

ಬೆಂಗಳೂರು: ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತೀಯ ಹಾಕಿ ತಂಡ 8 ಸ್ವರ್ಣ ಪದಕಗಳನ್ನು ಜಯಿಸಿದ್ದರೂ, ವೈಯಕ್ತಿಕ ವಿಭಾಗದಲ್ಲಿ ಭಾರತಕ್ಕೆ ಸ್ವರ್ಣ ಪದಕ ಗಗನಕುಸುಮವೆನಿಸಿತ್ತು. 2008ರಲ್ಲಿ ಈ ಕೊರತೆಯನ್ನು ನೀಗಿಸಿದವರು ಶೂಟರ್ ಅಭಿನವ್ ಬಿಂದ್ರಾ. ಅವರು ಒಲಿಂಪಿಕ್ಸ್ ಇತಿಹಾಸದಲ್ಲಿ ವೈಯಕ್ತಿಕ ಸ್ವರ್ಣ ಪದಕ ಜಯಿಸಿದ ಮೊದಲ ಭಾರತೀಯರೆನಿಸಿಕೊಂಡ ಐತಿಹಾಸಿಕ ಸಾಧನೆಗೆ ಮಂಗಳವಾರ (ಆಗಸ್ಟ್ 11) 12 ವರ್ಷಗಳು ಪೂರ್ಣಗೊಂಡಿವೆ.
2008ರ ಬೀಜಿಂಗ್ ಒಲಿಂಪಿಕ್ಸ್ನ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಅಭಿನವ್ ಬಿಂದ್ರಾ ಸ್ವರ್ಣ ಪದಕಕ್ಕೆ ಗುರಿ ಇಟ್ಟು ಭಾರತೀಯ ಕ್ರೀಡಾಲೋಕದಲ್ಲಿ ಹೊಸ ಮೈಲುಗಲ್ಲು ಬರೆದಿದ್ದರು. ಕಳೆದ 12 ವರ್ಷಗಳಲ್ಲೂ ಭಾರತೀಯ ಕ್ರೀಡಾಪಟುಗಳಿಗೆ ಒಲಿಂಪಿಕ್ಸ್ ಸ್ವರ್ಣ ಪದಕ ಒಲಿದು ಬಂದಿಲ್ಲ. ಇದು ಬಿಂದ್ರಾ ಅವರ ಸ್ವರ್ಣ ಸಾಧನೆಯನ್ನು ಇನ್ನಷ್ಟು ವಿಶೇಷಗೊಳಿಸಿದೆ.
22 ವರ್ಷಗಳ ಶೂಟಿಂಗ್ ವೃತ್ತಿಜೀವನದಲ್ಲಿ ಅಭಿನವ್ ಬಿಂದ್ರಾ ಅವರು 150ಕ್ಕೂ ಅಧಿಕ ಪದಕಗಳನ್ನು ಜಯಿಸಿದ್ದಾರೆ. ಆದರೆ ಅವರ ಈ ಸ್ವರ್ಣ ಪದಕ ಗೆಲುವಿಗೆ ಯಾವ ಪದಕವೂ ಸಾಟಿಯಾಗಲಾರದು. ಉತ್ತರಾಖಂಡ ಮೂಲದವರಾದ ಬಿಂದ್ರಾ ಕುಟುಂಬ ಈಗ ಪಂಜಾಬ್ನಲ್ಲಿ ನೆಲೆಸಿದೆ. 15ನೇ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಶೂಟಿಂಗ್ ಸ್ಪರ್ಧೆ ಆರಂಭಿಸಿದ್ದ ಬಿಂದ್ರಾ, 2000ದ ಸಿಡ್ನಿ ಒಲಿಂಪಿಕ್ಸ್ನಲ್ಲಿ ಅತ್ಯಂತ ಕಿರಿಯ ಭಾರತೀಯರಾಗಿ ಸ್ಪರ್ಧಿಸಿದ್ದರು. 2004ರ ಅಥೆನ್ಸ್ ಒಲಿಂಪಿಕ್ಸ್ನಲ್ಲಿ ಅವರು ಒಲಿಂಪಿಕ್ಸ್ ದಾಖಲೆ ಬರೆದಿದ್ದರೂ, ಪದಕ ಒಲಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. ಆ ನೋವಿನ ಬಳಿಕ ಅವರಲ್ಲಿ ಒಲಿಂಪಿಕ್ಸ್ ಸ್ವರ್ಣ ಪದಕ ಗೆಲುವಿನ ತುಡಿತ ಇನ್ನಷ್ಟು ಹೆಚ್ಚಾಗಿತ್ತು. 2016ರ ರಿಯೋ ಒಲಿಂಪಿಕ್ಸ್ ಬಳಿಕ ನಿವೃತ್ತಿ ಹೊಂದಿರುವ ಬಿಂದ್ರಾ ಅವರು ಈಗ ಉದ್ಯಮಿಯಾಗಿದ್ದಾರೆ.
