

ಹರಾರೆ: ಟೀಮ್ ಇಂಡಿಯಾ ಮತ್ತು ಜಿಂಬಾಬ್ವೆ ನಡುವಿನ ಟಿ20 ಸರಣಿ ಹರಾರೆಯಲ್ಲಿ ಆರಂಭಗೊಂಡಿದ್ದು, ಶುಭಮನ್ ಗಿಲ್ ನಾಯಕತ್ವದಲ್ಲಿ ಭಾರತ ತಂಡ ಮೊದಲ ಪಂದ್ಯದಲ್ಲಿ ಹೀನಾಯ ಸೋಲನ್ನು ಕಂಡಿತು. ತನ್ನ ಡೆಬ್ಯೂ ಮ್ಯಾಚ್ನಲ್ಲಿಯೇ ಡಕ್ ಔಟ್ ಆಗಿ ಪೆವಿಲಿಯನ್ನತ್ತ ಸಾಗಿದ ಯುವ ಬ್ಯಾಟರ್ ಅಭಿಷೇಕ್ ಶರ್ಮ ಮೇಲೆ ಟೀಮ್ ಮ್ಯಾನೇಜ್ಮೆಂಟ್ ಮತ್ತು ಮಾಜಿ ಕ್ರಿಕೆಟಿಗರು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ಆದ್ರೆ, ಇಂದು (ಜು.07) ನಡೆಯುತ್ತಿರುವ ಎರಡನೇ ಟಿ20 ಪಂದ್ಯದಲ್ಲಿ ಆ ನಿರೀಕ್ಷೆಗಳನ್ನು ಉಳಿಸಿಕೊಂಡ ಅಭಿಷೇಕ್ ಆಕರ್ಷಕ ಶತಕ ಸಿಡಿಸುವ ಮೂಲಕ ಜಿಂಬಾಬ್ವೆ ಬೌಲರ್ಗಳಿಗೆ ಬೆವರಿಳಿಸಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆಮಾಡಿಕೊಂಡ ಟೀಮ್ ಇಂಡಿಯಾ, ಜಿಂಬಾಬ್ವೆ ತಂಡಕ್ಕೆ ಬೌಲಿಂಗ್ ಮಾಡುವಂತೆ ತಿಳಿಸಿತು. ಅದರಂತೆಯೇ ಮೊದಲ ಬೌಲ್ ಮಾಡಿದ ಜಿಂಬಾಬ್ವೆ ವಿರುದ್ಧ ಕ್ಯಾಪ್ಟನ್ ಶುಭಮನ್ ಗಿಲ್ ಅಬ್ಬರಿಸುವಲ್ಲಿ ವಿಫಲರಾದರು. 4 ಎಸೆತಗಳಲ್ಲಿ ಕೇವಲ 2 ರನ್ ಗಳಿಸಿ, ಔಟ್ ಆದ ಗಿಲ್, ತಂಡಕ್ಕೆ ಆಸರೆಯಾಗಿ ನಿಲ್ಲಲಿಲ್ಲ. ಇನ್ನು ನಾಯಕನ ಜತೆ ಓಪನಿಂಗ್ ಬಂದ ಶರ್ಮ, ಕೇವಲ 47 ಎಸೆತಗಳಲ್ಲಿ 100 ಸಿಡಿಸಿದ ಅಭಿಷೇಕ್, ಏಳು ಬೌಂಡರಿ ಮತ್ತು 8 ಸಿಕ್ಸರ್ಗಳನ್ನು ಬಾರಿಸಿದರು. ಈ ಮೂಲಕ ತಮ್ಮ ಮೇಲಿಟ್ಟಿದ್ದ ನಿರೀಕ್ಷೆಯನ್ನು ಅವರು ಹುಸಿ ಮಾಡಲಿಲ್ಲ.
ತಂಡದ ಪರ ಭರ್ಜರಿ ಶತಕ ಸಿಡಿಸಿದ ಅಭಿಷೇಕ್, ಈ ಮೂಲಕ ಸಖತ್ ಕಮ್ಬ್ಯಾಕ್ ಮಾಡಿದ್ದಾರೆ. ಅಭಿಷೇಕ್ ಅಬ್ಬರದ ಬೆನ್ನಲ್ಲೇ ಪ್ರಸ್ತುತ ಬ್ಯಾಟಿಂಗ್ ಮಾಡುತ್ತಿರುವ ರುತುರಾಜ್ ಗಾಯಕ್ವಾಡ್ ಕೂಡ ಆಕರ್ಷಕ ಇನ್ನಿಂಗ್ಸ್ ಕೊಡುಗೆ ನೀಡಿದ್ದು, 45 ಎಸೆತಗಳಲ್ಲಿ 72* ರನ್ ಗಳಿಸಿ, ತಂಡಕ್ಕೆ ದೊಡ್ಡ ಮೊತ್ತವನ್ನು ಕಲೆಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.