸತತ 2 ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ಟಿ20 ವಿಶ್ವಕಪ್ ನಡೆಯಲಿದೆ ಎಂದು ಐಸಿಸಿ ತಿಳಿಸಿದ್ದರೂ, ಆಸ್ಟ್ರೇಲಿಯಾದಲ್ಲಿ ಯಾವಾಗ ಟೂರ್ನಿ ಮರುನಿಗದಿಯಾಗಲಿದೆ ಎಂದು ಸ್ಪಷ್ಟಪಡಿಸಿಲ್ಲ. ಹಾಲಿ ವೇಳಾಪಟ್ಟಿ ಪ್ರಕಾರ 2021ರ ಟಿ20 ವಿಶ್ವಕಪ್ ಭಾರತದಲ್ಲಿ ನಡೆಯಬೇಕಿದೆ.

‘ಕರೊನಾದಿಂದಾಗಿ ಜಗತ್ತಿನೆಲ್ಲೆಡೆ ಕ್ರೀಡಾ ಚಟುವಟಿಕೆಗಳಿಗೆ ಹೊಡೆತ ಬಿದ್ದಿದೆ. ಕ್ರಿಕೆಟ್ ಕೂಡ ಅದರಿಂದ ಹೊರತಲ್ಲ. ಹಾಲಿ ಪರಿಸ್ಥಿತಿಯಲ್ಲಿ 16 ತಂಡಗಳ ಅಂತಾರಾಷ್ಟ್ರೀಯ ಟೂರ್ನಿ ಆಯೋಜಿಸುವುದು ಸುರಕ್ಷಿತವಲ್ಲ. ಐಸಿಸಿ ಟೂರ್ನಿ ಮುಂದೂಡುವ ಸೂಕ್ತ ನಿರ್ಧಾರವನ್ನೇ ಕೈಗೊಂಡಿದೆ. ಆಟಗಾರರು, ಅಧಿಕಾರಿಗಳು, ಅಭಿಮಾನಿಗಳ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಸಿಎ ಮತ್ತು ಟಿ20 ವಿಶ್ವಕಪ್ ಟೂರ್ನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಕ್ ಹಾಕ್ಲೆ ತಿಳಿಸಿದ್ದಾರೆ.

ಟಿ20 ವಿಶ್ವಕಪ್ ಈ ವರ್ಷ ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ನಿಗದಿಯಾಗಿತ್ತು. 2021 ಅಥವಾ 2022ರಲ್ಲಿ ಟೂನಿಯಲ್ಲಿ ಆಯೋಜಿಸಲು ಸಿದ್ಧವಾಗಿರುವುದಾಗಿ ಹಾಕ್ಲೆ ತಿಳಿಸಿದ್ದಾರೆ. ಡಿಸೆಂಬರ್-ಜನವರಿಯಲ್ಲಿ ಪ್ರವಾಸಿ ಭಾರತ ತಂಡದ ವಿರುದ್ಧದ ಸರಣಿಯ ಆಯೋಜನೆಗೆ ಆಸ್ಟ್ರೇಲಿಯಾ ಸಜ್ಜಾಗುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net