ಇದನ್ನೂ ಓದಿ: ಕ್ರೀಡಾತಾರೆಯರಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು
'ಒಲಿಂಪಿಕ್ಸ್ ಸ್ವರ್ಣ ಪದಕ ಈಗ ನನ್ನ ಅಮ್ಮನ ಕೋಣೆಯಲ್ಲಿ ಇರುತ್ತಿತ್ತು. ಇದೀಗ ಅದನ್ನು ನನ್ನ ಟ್ರೋಫಿಗಳು ಮತ್ತು ಸ್ಕೋರ್ ಶೀಟ್ಗಳಿಗೆಂದೇ ಮೀಸಲಾದ ಕೋಣೆಯಲ್ಲಿ ಇಡಲಾಗಿದೆ. ನಾನು ಅದನ್ನು ಆಗಾಗ ಸ್ಪರ್ಶಿಸುತ್ತಿರುತ್ತೇನಾ ಎಂದು ಜನರು ಕೇಳುತ್ತಿರುತ್ತಾರೆ. ಅದಕ್ಕೆ ನನ್ನ ಉತ್ತರ ಇಲ್ಲ ಎಂದಾಗಿರುತ್ತದೆ. ನಾನು ಆ ಸ್ವರ್ಣ ಪದಕಕ್ಕಾಗಿ ಹಲವಾರು ಕಷ್ಟಗಳನ್ನು ಎದುರಿಸಿದ್ದೇನೆ. ಅದನ್ನು ಗೆದ್ದ ಬಳಿಕ ಅದರ ಅನುಭವ ಪಡೆದಿದ್ದೇನೆ. ಅದೊಂದು ಪ್ರಯಾಣವಾಗಿತ್ತು. ಪದಕ ಆ ಒಂದು ಕ್ಷಣಕ್ಕಾಗಿತ್ತು. 2 ಗಂಟೆಗಳ ಶೂಟಿಂಗ್ಗೆ ಒಲಿದ ಬಹುಮಾನ ಅದಾಗಿತ್ತು. ಆದರೆ ಕ್ರೀಡಾಪಟುಗಳಿಗೆ ಆ ಗೆಲುವಿನ ಕ್ಷಣವಷ್ಟೇ ವಿಷಯವಾಗುವುದಿಲ್ಲ. ಆಗ ಗೆಲುವಿಗೆ 4, ಬಹುಶ 8 ವರ್ಷಗಳ ಶ್ರಮವಿದೆ. 250 ಅಂತಾರಾಷ್ಟ್ರೀಯ ವಿಮಾನಗಳ ಪ್ರಯಾಣವಿದೆ. ನಾನಿದನ್ನೂ ಸಾಧಿಸಬಲ್ಲೆ ಎಂಬ 600 ಕ್ಷಣಗಳಿವೆ. ನೂರಾರು ತಾಂತ್ರಿಕ ಬದಲಾವಣೆಗಳಿವೆ. 50ಕ್ಕೂ ಅಧಿಕ ಸೋಲಿನ ರುಚಿಗಳಿವೆ. ಅದರ ಹಿಂದೆ ಸಾಕಷ್ಟು ಆಂತರಿಕ ಸಂಕಷ್ಟಗಳಿವೆ. ತಾಳ್ಮೆಯ ಕೋಚ್ಗಳ ಶ್ರಮವಿದೆ. ಕನಸೊಂದು ನನಸಾಗುವ ಹಿಂದೆ ಬೆವರಿನಲ್ಲಿ ಮುಳುಗಿ ಮೇಲೆದ್ದ ಪರಿಶ್ರಮವಿದೆ. ಕ್ರೀಡಾಪಟುಗಳಿಗೆ ಅದುವೇ ಹೆಚ್ಚು ಅರ್ಥಪೂರ್ಣವಾಗಿರುತ್ತದೆ' ಎಂದು ಅಭಿನವ್ ಬಿಂದ್ರಾ ಅವರು ಈ ಹಿಂದೊಮ್ಮೆ ಸ್ವರ್ಣ ಪದಕ ಗೆಲುವಿನ ಪ್ರಯಾಣದ ಬಗ್ಗೆ ಹೇಳಿಕೊಂಡಿದ್ದರು.
ಬಿಂದ್ರಾ ಸ್ವರ್ಣ ಪದಕ ಗೆಲುವಿನ ಸಾಧನೆಗೆ 12 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಕ್ರೀಡಾತಾರೆಯರು ಮತ್ತು ಅಭಿಮಾನಿಗಳು ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಮಾಜಿ ಕ್ರಿಕೆಟಿಗ ಮೊಹಮದ್ ಕೈಫ್ ಕೂಡ ಬಿಂದ್ರಾ ಸ್ವರ್ಣ ಸಾಧನೆಯನ್ನು ನೆನಪು ಮಾಡಿಕೊಂಡಿದ್ದಾರೆ.